ತುರುವೇಕೆರೆ :
ರೈತರ ಹಾಗೂ ಕಾರ್ಮಿಕರ ಕಾನೂನನ್ನು ತಿದ್ದುಪಡಿ ಮಾಡಿ ಜಾರಿಗೆ ತಂದಿರುವುದನ್ನು ಕೇಂದ್ರ ಸರ್ಕಾರ ಪುನರ್ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ರೈತ ಸಂಘದ ಶ್ರೀನಿವಾಸ್ ಗೌಡ ಮಾತನಾಡಿ, ಕೇಂದ್ರ ಸರ್ಕಾರ ಪ್ರಮುಖ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸುವ ಮೂಲಕ ರೈತರು ಮತ್ತು ಕಾರ್ಮಿಕರನ್ನು ಜೀತದಾಳುನ್ನಾಗಿಸಲು ಹೊರಟಿದೆ. ಸ್ವಾವಲಂಭಿ ಭಾರತ ಮಾಡುವುದಾಗಿ ಹೇಳುವ ಪ್ರಧಾನಿ ನರೇಂದ್ರ ಮೋದಿಯವರ ಮಾತು ಕೇವಲ ಬೂಟಾಟಿಕೆ ಎಂದರು.
ಸಿಐಟಿಯು ಕಾರ್ಯದರ್ಶಿ ಟಿ.ಹೆಚ್.ಸತೀಶ್ ಮಾತನಾಡಿ, ನಮ್ಮ ಬಹುದಿನದ ಬೇಡಿಕೆಗಳನ್ನು ಈಡೇರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿದ್ದು ಬೇಡಿಕೆ ಈಡೇರುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ಶ್ರೀ ವಿದ್ಯಾಗಣಪತಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಮಂಜುನಾಥ್, ಜಯಕುಮಾರ್, ಶಿವಣ್ಣ, ಅಂಗನವಾಡಿ ನೌಕರರಾದ ಮಂಜುಳಾ ಕುಮಾರಿ, ಜ್ಯೋತಿ, ಆಶಾ, ಬಿಸಿಯೂಟ ನೌಕರರ ಸಂಘದ ಶಾಂತಮ್ಮ, ಪಾರ್ವತಮ್ಮ, ಸಾವಿತ್ರಮ್ಮ, ಪಂಚಾಯ್ತಿ ನೌಕರರ ಸಂಘದ ರಂಗನಾಥ್, ತಿಮ್ಮೇಗೌಡ ಸೇರಿದಂತೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ನೂರಾರು ಕಾರ್ಯಕರ್ತರು ಹಾಗೂ ಕಾರ್ಯಕರ್ತೆಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೇಂದ್ರದ ವಿರೋಧಿ ಕಾಯ್ದೆಗಳ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು.
ನಂತರ ತಾಲ್ಲೂಕು ಕಛೇರಿ ಮುಂಭಾಗದ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಶಿರಸ್ತೇದಾರ್ ಬಸವರಾಜು ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.