ಚಿನ್ನದ ವ್ಯಾಪಾರಿಯ ದರೋಡೆ ಮಾಡಿದ ಇಬ್ಬರು ಪಿಎಸ್‌ಐಗಳು ಸೇವೆಯಿಂದ ವಜಾ

ದಾವಣಗೆರೆ

     ಚಿನ್ನದ ವ್ಯಾಪಾರಿ ವಿಶ್ವನಾಥ್ ಎಂಬವರನ್ನು ದರೋಡೆ  ಮಾಡಿದ್ದ ಇಬ್ಬರು ಪಿಎಸ್‍ಐ ಸೇರಿ ನಾಲ್ವರನ್ನು ದಾವಣಗೆರೆಯ  ಕೆಟಿಜೆ ನಗರ ಠಾಣೆ ಪೊಲೀಸರು  ಬಂಧಿಸಿದ್ದು, ಇದರ ಬೆನ್ನಲ್ಲೇ ಇಬ್ಬರು ಪಿಎಸ್‌ಐಗಳನ್ನು ಸೇವೆಯಿಂದ ವಜಾ ಮಾಡಿ ಪೂರ್ವ ವಲಯ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.

    A1 ಆರೋಪಿ ಪಿಎಸ್ಐ ಹಾವೇರಿಯ ಹಂಸಭಾವಿ ಪೊಲೀಸ್ ಠಾಣೆಯ ಪ್ರೋಬೇಷನರಿ ಪಿಎಸ್ ಐ ಮಾಳಪ್ಪ ಯಲ್ಲಪ್ಪ ಚಿಪ್ಪಲಕಟ್ಟಿ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಶಿವಮೊಗ್ಗದ ಸಾಗರ ಟೌನ್ ಪೊಲೀಸ್ ಠಾಣೆಗೆ ಅದೇಶದಲ್ಲಿದ್ದ ಪಿಎಸ್ಐ ಪ್ರವೀಣ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ಘಟನೆ ನವೆಂಬರ್ 24ರಂದು ದಾವಣಗೆರೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿತ್ತು. ಇದೀಗ ಈ ಕಳ್ಳ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೂಲದ ಚಿನ್ನದ ವ್ಯಾಪಾರಿ ವಿಶ್ವನಾಥ್, ದಾವಣಗೆರೆಯ ಚಿನ್ನದ ವ್ಯಾಪಾರಿಗಳಿಂದ ಗಟ್ಟಿ ಚಿನ್ನ ಪಡೆದು ಆಭರಣ ತಯಾರಿಸಿ ನೀಡುತ್ತಿದ್ದರು. ಅದರಂತೆ ವ್ಯಾಪಾರಿಗಳಿಂದ ಚಿನ್ನ ಪಡೆದು ಕಳೆದ ನವೆಂಬರ್ 24ರ ಮಧ್ಯರಾತ್ರಿ 12.30ರ ವೇಳೆಗೆ ಕಾರವಾರಕ್ಕೆ ತೆರಳಲೆಂದು ದಾವಣಗೆರೆ ಕೆಎಸ್​​ಆರ್​​ಟಿಸಿ ಬಸ್​​ನಲ್ಲಿ ಕೂತಿದ್ದರು.

    ಇವರ ಬಗ್ಗೆ ಮೊದಲೇ ಮಾಹಿತಿ ಪಡೆದಿದ್ದ ಮಾಳಪ್ಪ ಚಿಪ್ಪಲಕಟ್ಟಿ ಹಾಗೂ ಪ್ರವೀಣ್ ಕುಮಾರ್, ಸಿವಿಲ್ ಡ್ರೆಸ್​​ನಲ್ಲಿ ಹೋಗಿ ಚಿನ್ನದ ವ್ಯಾಪಾರಿಯ ಕೊರಳಪಟ್ಟಿ ಹಿಡಿದಿದ್ದಾರೆ. ಜೊತೆಗೆ ಬಸ್​ನಿಂದ ಕೆಳಗಿಳಿಸಿ ತಾವು ಪೊಲೀಸ್​ ಅಧಿಕಾರಿಗಳೆಂದು ಬೆದರಿಕೆ ಹಾಕಿದ್ದಾರೆ. ಈ ವೇಳೆ ನೀವು ಪೊಲೀಸರು ಎಂದು ತಾನು ಹೇಗೆ ನಂಬಬೇಕು ಎಂದು ವಿಶ್ವನಾಥ್​​ ಪ್ರಶ್ನಿಸಿದ್ದರಿಂದ ಪಿಎಸ್ಐಗಳಾದ ಮಾಳಪ್ಪ ಹಾಗೂ ಪ್ರವೀಣ್ ತಮ್ಮ ಐಡಿಯನ್ನೂ ತೋರಿಸಿದ್ದಾರೆ. ಬಳಿಕ ಬಸ್ ನಿಲ್ದಾಣದ ಹೊರಗೆ ನಿಂತ ಪೊಲೀಸ್ ಜೀಪ್‌ ಹಾಗೂ ನಕಲಿ ಗನ್ ತೋರಿಸಿ ವಿಶ್ವನಾಥ್​​ ಬಳಿ ಇದ್ದ ಸುಮಾರು 80 ಗ್ರಾಂ ಚಿನ್ನವನ್ನು ಕಸಿದುಕೊಂಡಿದ್ದಾರೆ

    ವ್ಯಾಪಾರಿ ವಿಶ್ವನಾಥ್​​ರನ್ನು ಪೊಲೀಸ್​​ ಜೀಪಿನಲ್ಲಿಯೇ ‌ಕೆಟಿಜೆ ನಗರ ಪೊಲೀಸ್ ಠಾಣೆಗೆ ಕರೆತಂದಿರುವ ಪೊಲೀಸರು, ಠಾಣೆಯ ಹೊರಗೆ ನಿಂತು‌ ನಾವು ಐಜಿಪಿ ಸ್ಕ್ವಾಡ್​​ನಲ್ಲಿದ್ದೇವೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಐಜಿಪಿಯವರ ಸೂಚನೆ ಮೇರೆಗೆ ಈತನನ್ನು ಕರೆದುಕೊಂಡು ಹೋಗುತ್ತೇವೆ ಎಂದು ಅದೇ ಜೀಪ್​​ನಲ್ಲಿ KSRTC ಬಸ್ ನಿಲ್ದಾಣದ ಬಳಿ ಕರೆದೊಯ್ದಿದ್ದಾರೆ. ಕಾರವಾರಕ್ಕೆ ತೆರಳುವಂತೆ ವಿಶ್ವನಾಥ್​​ಗೆ ಈ ವೇಳೆ ಆರೋಪಿಗಳು ಸೂಚಿಸಿ ತೆರಳಿದ್ದು, ಅನುಮಾನಗೊಂಡ ವಿಶ್ವನಾಥ್​​ ಈ ಬಗ್ಗೆ ಕೆಟಿಜೆ ನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. 

     ಪ್ರಕರಣ ಬೆನ್ನತ್ತಿದ ಪೊಲೀಸರು ಚಿನ್ನದ ವ್ಯಾಪಾರಿಯಿಂದ ದರೋಡೆ ಮಾಡಿರುವ ಇಬ್ಬರು ಪಿಎಸ್​ಐಗಳು ಹಾಗೂ ಇವರಿಗೆ ಸಹಾಯ ಮಾಡಿದ ಚಿನ್ನದ ಅಂಗಡಿ ಕೆಲಸಗಾರ ವಿನಾಯಕ ನಗರದ ಸತೀಶ್ ರೇವಣ್ಕರ್, ಶಿರಸಿ ಮೂಲದ ನಾಗರಾಜ್ ರೇವಣ್ಕರ್​​ನನ್ನು ಬಂಧಿಸಿದ್ದಾರೆ. ಪಿಎಸ್ಐಗಳಾದ ಮಾಳಪ್ಪ ಹಾಗೂ ಪ್ರವೀಣ್ ಇಬ್ಬರಿಗೂ ಹಾವೇರಿಯಿಂದ ದಾವಣಗೆರೆಯ ಪೂರ್ವ ವಲಯ ಐಜಿಪಿ ಕಚೇರಿಗೆ ವರ್ಗಾವಣೆಯಾಗಿತ್ತು. ಇನ್ನು ಕೆಲವೇ ದಿನಗಳಲ್ಲಿ ಸ್ಥಳ ನಿಗದಿಯೂ ಆಗುತ್ತಿತ್ತು. ಅಷ್ಟರೊಳಗೆ ಮಾಡಬಾರದ್ದನ್ನು ಮಾಡಿ ಇವರು ಜೈಲು ಸೇರಿದ್ದಾರೆ.

Recent Articles

spot_img

Related Stories

Share via
Copy link