ಪೋರ್ಶೆ ಕಾರು ಅಪಘಾತ ಪ್ರಕರಣ : ಇಬ್ಬರು ವೈದ್ಯರ ಬಂಧನ

ಪುಣೆ:

    ಪುಣೆಯಲ್ಲಿ ನಡೆದ ಪೋರ್ಶೆ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ 17 ವರ್ಷದ ಆರೋಪಿ ಬಾಲಕನ ರಕ್ತದ ಮಾದರಿಯನ್ನು ತಿರುಚಿ ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ಇಲ್ಲಿನ ಸಸೂನ್ ಜನರಲ್ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

    ಮೇ 19 ರ ಮುಂಜಾನೆ ಪುಣೆಯ ಉದ್ಯಮಿಯೊಬ್ಬರ ಅಪ್ರಾಪ್ತ ಮಗ ಚಲಾಯಿಸುತ್ತಿದ್ದ ಐಷಾರಾಮಿ ಪೋರ್ಶೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಐಟಿ ಉದ್ಯೋಗಿಗಳು ಸಾವಿಗೀಡಾಗಿದ್ದರು. ಕಾರು ಚಲಾಯಿಸುವ ವೇಳೆ ಬಾಲಕ ಪಾನಮತ್ತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗೆ ಆರಂಭದಲ್ಲಿ ಬಾಲನ್ಯಾಯ ಮಂಡಳಿಯು ಜಾಮೀನು ನೀಡಿತು ಮತ್ತು ರಸ್ತೆ ಅಪಘಾತಗಳ ಬಗ್ಗೆ ಪ್ರಬಂಧ ಬರೆಯುವಂತೆ ಕೇಳಿತ್ತು. ಸದ್ಯ ಬಾಲಕನನ್ನು ಜೂನ್ 5ರವರೆಗೆ ವೀಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ.ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಾಲಕನ ತಂದೆ ಹಾಗೂ ಉದ್ಯಮಿ ವಿಶಾಲ್ ಅಗರ್‌ವಾಲ್, ತಾತ ಸುರೇಂದ್ರ ಅಗರ್‌ವಾಲ್‌ರನ್ನು ಬಂಧಿಸಿದ್ದಾರೆ.