ತುಮಕೂರು:
ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ವಿರುದ್ಧ ಗೃಹ ಸಚಿವ ಜಿ.ಪರಮೇಶ್ವರ್ ನಿವಾಸದ ಎದುರು ಪ್ರತಿಭಟನೆ ನಡೆಸಲು ಮುಂದಾದ ಮಾಜಿ ಸಚಿವ ಸೇರಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ಹೇಮಾವತಿ ನೀರನ್ನು ರಾಮನಗರಕ್ಕೆ ಕೊಂಡೊಯ್ಯುವ ನೀರಾವರಿ ಯೋಜನೆ ‘ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್’ ವಿರುದ್ಧ ಗೃಹ ಸಚಿವರ ನಿವಾಸದ ಮುಂದೆ ಪ್ರತಿಭಟನೆಗೆ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ವಿರೋಧಿ ಸಮಿತಿ ಧರಣಿಗೆ ಮುಂದಾಗಿತ್ತು
ಗುರುವಾರ ಬೆಳಗ್ಗೆ 11 ಗಂಟೆಗೆ ತುಮಕೂರಿನ ಹೆಗ್ಗೆರೆಯಲ್ಲಿ ಇರುವ ಜಿ.ಪರಮೇಶ್ವರ್ ಮನೆ ಎದುರು ಪಕ್ಷಾತೀತವಾಗಿ ಹೋರಾಟ ನಡೆಸಲು ಸಮಿತಿ ಮುಂದಾಗಿತ್ತು. ಮಾಜಿ ಸಚಿವ ಸೊಗಡು ಶಿವಣ್ಣ, ಗ್ರಾಮಾಂತರ ಶಾಸಕ ಸುರೇಶ್ ಗೌಡ, ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಮಸಾಲಾ ಜಯರಾಮ್ ಸೇರಿದಂತೆ ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದವು
ಸೊಗಡು ಶಿವಣ್ಣರನ್ನ ವಶಕ್ಕೆ ಪಡೆದು ಪ್ರತಿಭಟನೆ ಹತ್ತಿಕ್ಕಲು ಮುಂದಾದ ಪೊಲೀಸರ ನಡೆ ಖಂಡಿಸಿ ಡಿಆರ್ ಕಚೇರಿ ಬಳಿ ಪ್ರತಿಭಟಿಸಲಾಗಿದೆ. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ಖುದ್ದು ಸ್ಥಳಕ್ಕೆ ಬಂದ ತುಮಕೂರು ಎಸ್‌ಪಿ ಅಶೋಕ್ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದರು.
ಎಕ್ಸ್‌ಪ್ರೆಸ್ ಕೆನಾಲ್ ತುಮಕೂರು ಜಿಲ್ಲೆಯ ಹೇಮಾವತಿ ನೀರನ್ನು ರಾಮನಗರಕ್ಕೆ ಕೊಂಡೊಯ್ಯವ ನೀರಾವರಿ ಯೋಜನೆಯಾಗಿದೆ. ರಾಮನಗರಕ್ಕೆ ನೀರು ಹರಿದರೆ ತುಮಕೂರು ಜಿಲ್ಲೆಯ ಜನತೆಗೆ ನೀರಿನ ಸಂಕಷ್ಟ ಎದುರಾಗಲಿದೆ ಎಂದು ಪ್ರತಿಭಟನೆ ನಡೆಸಲಾಗುತ್ತಿದೆ.