ತುರುವೇಕೆರೆ :
ತಾಲ್ಲೂಕಿನ ಬಾಣದಂದ್ರ-ದಂಡಿನಶಿವರ ಸಂಪರ್ಕಿಸುವ ರಸ್ತೆ ತುಂಬಾ ಹಾಳಾಗಿದ್ದು, ಸಣ್ಣ ಸಣ್ಣ ಗುಂಡಿಗಳಾಗಿ ಮಾರ್ಪಟ್ಟಿದೆ. ಮಳೆ ನೀರಿನಿಂದ ಆವೃತವಾದ ಗುಂಡಿಬಿದ್ದ ರಸ್ತೆಯು ವಾಹನ ಸಂಚಾರಕ್ಕೆ ತೊಂದರೆ ಮಾಡುತ್ತಿದ್ದರೂ ಸಹ ಸಂಬಂಧಪಟ್ಟವರು ಇತ್ತ ಗಮನ ಹರಿಸದಿರುವುದು ದುರದೃಷ್ಠಕರ ಎಂದು ದುಂಡ ಹಾಗೂ ಆಜುಬಾಜಿನ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ತಾಲೂಕಿನ ಬಾಣಸಂದ್ರದಿಂದ ದುಂಡಾ ಗ್ರಾಮದ ಮೂಲಕ ದಂಡಿನಶಿವರಕ್ಕೆ ಹಾದು ಹೋಗಿರುವ ರಸ್ತೆಯಲ್ಲಿ ಸಿಕ್ಕಾಪಟ್ಟೆ ಗುಂಡಿಗಳಾಗಿದ್ದು, ವಾಹನ ಸವಾರರು ಸಂಚರಿಸಲು ತುಂಬಾ ತ್ರಾಸ ಪಡುವಂತಾಗಿದೆ. ಬಾಣಸಂದ್ರ, ಕೆ.ಬಿ.ಕ್ರಾಸ್, ತಿಪಟೂರಿಗೆ ಹೋಗಲು ಈ ರಸ್ತೆ ಬಹಳ ಹತ್ತಿರವಾದ್ದರಿಂದ ಪ್ರತಿದಿನ ಅಮ್ಮಸಂದ್ರ, ಹುಲ್ಲೇಕೆರೆ, ಸಂಪಿಗೆ ಹಾಗೂ ದಂಡಿನಶಿವರದಿಂದ ನೂರಾರು ವಾಹನಗಳು ಈ ರಸ್ತೆಯ ಮೂಲಕ ಬಾಣಸಂದ್ರ ತಲುಪಿ ತುರುವೇಕೆರೆಗೆ ಸಂಚರಿಸುತ್ತಿವೆ. ಈ ರಸ್ತೆ ಕಸಬಾ ಹಾಗೂ ದಂಡಿನಶಿವರ ಹೋಬಳಿಗಳನ್ನು ಬೆಸೆಯಲಿದ್ದು, ಸುತ್ತಮುತ್ತಲ ಗ್ರಾಮದ ಪ್ರಯಾಣಿಕರಿಗೆ ಅತೀ ಮುಖ್ಯ ಸಂಪರ್ಕ ರಸ್ತೆಯಾಗಿದೆ.
ಗುಂಡಿಗಳಿಗೆ ಹೆದರಿ ಸೇವೆ ನಿಲ್ಲಿಸಿದ ಸಾರಿಗೆ :
ಈ ಹಿಂದೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್ಸುಗಳು ರಸ್ತೆ ಅವ್ಯವಸ್ಥೆಯಿಂದ ಓಡಾಟ ನಿಲ್ಲಿಸಿವೆ. ಬಸ್ ವ್ಯವಸ್ಥೆಯಿಲ್ಲದಿರುವುದರಿಂದ ದುಂಡ, ಕೋಡಿಹಳ್ಳಿ, ಕೆಬ್ಬೇಪಾಳ್ಯ, ಹೊಸೂರು ಗ್ರಾಮದ ಹೆಚ್ಚು ವಿಧ್ಯಾರ್ಥಿಗಳು ತುರುವೇಕೆರೆ, ಬಾಣಸಂದ್ರ, ದಂಡಿನಶಿವರದ ಶಾಲಾ ಕಾಲೇಜುಗಳಿಗೆ ಪ್ರತಿ ದಿನ ಸೈಕಲ್, ಬೈಕ್‍ಗಳಲ್ಲಿ ಇದೇ ರಸ್ತೆಯಲ್ಲಿ ಓಡಾಡಬೇಕಿದ್ದು ಪ್ರತಿದಿನ ನರಕ ಯಾತನೆ ಅನುಭವಿಸುವಂತಾಗಿದೆ. ಅಲ್ಲದೆ ತುಮಕೂರು-ತಿಪಟೂರಿಗೆ ರೈಲು ಬಸ್ಸುಗಳಿಗೆ ಹೋಗುವವರು ಬೈಕುಗಳಲ್ಲಿ ದಂಡಿನಶಿವರ ಇಲ್ಲವೆ ಬಾಣಸಂದ್ರ ತಲುಪಿ ನಂತರ ಮುಂದೆ ಹೋಗಬೇಕಾಗಿದೆ.
ಕಾರ್ಖಾನೆ ಕಾರ್ಮಿಕರಿಗೆ ಅನಾನೂಕೂಲ :
ಅಮ್ಮಸಂದ್ರ ಕಾರ್ಖಾನೆ ಕೆಲಸಗಾರರೂ ಸಹ ಪಾಳಿ ಪ್ರಕಾರ ರಾತ್ರಿ ಕೆಲಸಕ್ಕೆ ಹೋಗುವವರು ಸರಿಹೊತ್ತಿನಲ್ಲಿ ಇದೇ ರಸ್ತೆಯಲ್ಲಿ ಒಬ್ಬೊಬ್ಬರೆ ಬೈಕುಗಳಲ್ಲಿ ಹೋಗಬೇಕಾಗಿದೆ. ಅಮ್ಮಸಂದ್ರ ಸಿಮೆಂಟ್ ಕಾರ್ಖಾನೆಯಿಂದ ಸಿಮೆಂಟ್ ತುಂಬಿದ ಲಾರಿಗಳು ಈ ರಸ್ತೆಯ ಮೂಲಕವೇ ಚನ್ನರಾಯಪಟ್ಟಣ, ಮೈಸೂರು, ಹಾಸನಕ್ಕೆ ಅಧಿಕ ಟನ್ ಸಿಮೆಂಟ್ ತುಂಬಿಕೊಂಡು ರಾತ್ರಿ ವೇಳೆ ಸಂಚರಿಸುತ್ತವೆ. ಅಧಿಕ ಬಾರದಿಂದ ಈ ರಸ್ತೆ ಇಂದು ಗುಂಡಿಗಳಾಗಿ ಮಾರ್ಪಟ್ಟಿದ್ದು ಸಣ್ಣ ಕಟ್ಟೆಯಂತಾಗಿವೆ.
ಬಿದ್ದು ಏಳುತ್ತಿರುವ ಪ್ರಯಾಣಿಕರು :
ದ್ವಿಚಕ್ರ ವಾಹನಗಳಲ್ಲಿ ಓಡಾಡುವವರ ಪಾಡಂತು ಹೇಳತೀರದಾಗಿದೆ. ಇನ್ನು ಸಣ್ಣಪುಟ್ಟ ಕಾರುಗಳು ಗುಂಡಿಗೆ ಇಳಿದರೆ ಅದರ ಮದ್ಯಭಾಗ (ಛಾರ್ಸಿ) ಭೂಮಿಗೆ ತಾಗಿ ದಾರಿ ಹೋಕರ ಸಹಾಯ ಪಡೆಯಬೇಕಾದ ಸ್ಥಿತಿ ತಲುಪಿದೆ. ಇತ್ತೀಚೆಗೆ ಎಡೆಬಿಡದೆ ಸುರಿಯುತ್ತಿರುವ ಮಳೆನೀರಿನಿಂದ ಗುಂಡಿಗಳಲ್ಲಿ ಮಂಡಿಯುದ್ದ ನೀರು ನಿಂತು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರು ರಸ್ತೆಯಲ್ಲಿನ ಗುಂಡಿಯ ಆಳ ತಿಳಿಯದೆ ಅದೆಷ್ಟೋ ಪ್ರಯಾಣಿಕರು ಬಿದೆದ್ದ ಪ್ರಕರಣಗಳನ್ನು ಪ್ರತ್ಯಕ್ಷದರ್ಶಿಗಳು ಕಂಡಿದ್ದಾರೆ. ಮುಂದಿನ ದಿನಗಳಲ್ಲಿ ಮಳೆ ಹೀಗೆಯೇ ಮುಂದುವರಿದಲ್ಲಿ ಈ ರಸ್ತೆಯಲ್ಲಿ ಇನ್ನೆಷ್ಟು ಆವಘಡಗಳು ಸಂಭವಿಸುವವೋ ಎಂದು ಗ್ರಾಮಸ್ಥರು ಆತಂಕಪಡುತ್ತಿದ್ದಾರೆ.
ಗುಂಡಿ ಮುಚ್ಚಿಸದಿದ್ದರೆ ಪ್ರತಿಭಟನೆ :
ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಎಚ್ಚೆತ್ತು ಇತ್ತ ಗಮನ ಹರಿಸಿ ಕೊನೆ ಪಕ್ಷ ಮಣ್ಣಿನಿಂದಾದರೂ ಗುಂಡಿಗಳನ್ನು ಮುಚ್ಚಿ ರಸ್ತೆ ಸರಿಪಡಿಸಿ ವಾಹನ ಸಂಚಾರಕ್ಕೆ ಹಾಗು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಕೊಡಲಿ. ಇಲ್ಲದಿದ್ದಲ್ಲಿ ರಸ್ತೆ ತಡೆದು ಪ್ರತಿಭಟಿಸುವುದಾಗಿ ದುಂಡ ಗ್ರಾಮದ ಜ್ಞಾನೇಶ್, ಗುರುಲಿಂಗಯ್ಯ, ಸುರೇಶ್, ವೆಂಕಟಸ್ವಾಮಿ, ಪ್ರಕಾಶ್, ಕೋಡಿಹಳ್ಳಿ ಪ್ರಸಾದ್, ಲೋಕೇಶ್, ಹೊಸೂರು ಮಂಜುನಾಥ್, ಮೂರ್ತಿ, ಕೆಬ್ಬೇಪಾಳ್ಯ ರಾಮಕೃಷ್ಣಯ್ಯ, ಶಿವರಾಜು ಸೇರಿದಂತೆ ಆಜುಬಾಜು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಜನಪ್ರತಿನಿಧಿಗಳಿಗೆ ಕಾಣಿಸುವುದಿಲ್ಲವೇ ? :
ಸಾಲು ಸಾಲು ಹಬ್ಬಗಳು ಪ್ರಾರಂಭವಾಗಿರುವುದರಿಂದ ವಾಹನ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗಿದೆ. ಈಗಾಗಲೇ ಬೈಕುಗಳಲ್ಲಿ ಓಡಾಡುವ ಅದೆಷ್ಟೋ ನಾಗರೀಕರು ಗುಂಡಿಗಳನ್ನು ತಪ್ಪಿಸಲು ಹೋಗಿ ಕೆಲವು ಬಾರಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಇಷ್ಟಾದರೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸದಿರುವುದು ದುರಂತವೇ ಸರಿ. ವಿಪರ್ಯಾಸವೆಂದರೆ ಜಿಪಂ, ತಾಪಂ ಹಾಗೂ ಗ್ರಾಪಂ ಸದಸ್ಯರ ವಾಹನಗಳು ಸಹ ಪ್ರತಿದಿನ ಇದೇ ರಸ್ತೆಯಲ್ಲಿ ತುರುವೇಕೆರೆಗೆ ಓಡಾಡುತ್ತಿದ್ದರೂ, ರಸ್ತೆ ಗುಂಡಿಗಳು ಅವರ ಕಣ್ಣಿಗೆ ಗೋಚರಿಸದಿರುವುದು ದುರಂತವೇ ಸರಿ. ಕೊನೆ ಪಕ್ಷ ಗುಂಡಿಗಳಿಗೆ ಮಣ್ಣನ್ನಾದರೂ ಸುರಿದು ನೀರು ನಿಲ್ಲದಂತೆ ಮಾಡಿದಲ್ಲಿ ಶಾಲಾ ಮಕ್ಕಳಿಗೆ ಹಾಗೂ ಬೈಕ್ ಸವಾರರಿಗೆ ಅನುಕೂಲವಾಗಲಿದೆ ಎಂದು ಮಕ್ಕಳ ಪೋಷಕರಾದ ಶಿವಣ್ಣ, ಉಮೇಶ್, ಶಿವಶಂಕರ್, ಷಡಾಕ್ಷರಿ, :ಮಂಜಣ್ಣ ಮುಂತಾದವರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ