ಅಪ್ರಾಪ್ತನಿಂದ ಅತಿವೇಗದ ಕಾರು ಚಾಲನೆ :ಅಪಘಾತದಲ್ಲಿ ಇಬ್ಬರ ಸಾವು…!

ಮುಂಬೈ: 

    ಮಹಾರಾಷ್ಟ್ರದಲ್ಲಿ ಸ್ಪೋರ್ಟ್ಸ್‌ ಕಾರು ಓಡಿಸಿ ಇಬ್ಬರ ಸಾವಿನ ಕಾರಣನಾದ ಅಪ್ರಾಪ್ತ ವಯಸ್ಕನಿಗೆ ಜಾಮೀನು ಸಿಕ್ಕ ವಿಚಾರ ಸೋಮವಾರ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಜತೆಗೆ ಕೋರ್ಟ್‌ನ ತೀರ್ಪಿಗೆ ಟೀಕೆಯೂ ವ್ಯಕ್ತವಾಗಿತ್ತು. ಇದೀಗ ಕಾರು ಚಲಾಯಿಸಿ ಅಪಘಾತ ನಡೆಸಿದ 17 ವರ್ಷದ ಬಾಲಕನ ತಂದೆಯನ್ನು ಪುಣೆ ಪೊಲೀಸರು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಬಂಧಿಸಿದ್ದಾರೆ.

    ಪುಣೆಯ ಕಲ್ಯಾಣಿ ನಗರದಲ್ಲಿ ಭಾನುವಾರ ಮುಂಜಾನೆ ಅಪಘಾತ ನಡೆದು ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಮೃತಪಟ್ಟಿದ್ದರು .

    17 ವರ್ಷದ ವೇದಾಂತ್‌ ಅಗರ್‌ವಾಲ್‌ ಐಷಾರಾಮಿ ಪೋರ್ಷೆ ಕಾರನ್ನು ಗಂಟೆಗೆ 200 ಕಿ.ಮೀ. ವೇಗದಲ್ಲಿ ಓಡಿಸಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದ. ಪರಿಣಾಮ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಮಧ್ಯಪ್ರದೇಶದ ಎಂಜಿನಿಯರ್‌ಗಳಾದ 24 ವರ್ಷದ ಅನೀಶ್ ಅವಧಿ ಮತ್ತು ಅಶ್ವಿನಿ ಕೊಶ್ತಾ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಘಟನೆಯ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

    ಪುಣೆ ಪೊಲೀಸ್‌ ಆಯುಕ್ತ ಅಮಿತೇಶ್‌ ಕುಮಾರ್‌ ಘಟನೆ ಬಗ್ಗೆ ಮಾಹಿತಿ ನೀಡಿ, ʼʼಸ್ಥಳೀಯ ಪಬ್‌ ಒಂದರಲ್ಲಿ ವೇದಾಂತ್‌ ಅಗರ್‌ವಾಲ್‌ ಮತ್ತು ಆತನ ಸ್ನೇಹಿತರು ಪಾರ್ಟಿ ಮಾಡಿ ಮದ್ಯ ಸೇವಿಸಿದ್ದರು. ಮಹಾರಾಷ್ಟ್ರದಲ್ಲಿ 25 ವರ್ಷಕ್ಕಿಂತ ಕೆಳಗಿನವರು ಮದ್ಯ ಸೇವಿಸುವುದು ನಿಷಿದ್ಧ. ಹೀಗಾಗಿ ಅಪ್ರಾಪ್ತರಿಗೆ ಮದ್ಯ ನೀಡಿದ ಬಾರ್‌ ಮಾಲೀಕನ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆʼʼ ಎಂದು ತಿಳಿಸಿದ್ದಾರೆ.

    ವೇದಾಂತ್‌ ಅಗರ್‌ವಾಲ್‌ ಚಲಾಯಿಸುತ್ತಿದ್ದ ಕಾರಿನಲ್ಲಿ ಒಟ್ಟು ಮೂವರಿದ್ದರು. ಅಪಘಾತಕ್ಕೀಡಾಗುತ್ತಿದ್ದಂತೆ ಸ್ಥಳೀಯರೆಲ್ಲ ಒಟ್ಟುಗೂಡಿ ಸೆರೆ ಹಿಡಿದು ಥಳಿಸಿ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದರು. ಈ ಪೈಕಿ ಓರ್ವ ತಪ್ಪಿಸಿಕೊಂಡಿದ್ದ. ಆದರೆ ದುರಂತ ಎಂದರೆ ವೇದಾಂತ್‌ ಅಗರ್‌ವಾಲ್‌ನ ಬಂಧನವಾದ ಕೇವಲ 15 ಗಂಟೆಗಳಲ್ಲೇ ಬಾಲಾಪರಾಧಿ ನ್ಯಾಯ ಮಂಡಳಿಯು ಆತನಿಗೆ ಜಾಮೀನು ಮಂಜೂರು ಮಾಡಿತ್ತು.

    ಜಾಮೀನು ನಿರಾಕರಿಸುವಷ್ಟು ಅಪರಾಧವು ಗಂಭೀರವಾಗಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯವು, ಅಪರಾಧಿ ಯೆರವಾಡಾದ ಸಂಚಾರ ಪೊಲೀಸರೊಂದಿಗೆ 15 ದಿನಗಳ ಕಾಲ ಕೆಲಸ ಮಾಡಬೇಕು, ಅಪಘಾತಗಳ ಬಗ್ಗೆ 300 ಪದಗಳ ಪ್ರಬಂಧ ಬರೆಯಬೇಕು, ಕುಡಿತದ ಅಭ್ಯಾಸಕ್ಕೆ ಚಿಕಿತ್ಸೆ ಪಡೆಯಬೇಕು ಮತ್ತು ಮನೋವೈದ್ಯಕೀಯ ಮೌಲ್ಯಮಾಪನ ಹಾಗೂ ಚಿಕಿತ್ಸೆಗೆ ಒಳಗಾಗಬೇಕು ಎಂಬ ಷರತ್ತು ವಿಧಿಸಿತ್ತು. ಈ ತೀರ್ಪಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.

    ಜಾಮೀನು ನಿರ್ಧಾರವನ್ನು ಪುಣೆ ಪೊಲೀಸರೂ ವಿರೋಧಿಸಿದ್ದು, ವೇದಾಂತ್‌ ಅಗರ್‌ವಾಲ್‌ನನ್ನು ವಿಚಾರಣೆಗೆ ಒಳಪಡಿಸಲು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ‘ಈ ಘಟನೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಐಪಿಸಿಯ ಸೆಕ್ಷನ್ 304ರ ಅಡಿಯಲ್ಲಿ ನಾವು ಕ್ರಮ ಕೈಗೊಂಡಿದ್ದೇವೆ. ಇದು ಜಾಮೀನು ರಹಿತ ಸೆಕ್ಷನ್ ಆಗಿದ್ದು, ಇದು ಘೋರ ಅಪರಾಧ’ ಎಂದು ಪೊಲೀಸ್‌ ಆಯುಕ್ತ ಅಮಿತೇಶ್‌ ಕುಮಾರ್‌ ತಿಳಿಸಿದ್ದಾರೆ.

   ಇದೀಗ ಪುಣೆ ಪೊಲೀಸರು ಬಾಲಕನ ತಂದೆ, ಸ್ಥಳೀಯ ಪ್ರಮುಖ ಬಿಲ್ಡರ್ ವಿಶಾಲ್‌ ಅಗರ್‌ವಾಲ್‌ನನ್ನು ಬಂಧಿಸಿದ್ದಾರೆ. ಅಪ್ರಾಪ್ತರನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುವುದು ಮತ್ತು ಅವರಿಗೆ ಮಾದಕ ವಸ್ತುಗಳನ್ನು ಒದಗಿಸುವ ಕಾರಣ ನೀಡಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap