ಹುಬ್ಬಳ್ಳಿ
ಸಾಮಾಜಿಕ ಜಾಲತಾಣದ ಭರಾಟೆ ಹೆಚ್ಚಿರುವ ಇಂದಿನ ಸನ್ನಿವೇಶದಲ್ಲಿ ಯುವ ಜನರಿಗೆ ರೀಲ್ಸ್ ಹುಚ್ಚು ಹಿಡಿದಂತಿದೆ. ಇದಕ್ಕೆ ನಾವೇನು ಕಡಿಮೆ ಎಂಬಂತೆ ಸರ್ಕಾರಿ ಬಸ್ ಚಾಲಕ ರೀಲ್ಸ್ ಮಾಡಲು ಹೋಗಿ ರೈತರು ಮತ್ತವರ ಎರಡು ಎತ್ತುಗಳ ಜೀವಕ್ಕೆ ಕುತ್ತು ತಂದಿದ್ದಾನೆ.
ಸರ್ಕಾರಿ ಬಸ್ ಚಾಲಕನೊಬ್ಬರು ರೀಲ್ಸ್ ವಿಡಿಯೋ ಹುಚ್ಚಿಗೆ ರಸ್ತೆಯಲ್ಲಿ ಚಲಿಸುತ್ತಿದ್ದ ಚಕ್ಕಡಿಗೆ ಬಸ್ ಹಿಂಬದಿಯಿಂದ ಗುದ್ದಿದೆ. ಪರಿಣಾಮ ರೈತರಿಗೆ ಗಂಭೀರವಾಗಿ ಗಾಯಗಳಾಗಿವೆ. ರೈತರ ಎರಡು ಎತ್ತುಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಬಳಿ ಬುಧವಾರ ನಡೆದಿದೆ.
ಇದು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಆಗಿದ್ದು, ಹುಬ್ಬಳ್ಳಿಯಿಂದ ಬಾಗಲಕೋಟೆ ಕಡೆಗೆ ತೆರಳುವಾಗ ಘಟನೆ ನಡೆದ ಬಗ್ಗೆ ವರದಿ ಆಗಿದೆ.
ಎಂದಿನಂತೆ ಹುಬ್ಬಳ್ಳಿಯಿಂದ ಬಸ್ ಬಾಗಲಕೋಟೆಯತ್ತ ಹೊರಟಿತ್ತು. ರೀಲ್ಸ್ ಮಾಡುವ ಹುಚ್ಚು ಹಿಡಿಸಿಕೊಂಡಿದ್ದ ಬಸ್ ಚಾಲಕ ಮೋಬೈಲ್ ನಲ್ಲಿ ರೀಲ್ಸ್ ಮಾಡುತ್ತಿದ್ದ. ಬಸ್ ಚಾಲನೆ ಮಾಡಿಕೊಂಡೆ ಸೆರೆಯಾಗುತ್ತಿದ್ದ ರೀಲ್ಸ್ ವಿಡಿಯೋಗೆ ಪೋಸ್ಟ್ ಕೊಡಲು ಹೋಗಿ ರೈತನ ಜೀವಕ್ಕೆ ಜೀವವಾಗಿದ್ದ ಎರಡು ಎತ್ತುಗಳ ಸಾವಿಗೆ ಕಾರಣವಾಗಿದ್ದಾನೆ.
ಹಿಂದಿನಿಂದ ಜೋರಾಗಿ ಬಂದು ಡಿಕ್ಕಿ ಹೊಡೆದ ಬಸ್ ರಭಸಕ್ಕೆ ಎತ್ತುಗಳು ಚಕ್ಕಡಿ ಸಮೇತ ಮುಗ್ಗರಿಸಿ ಬಿದ್ದಿವೆ. ಪರಿಣಾಮ ಎರಡು ಎತ್ತುಗಳು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಪ್ರಾಣಬಿಟ್ಟಿವೆ. ಚಕ್ಕಡಿಯಲ್ಲಿದ್ದ ಇಬ್ಬರು ರೈತರಿಗೆ ಗಂಭೀರಗಾಯಗಳಾಗಿವೆ.
ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು, ಇತರ ಸವಾರರು ಗಾಯಾಳು ರೈತರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸ್ ಚಾಲಕನ ವಿರುದ್ಧ ಹುಬ್ಬಳ್ಳಿ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ್ಕಾರಿ, ಖಾಸಗಿ ಬಸ್‌ಗಳು ಸೇರಿದಂತೆ ಯಾರೇ ಆದರೂ ಮೊಬೈಲ್ ಬಳಕೆ ಮಾಡುತ್ತಾರೆ ಸಂಚಾರ ಮಾಡುವುದು ನಿಯಮ ಉಲ್ಲಂಘನೆ ಆಗುತ್ತದೆ. ಅದರಲ್ಲೂ ಸರ್ಕಾರಿ ಬಸ್ ಚಾಲಕರೇ ಹೀಗೆ ಮೊಬೈಲ್ ನೋಡಿಕೊಂಡು ರೀಲ್ಸ್ ಮಾಡುತ್ತಾ ಕರ್ತವ್ಯ ಪಾಲನೆ ಮಾಡಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ. ವಿಡಿಯೋದಲ್ಲಿ ಚಾಲಕ ಸ್ಟೇರಿಂಗ್ ಸರಿಯಾಗಿ ಹಿಡಿಯದಿರುವುದು ಕಾಣಿಸುತ್ತದೆ. ಇದೆಲ್ಲವು ನೋಡಿದರೆ ಚಾಲಕ ಸ್ಪಷ್ಟ ನಿಯಮ ಉಲ್ಲಂಘಿಸಿರುವುದು ಗೊತ್ತಾಗುತ್ತದೆ ಎಂದು ಪ್ರಯಾಣಿಕರು, ಸ್ಥಳಿಯರು ಆಕ್ರೋಶ ಹೊರ ಹಾಕಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ