ತುರುವೇಕೆರೆ :
ಧರ್ಮಸ್ಥಳ ಮಂಜುನಾಥಸ್ವಾಮಿ ಭಕ್ತರ ಬಹು ದಿನದ ಬೇಡಿಕೆಯಂತೆ ಪಟ್ಟಣದಿಂದ ಧರ್ಮಸ್ಥಳಕ್ಕೆ ನೇರ ಬಸ್ ಸೌಕರ್ಯ ಕಲ್ಪಿಸಲಾಗಿದೆ ಎಂದು ಶಾಸಕ ಮಸಾಲ ಜಯರಾಮ್ ತಿಳಿಸಿದರು.
ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಶನಿವಾರ ಧರ್ಮಸ್ಥಳ ಮಾರ್ಗದ ನೂತನ ಸಾರಿಗೆ ಬಸ್‍ಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ರಾಜ್ಯಾದ್ಯಂತ ಅಪಾರ ಭಕ್ತರಿದ್ದಾರೆ. ಭಕ್ತರ ಆರಾಧ್ಯ ದೈವ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ತಾಲ್ಲೂಕಿನ ಸಾವಿರಾರು ಭಕ್ತರು ಪಟ್ಟಣದಿಂದ ಧರ್ಮಸ್ಥಳಕ್ಕೆ ತೆರಳುತ್ತಾರೆ. ಈ ನಡುವೆ ನೇರ ಬಸ್ ಸೌಲಭ್ಯ ಇಲ್ಲದೆ ಪರಿಪಾಟಲು ಪಡುವಂತಾಗಿತ್ತು. ತಾಲ್ಲೂಕಿನ ಪ್ರಯಾಣಿಕರಿಗೆ ಧರ್ಮಸ್ಥಳಕ್ಕೆ ನೇರ ಬಸ್ ಸೌಲಭ್ಯವಿಲ್ಲದೆ ಪಕ್ಕದ ತಾಲ್ಲೂಕಿನ ಕದಬಳ್ಳಿ, ಕೆ.ಬಿ.ಕ್ರಾಸ್, ತಿಪಟೂರು, ಚನ್ನರಾಯಪಟ್ಟಣಕ್ಕೆ ತೆರಳಿ ಧರ್ಮಸ್ಥಳದ ಬಸ್ ಹಿಡಿದು ಪ್ರಯಾಣ ಮಾಡಬೇಕಿತ್ತು. ಇದನ್ನು ಮನಗಂಡು ಭಕ್ತರ ಬೇಡಿಕೆಯಂತೆ ಸಾರಿಗೆ ಸಚಿವರು ಹಾಗೂ ಅಧಿಕಾರಿಗಳ ಜೊತೆ ಮಾತನಾಡಿ ನೇರ ಬಸ್ ಸೌಲಭ್ಯವನ್ನು ಪ್ರಯಾಣಿಕರಿಗೆ ಕಲ್ಪಿಸಲಾಗಿದೆ. ಭಕ್ತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಡಿಪೋ ಮ್ಯಾನೇಜರ್ ತಮ್ಮಯ್ಯ, ಸಹಾಯ ಸಂಚಾರ ಅಧೀಕ್ಷಕ ಶ್ರೀನಿವಾಸ್, ನಿಲ್ದಾಣ ನಿಯಂತ್ರಕ ಕುಮಾರ್, ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಸಿದ್ದಲಿಂಗಪ್ಪ, ಮುಖಂಡರಾದ ಸೋಮಶೇಖರ್, ರಾಮೇಗೌಡ, ಶರಣಪ್ಪ, ಜಯರಾಮ್, ಅನಂತು, ಉಮೇಶ್, ಫ್ರಭು ಸೇರಿದಂತೆ ಬಸ್ ಚಾಲಕರು ಹಾಗೂ ನಿರ್ವಾಕರು ಇದ್ದರು.
ಬಸ್ ಟಿಕೇಟ್ ನೀಡಿದ ಶಾಸಕ :
ಧರ್ಮಸ್ಥಳಕ್ಕೆ ಹೊರಟಿದ್ದ ನೂತನ ಬಸ್‍ನಲ್ಲಿದ್ದ ಪ್ರಯಾಣಿಕರಿಗೆ ಬಸ್ ಟಿಕೇಟ್ ಅನ್ನು ಖುದ್ದು ಶಾಸಕರೇ ಸ್ವಂತ ಹಣದಲ್ಲಿ ಖರೀದಿಸಿ ಧರ್ಮಸ್ಥಳ ತೆರಳುವ ಭಕ್ತರಿಗೆ ನೀಡಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಲ್ಪಿಸಿ ಪ್ರಯಾಣ ಸುಖಕರವಾಗಿರಲಿ ಹಾಗೂ ಮಂಜುನಾಥನ ದರ್ಶನವಾಗಲಿ ಎಂದು ಶುಭ ಹಾರೈಸಿ ಬಿಳ್ಕೊಟ್ಟರು.
ಬಸ್ ಮಾರ್ಗ:
ಪಟ್ಟಣದ ಬಸ್ ನಿಲ್ದಾಣದಿಂದ ಪ್ರತಿ ದಿನ ಬೆಳಿಗ್ಗೆ 8 ಗಂಟೆಗೆ ಬಸ್ ಹೊರಡಲಿದ್ದು ದಿಡಗ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ ಮೂಲಕ ಮಧ್ಯಾಹ್ನ 1.30ಕ್ಕೆ ಧರ್ಮಸ್ಥಳ ತಲುಪಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ