ತುರುವೇಕೆರೆ : ಮಾದರಿಯಾಗಿ ಉಳಿದಿರುವ ಶತಮಾನದ ಶಾಲೆ!

ತುರುವೇಕೆರೆ : 

      ಕಲ್ಪತರು ನಾಡಿನಲ್ಲಿ ಶತಮಾನ ಕಂಡ ಪಟ್ಟಣದ ಸರ್ಕಾರಿ ಮಾದರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಇದೀಗ ಖಾಸಗಿ ಶಾಲೆಗಳನ್ನು ಸಡ್ಡು ಹೊಡೆದು ನಿಂತಿರುವುದಕ್ಕೆ ಆ ಶಾಲೆಯ ಶಿಕ್ಷಕ ವೃಂದ ನಿಸ್ವಾರ್ಥ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದೇ ಸಾಕ್ಷಿ ಎನ್ನುವಂತಿದೆ.

      ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಮಾದರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯು 1897ರಲ್ಲಿ ಪ್ರಾರಂಭವಾಗಿದ್ದು, ಪಟ್ಟಣದ ಹಾಗೂ ತಾಲ್ಲೂಕಿನಲ್ಲಿಯೇ ಶತಮಾನದ ಶಾಲೆಗಳಲ್ಲಿ ಇದು ಮೊದಲನೇ ಸ್ಥಾನದಲ್ಲಿದೆ. 124 ವಸಂತಗಳನ್ನು ಪೂರೈಸಿರುವ ಈ ಶಾಲೆ ತುಂಬಾ ಹಳೆಯ (ಬ್ರಿಟೀಷ್ ವಾಸ್ತು) ಕಟ್ಟಡವಾಗಿದ್ದರೂ ಸಹ ಈಗಲೂ ಗಟ್ಟಿಮುಟ್ಟಾದ ಗೋಡೆಗಳಿಂದ ಸುರಕ್ಷಿತವಾಗಿದೆ. ಮೇಲ್ಚಾವಣಿಯಲ್ಲಿರುವ ಹೆಂಚುಗಳನ್ನು 1865ರಲ್ಲಿ ಅಳವಡಿಸಲಾಗಿದೆ ಎಂಬುದು ಹೆಂಚಿನ ಮೇಲಿರುವ ಮುದ್ರಣಗಳಿಂದ ಕಂಡು ಬರುತ್ತಿದೆ.

      ಬಹಳ ಹಿಂದಿನ ಶಾಲೆಯಾಗಿದ್ದರೂ ಸಹ ಇದೀಗ ಶಾಲಾ ಆಡಳಿತ ವರ್ಗದವರ ಪರಿಶ್ರಮದಿಂದ ಕಟ್ಟಡ ಸುಣ್ಣ ಬಣ್ಣಗಳಿಂದ ನವೀಕರಣಗೊಂಡಿದ್ದು ಹೊಸ ಕಟ್ಟಡಕ್ಕೇನೂ ಕಮ್ಮಿಯಿಲ್ಲ ಎಂಬಂತೆ ಸುಸಜ್ಜಿತವಾಗಿದೆ. ವಿಶಾಲವಾದ ಶಾಲಾ ಕೊಠಡಿಗಳು, ಮಕ್ಕಳು ಕುಳಿತು ಬಿಸಿಯೂಟ ಸವಿಯಲು ಹಾಗೂ ಪ್ರಾರ್ಥನೆ ಮಾಡಲು ವಿಶಾಲವಾದ ಒಳಾಂಗಣ, 3.5 ಎಕರೆ ವಿಸ್ತಾರವಾದ ಆಟದ ಮೈದಾನ, ತುರುವೇಕೆರೆ ಲಯನ್ಸ್ ಕ್ಲಬ್ ದತ್ತು ಶಾಲೆ ಎಂದು ಬಿಂಬಿಸಿ ಶಾಲಾಭಿವೃದ್ದಿಗೆ ಸಹಕಾರ ನೀಡುತ್ತಿರುವುದು ಅದರ ಹಿರಿಮೆಗೆ ಮತ್ತೊಂದು ಕನ್ನಡಿಯಾಗಿದೆ. ಶಾಲಾ ಮುಂಭಾಗದಲ್ಲಿ ಲಯನ್ಸ್ ಕ್ಲಬ್‍ನಿಂದ ನಿರ್ಮಾಣಗೊಂಡಿರುವ ಡಾ.ಶಿವಕುಮಾರಮಹಾಸ್ವಾಮೀಜಿ ಸಭಾಭವನ, ಮಕ್ಕಳ ಕೈತೋಟ, ಪುಟಾಣಿ ಮಕ್ಕಳು ಆಟವಾಡಲು ಪಾರ್ಕು ಇತ್ಯಾದಿ ಸೌಲಭ್ಯಗಳನ್ನು ಹೊಂದಿರುವುದಲ್ಲದೆ, ಶೌಚಾಲಯ ಹಾಗೂ ಶುದ್ದ ಕುಡಿಯುವ ನೀರಿನ ಸೌಕರ್ಯ ಒಳಗೊಂಡಂತಿರುವ ಈ ಶಾಲೆ ಪೋಷಕರಾದಿಯಾಗಿ ಮಕ್ಕಳನ್ನು ತನ್ನತ್ತ ಕೈಬೀಸಿ ಕರೆಯುತ್ತಿರುವುದಕ್ಕೆ ಇಲ್ಲಿನ ಶಿಕ್ಷಕರ ಶ್ರಮ ಬಹಳಷ್ಟಿದೆ.

ಆದರ್ಶ ಶಿಕ್ಷಕರು:

      ಶಾಲೆಯ ಸರ್ವತೋಮುಖ ಅಭಿವೃದ್ದಿಗೆ ದಶಕಗಳಿಂದಲೂ ತಮ್ಮ ಜ್ಞಾನ ದಾಸೋಹವನ್ನು ಬೆಳೆಯುವ ಮಕ್ಕಳಿಗೆ ಧಾರೆಯೆರೆಯುತ್ತಿರುವ ಇಲ್ಲಿನ ಶಿಕ್ಷಕರ ಪರಿಚಯ ಇಂತಹ ಸಂದರ್ಭದಲ್ಲಿ ಅತ್ಯವಶ್ಯಕವಾಗಿದೆ. ಶಾಲಾ ಅವಧಿಯನ್ನೇ ಎದುರು ನೋಡುವ ಇಂದಿನ ದಿನಗಳಲ್ಲಿ ಸಮಯ ಎಷ್ಟಾದರೂ ಸರಿಯೇ, ಮಕ್ಕಳ ಓದು ಮುಖ್ಯ ಎಂಬ ಧ್ಯೇಯವನ್ನು ಈ ಶಾಲೆಯ ಶಿಕ್ಷಕರು ತಮ್ಮ ದೈನಂದಿನ ದಿನಚರಿಯಲ್ಲಿ ಅಳವಡಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ.

ಶೈಕ್ಷಣಿಕ ಅಭಿವೃದ್ದಿ:

      ಶಾಲೆಯು ಶೈಕ್ಷಣಿಕ ಅಭಿವೃದ್ದಿಯ ಕಡೆ 4 ವರ್ಷದ ಹಿಂದೆಯೇ ಶೈಕ್ಷಣಿಕ ತಂತ್ರ ಜ್ಞಾನದ ಮೂಲಕ ಬೋಧನೆ ಪ್ರಾರಂಭಿಸಿ ಕಂಪ್ಯೂಟರ್, ಸ್ಮಾರ್ಟ್ ಬೋರ್ಡ್ ಬಳಕೆ ಹಾಗೂ ಸ್ಯಾಂಸಂಗ್ ಕಂಪನಿಯ ನೆರವಿನಿಂದ 24 ಲ್ಯಾಬ್‍ಟಾಬ್ ಸೌಲಭ್ಯ, 3750 ಪುಸ್ತಕಗಳನ್ನೊಳಗೊಂಡಂತ ಅದರಲ್ಲೂ ಪಠ್ಯ ಪುಸ್ತಕಗಳಿಗೆ ಸಂಬಂಧಿಸಿದ ಮಕ್ಕಳು ಕುಳಿತು ಓದುವಂತ ಗ್ರಂಥಾಲಯ, ಸಮಾಜ ವಿಜ್ಞಾನ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ವಿಜ್ಞಾನ ಪ್ರಯೋಗಾಲಯವಿದ್ದು 2019-20 ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.92 ಫಲಿತಾಂಶ ದೊರಕಿದೆ. ಈ ಶಾಲೆಯು ಗುಣ ಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ.

ಪ್ರಗತಿ ವಾಹಿನಿಯ ಕಾರ್ಯಕ್ರಮದಲ್ಲಿ ದ್ವಿತೀಯ ಬಹುಮಾನ :

      ಇಷ್ಟಲ್ಲದೆ 2019-20 ರಲ್ಲಿ ಜಿಲ್ಲೆಯ ಪ್ರಗತಿ ವಾಹಿನಿಯು ಹಮ್ಮಿಕೊಂಡಿದ್ದ ಮಾಸ್ಟರ್ ಮೈಂಡ್ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಈ ಶಾಲೆಯ ಮಕ್ಕಳು ಭಾಗವಹಿಸಿ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಿಗೆ ಪೈಪೋಟಿ ನೀಡಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಅಲ್ಲದೆ ಪ್ರತಿ ವರ್ಷ ಇಲಾಖೆಯಿಂದ ನಡೆಯುವ ಪ್ರತಿಭಾ ಕಾರಂಜಿ, ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಜಿಲ್ಲಾ ಪ್ರವೇಶ ಮಾಡಿರುತ್ತಾರೆ. ಇಷ್ಟಲ್ಲದೆ ಶಾಲೆಯಲ್ಲಿ ವಾರಕ್ಕೊಂದು ಕಾರ್ಯಕ್ರಮದಡಿ ಎಲ್ಲಾ ಭಾಷೆಗಳ ವಿಷಯಗಳ ಬಗ್ಗೆ ವಿಶೇಷ ನೂತನ ಕಾರ್ಯಕ್ರಮ ನಡೆಸುತ್ತಿರುವುದು ಪೋಷಕರಿಗೆ ಸಂತಸ ತಂದಿದೆ.

ಮಕ್ಕಳ ಸಂಖ್ಯೆ ಗಣನೀಯ ಏರಿಕೆ:

       ಇಷ್ಟೆಲ್ಲಾ ಕಾರಣಗಳಿಂದ 2014-15 ರಲ್ಲಿ 110 ಮಕ್ಕಳನ್ನು ಹೊಂದಿದ್ದ ಈ ಶಾಲೆಯಲ್ಲಿ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರ ಪರಿಶ್ರಮದಿಂದ ಈಗ 546 ಮಕ್ಕಳು ಅಭ್ಯಾಸ ಮಾಡುತ್ತಿರುವುದು ಶಿಕ್ಷಕರ ಸೇವಾ ಪರಿಶ್ರಮ ಎದ್ದು ಕಾಣುತ್ತಿದೆ. ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಈ ಶಾಲೆ ಒಳಗೊಂಡಿದ್ದು ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಈ ಶಾಲಾ ಶಿಕ್ಷಕರು ಒತ್ತು ನೀಡಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಬೇರೆಬೇರೆ ಖಾಸಗಿ ಶಾಲೆಗಳಿಂದ 151, ಅನುದಾನಿತ ಶಾಲೆಗಳಿಂದ 21 ಹಾಗೂ ಸರ್ಕಾರಿ ಶಾಲೆಗಳಿಂದ 23 ಮಕ್ಕಳು ಈ ಶಾಲೆಗೆ ಬಂದು ದಾಖಲಾಗುವ ಮೂಲಕ ಶಾಲೆಯು ಮಾದರಿ ಶಾಲೆಯೆನಿಸಿದೆ.

ಮುಖ್ಯ ಶಿಕ್ಷಕರ ಅವಿರತ ಶ್ರಮ:

      ಮೊದಲಿಗೆ ಈ ಶಾಲೆಯನ್ನು ಅತಿ ಎತ್ತರಕ್ಕೆ ಕೊಂಡೊಯ್ದಂತ ಕೀರ್ತಿ ಪದವೀಧರ ಮುಖ್ಯಶಿಕ್ಷಕ ಸಿ.ಸತೀಶ್‍ಕುಮಾರ್ ಅವರಿಗೆ ಸಲ್ಲುತ್ತದೆ. ಸತೀಶ್ ಕುಮಾರ್ ತುರುವೇಕೆರೆ ಲಯನ್ಸ್ ದತ್ತು ಶಾಲೆಯ ಪದವೀಧರ ಮುಖ್ಯ ಶಿಕ್ಷಕರಾಗಿದ್ದು, ಈ ಹಿಂದೆ ಎಸಿಓ ಮತ್ತು ಬಿಆರ್‍ಸಿ ಆಗಿ ಕರ್ತವ್ಯ ನಿರ್ವಹಿಸಿ, ಶೈಕ್ಷಣಿಕ ಕ್ಷೇತ್ರದಲ್ಲಿ ಮಾಂತ್ರಿಕ ಶಿಕ್ಷಕರೆಂದೆ ಹೆಸರುವಾಸಿಯಾದವರು. ಮಕ್ಕಳನ್ನು ಕೇವಲ ಪಠ್ಯಕ್ಕೇ ಸೀಮಿತಗೊಳಿಸದೆ ಕಲೆ, ಸಾಹಿತ್ಯ, ಆಟೋಟಗಳು, ಪ್ರತಿಭಾ ಕಾರಂಜಿಯಂತ ಕಲಾತ್ಮಕ ಭಾವನೆಗಳಿಗೂ ಒತ್ತು ನೀಡುತ್ತಿರುವುದರಲ್ಲಿ ಅವರ ಪ್ರತಿಭೆ, ಪರಿಶ್ರಮ ಎದ್ದು ಕಾಣುತ್ತಿದೆ. ಇಷ್ಟೆಲ್ಲಾ ಆದರ್ಶಗಳನ್ನು ಹೊಂದಿದ ಸತೀಶ್ ಕುಮಾರ್ ಅವರಿಗೆ ತಾಲ್ಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ 2020-21 ನೇ ಸಾಲಿನಲ್ಲಿ ಶಿಕ್ಷಣ ಇಲಾಖೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.

      ಇತ್ತೀಚೆಗೆ ತಾನೆ ತಾಲ್ಲೂಕು ಲಯನ್ಸ್ ಕ್ಲಬ್ ಇವರಿಗೆ ಲಯನ್ಸ್-ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿದ್ದು, ಇವರ ಪ್ರತಿಭೆಗೆ ಹಿಡಿದ ಮತ್ತೊಂದು ಕನ್ನಡಿಯಾಗಿದೆ.

      ಶೈಕ್ಷಣಿಕ ತಂತ್ರ ಜ್ಞಾನದ ಮೂಲಕ ಮಕ್ಕಳಲ್ಲಿ ಉತ್ತಮ ಜ್ಞಾನಾರ್ಜನೆ ಮೂಡಿಸುವುದು. ಕಂಠಪಾಠದಿಂದ ಮುಕ್ತಗೊಳಿಸಿ ಸ್ವಕಲಿಕೆ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಕ್ರಿಯಾತ್ಮಕವಾದ ವಿಶ್ಲೇಷಣೆಯ ಮೂಲಕ ಮಕ್ಕಳು ತಾವು ಕಲಿತ ವಿಷಯವನ್ನು ಸುಲಭವಾಗಿ ಯಾವ ಸಂದರ್ಭದಲ್ಲಾದರೂ ವಿಶ್ಲೇಷಿಸುವ ಮನೋಭಾವನೆಯನ್ನು ಹೊಂದಿರುತ್ತಾರೆ ಎಂಬುದು ಮುಖ್ಯ ಶಿಕ್ಷಕ ಸಿ.ಸತೀಶ್‍ಕುಮಾರ್ ಅವರ ಅಭಿಪ್ರಾಯವಾಗಿದೆ.

      ಒಟ್ಟಿನಲ್ಲಿ ಖಾಸಗಿ ಶಾಲೆಗಳ ಪೈಪೋಟಿ ಮಧ್ಯೆಯೂ ಸಹ ಈ ಸರ್ಕಾರಿ ಶಾಲೆ ತಾಲ್ಲೂಕಿನ ಎಲ್ಲಾ ಶಾಲೆಗಳಿಗೂ ಸಡ್ಡು ಹೊಡೆದು ನಿಂತಿರುವುದು, ಇತರೆ ಶಾಲೆಗಳಿಗೆ ಈ ಶಾಲೆ ಮಾದರಿಯಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link