ತುರುವೇಕೆರೆ :
ಯುವಕನೋರ್ವ ತನ್ನ ಪತ್ನಿ, ಅತ್ತೆ, ಮಾವನ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ರಂಗನಹಳ್ಳಿಯ ನಿವಾಸಿ ಬಸವಯ್ಯನವರ ಪುತ್ರ ಲೋಕೇಶ್ (28) ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ.
ತಮ್ಮ ಸಂಬಂಧಿ ಬೆಂಗಳೂರಿನ ಲಗ್ಗೆರೆಯಲ್ಲಿರುವ ರಾಜು ಧನಲಕ್ಷ್ಮಿ ದಂಪತಿಯ ಎರಡನೇ ಮಗಳು ಹೇಮಾಳನ್ನು ಲೋಕೇಶ್ ಕಳೆದ ಎರಡೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಲೋಕೇಶ್ ಕೆಲಸ ಮಾಡುತ್ತಿದ್ದರು. ಕೆಲ ತಿಂಗಳ ಕಾಲ ಅನ್ಯೋನ್ಯವಾಗಿದ್ದ ಸಂಸಾರದಲ್ಲಿ ಬಿರುಕು ಪ್ರಾರಂಭವಾಗಿತ್ತು ಎನ್ನಲಾಗಿದೆ. ಪತ್ನಿ ಹೇಮಾಳ ಚಾಡಿ ಮಾತಿನಿಂದ ತಮ್ಮ ಮಗಳನ್ನು ಸಾಕಲು ಯೋಗ್ಯನಲ್ಲವೆಂದು ಅತ್ತೆ, ಮಾವ ಹಂಗಿಸುತ್ತ, ಗಂಡ ಹೆಂಡತಿ ನೆಮ್ಮದಿಯಿಂದ ಸಂಸಾರ ಮಾಡಲು ಬಿಡುತ್ತಿಲ್ಲ ಎಂದು ಲೋಕೇಶ್ ತನ್ನ ಪೋಷಕರಿಗೆ ಹೇಳಿದ್ದರು. ಎರಡು ಕುಟುಂಬದ ಜಗಳ ಪೋಲೀಸ್ ಠಾಣೆಯ ಮೆಟ್ಟಿಲನ್ನೂ ಸಹ ಏರಿತ್ತು. ಹಿರಿಯರ ರಾಜಿ ಯತ್ನವೂ ನಡೆದಿತ್ತು.
ವಿಷ ಸೇವನೆ:
ತನ್ನನ್ನು ಪದೆ ಪದೆ ಪತ್ನಿ, ಅತ್ತೆ ಮತ್ತು ಮಾವ ಹಂಗಿಸುತ್ತಲೆ ಇದ್ದಾರೆ. ತನಗೆ ಮಕ್ಕಳಿಲ್ಲ ಎಂದು ಮೂದಲಿಸುತ್ತಿದ್ದಾರೆ. ನನ್ನನ್ನು ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ. ನನ್ನನ್ನು ಮಾವ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿ ಲೋಕೇಶ್ ವಿಷ ಸೇವನೆ ಮುನ್ನ ವೀಡಿಯೊ ರೆಕಾರ್ಡ್ ಮಾಡಿ ತನ್ನ ಕುಟುಂಬದ ಸದಸ್ಯರಿಗೆ ಮತ್ತು ಸ್ನೇಹಿತರಿಗೆ ಕಳಿಸಿ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದಾರೆ.
ಠಾಣೆಗೆ ದೂರು:
ಬೆಂಗಳೂರಿನಿಂದ ತುರುವೇಕೆರೆಗೆ ಬಂದಿದ್ದ ಲೋಕೇಶ್ ಪೋಲೀಸ್ ಠಾಣೆಯ ಬಳಿಯೆ ವಿಷ ಸೇವನೆ ಮಾಡಿ, ತಾನು ವಿಷ ಸೇವನೆ ಮಾಡಿರುವುದಾಗಿಯೂ, ತನ್ನ ಸಾವಿಗೆ ತನ್ನ ಪತ್ನಿ ಹೇಮಾ, ಅತ್ತೆ ಧನಲಕ್ಷ್ಮಿ, ಮಾವ ರಾಜುವೆ ಕಾರಣ ಎಂದು ಲೋಕೇಶ್ ಪೋಲೀಸ್ ಠಾಣೆಗೆ ತೆರಳಿ ನೇರವಾಗಿ ಹೇಳಿ ದೂರಿದ್ದಾರೆ. ಇವರ ಪರಿಸ್ಥಿತಿ ಕಂಡ ಪೋಲೀಸರು ಕೂಡಲೇ ಪಕ್ಕದಲ್ಲೇ ಇದ್ದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಲೋಕೇಶ್ ಕೊನೆಯುಸಿರೆಳೆದಿದ್ದಾನೆ.
ಲೋಕೇಶ್ ಸಾವಿಗೆ ಕಾರಣರಾಗಿರುವ ಲೋಕೇಶ್‍ರ ಪತ್ನಿ ಹೇಮಾ, ಮಾವ ರಾಜು, ಅತ್ತೆ ಧನಲಕ್ಷ್ಮಿ ಹಾಗೂ ಅವರೊಂದಿಗೆ ಕೈ ಜೋಡಿಸಿರುವ ಲಗ್ಗೆರೆಯ ಫೈನಾನ್ಷಿಯರ್ ಕುಮಾರ್ ಮತ್ತು ಮಹಿಳಾ ಸಂಘಟನೆಯ ಕಾರ್ಯಕರ್ತೆ ಜಯಲಕ್ಷ್ಮಿ ಯವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಲೋಕೇಶ್ ಸಂಬಂಧಿಕರು ಆಗ್ರಹಿಸಿದ್ದಾರೆ. ಪಟ್ಟಣದ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ