ಆಗ್ರಾ:
17ನೇ ಶತಮಾನದ ಪ್ರೇಮ ಸೌಧ, ವಿಶ್ವ ಪ್ರಸಿದ್ಧ ತಾಜ್ ಮಹಲ್‌ನಲ್ಲಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ತಂದಿದ್ದ ಗಂಗಾಜಲವನ್ನು ಸಿಂಪಡಿಸಿದ ಇಬ್ಬರನ್ನು ಶನಿವಾರ ಬೆಳಗ್ಗೆ ಬಂಧಿಸಲಾಗಿದೆ. ಆರೋಪಿಗಳು ಗಂಗಾ ಜಲ ಸುರಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅವರನ್ನು ಬಂಧಿಸಲಾಗಿದೆ. ಈ ಯುವಕರು ಹಿಂದೂ ಮಹಾಸಭಾ ಸದಸ್ಯರು ಎನ್ನಲಾಗಿದೆ.
ಯುವಕರು ತಾಜ್ ಮಹಲ್ ಸ್ಮಾರಕವಲ್ಲ, ಶಿವನ ದೇವಾಲಯ ಎಂದು ವಾದಿಸಿ, ಸಮಾಧಿ ಮೇಲೆ ಗಂಗಾಜಲವನ್ನು ಸುರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗಾಗ್ಗೆ ಪೂಜೆ, ಪ್ರಾರ್ಥನೆ ಮತ್ತಿತರ ಯತ್ನಗಳೊಂದಿಗೆ ತಾಜ್ ಮಹಲ್ ಹೆಸರನ್ನು ಮರುನಾಮಕರಣ ಮಾಡುವ ಪ್ರಯತ್ನಗಳು ನಡೆಯುತ್ತಿವೆ.
ಶ್ರಾವಣ ಮಾಸವು ಶಿವನಿಗೆ ಸಮರ್ಪಿತವಾಗಿದೆ. ಹಿಂದುತ್ವ ಸಿದ್ಧಾಂತದೊಂದಿಗೆ ಗುರುತಿಸಿಕೊಂಡಿರುವ ಗುಂಪುಗಳು ತಾಜ್ ಮಹಲ್ ಅನ್ನು ‘ತೇಜೋಮಹಲೆ’ ಎಂದು ಕರೆಯುತ್ತಾರೆ. ಗಂಗಾಜಲ ಸಿಂಪಡಣೆ ಸಂಬಂಧ ತಾಜ್ ಗಂಜ್ ಪೊಲೀಸ್ ಠಾಣೆಯಲ್ಲಿ ಇಬ್ಬರು ಬಂಧನದಲ್ಲಿದ್ದು, ತನಿಖೆ ನಡೆಯುತ್ತಿದೆ ಎಂದು ಆಗ್ರಾ ನಗರ ಡಿಸಿಪಿ ಸೂರಜ್ ರೈ ತಿಳಿಸಿದ್ದಾರೆ.