ಕಲಬುರಗಿ: ನವ ಜಾತ ಶಿಶು ಅಪಹರಣ ಪ್ರಕರಣ ಸುಖಾಂತ್ಯ : ಇಬ್ಬರು ಕಳ್ಳಿಯರ ಬಂಧನ

ಕಲಬುರಗಿ:

    ಗುಲ್ಬುರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್) ನಲ್ಲಿ ಅಪಹರಣಗೊಂಡಿದ್ದ ನವ ಜಾತ ಶಿಶುವನ್ನು ರಕ್ಷಿಸುವಲ್ಲಿ ಕಲಬುರಗಿ ನಗರ ಪೊಲೀಸರು ಯಶಸ್ವಿಯಾಗಿದೆ. ಮಗು ಅಪಹರಣ ಮಾಡಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಿದ್ದು, ಕಂದಮ್ಮನನ್ನು ಸುರಕ್ಷಿತವಾಗಿ ಮತ್ತೆ ತಾಯಿ ಮಡಿಲಿಗೆ ಸೇರಿಸಿದ್ದಾರೆ.

    ಬಂಧಿತರನ್ನು ಹೆಚ್. ನಸ್ರೀನ್ ಮತ್ತು ಫಾತೀಮಾ ಎಂದು ಗುರುತಿಸಲಾಗಿದೆ. ಸೋಮವಾರ ಮುಂಜಾನೆ ಜಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ತಾಯಿ ಮತ್ತು ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ನರ್ಸ್ ಗಳ ಸೋಗಿನಲ್ಲಿ ಬಂದಿದ್ದ ಕಳ್ಳಿಯರು, ನವಜಾತ ಗಂಡು ಶಿಶುವನ್ನು ಅಪಹರಿಸಿ ಪರಾರಿಯಾಗಿದ್ದರು. ಇದು ರಾಜಾದ್ಯಂತ ಸುದ್ದಿಯಾಗುತ್ತಿದ್ದಂತೆಯೇ ಪೊಲೀಸರು ಹುಡುಕಾಟ ಆರಂಭಿಸಿದ್ದರು.

   ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ನೇತೃತ್ವದ ಪೊಲೀಸ್ ತಂಡ 36 ಗಂಟೆಗಳಲ್ಲಿ ಕ್ಷೀಪ್ರ ಕಾರ್ಯಾಚರಣೆ ನಡೆಸುವ ಮೂಲಕ ಕಳ್ಳಿಯರನ್ನು ಬಂಧಿಸಿ ಮಗುವನ್ನು ಪತ್ತೆ ಹಚ್ಚಿದೆ. ಬಳಿಕ ಬುಧವಾರ ತಡರಾತ್ರಿ ಆಸ್ಪತ್ರೆಗೆ ಧಾವಿಸಿ, ತಾಯಿ ಮಡಿಲಿಗೆ ಮಗುವನ್ನು ಸೇರಿಸಿದೆ. ಈ ವೇಳೆ ಸಂತೋಷಗೊಂಡ ತಾಯಿ ಪೊಲೀಸರಿಗೆ ಧನ್ಯವಾದ ಸಲ್ಲಿಸಿದ್ದಾರೆ.

   ಅಂದಹಾಗೆ, ಕಸ್ತೂರಿ ಎಂಬುವವರು ಸೋಮವಾರ (ನ.25) ನಸುಕಿನ ಜಾವ 4 ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ತಾಯಿ ಮಗು ಆರೋಗ್ಯವಾಗೇ ಇದ್ದರು. ಈ ವೇಳೆ ನರ್ಸ್ ವೇಷದಲ್ಲಿ ಬಂದ ಮಹಿಳೆಯರು ‘ರಕ್ತ ಪರೀಕ್ಷೆ ಮಾಡಬೇಕು, ಮಗು ಕರೆದುಕೊಂಡು ಬನ್ನಿ’ ಎಂದು ಹೇಳಿದ್ದಾರೆ. ಹೀಗಾಗಿ, ಕಸ್ತೂರಿ ಅವರ ಸಂಬಂಧಿ ರಕ್ತ ತಪಾಸಣೆಗಾಗಿ ಮಗುವಿನೊಂದಿಗೆ ಹೋಗಿದ್ದರು. ಈ ವೇಳೆ ಮಹಿಳೆಯರು ಮಗುವನ್ನು ನಮಗೆ ಕೊಡಿ ಎಂದು ಹೇಳಿದ್ದಾರೆ. ಬಳಿಕ ಇಬ್ಬರು ಮಹಿಳೆಯರು ಮಗುವನ್ನು ಎತ್ತಿಕೊಂಡು ಅಲ್ಲಿಂದ ಪರಾರಿಯಾಗಿದ್ದರು.

   ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Recent Articles

spot_img

Related Stories

Share via
Copy link