ಡೆಹ್ರಾಡೂನ್:
ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ(UCC) ಜಾರಿಗೆ ಬಂದು 10 ದಿನಗಳಲ್ಲಿ ಪೋರ್ಟಲ್‌ನಲ್ಲಿ ಕೇವಲ ಒಂದು ಲಿವ್-ಇನ್-ರಿಲೇಷನ್ಶಿಪ್ ನೋಂದಾಯಿಸಲಾಗಿದೆ.ಕಡ್ಡಾಯ ನೋಂದಣಿಗಾಗಿ ಲಿವ್-ಇನ್ ಜೋಡಿಗಳಿಂದ ಐದು ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಒಬ್ಬರಿಗೆ ನೋಂದಣಿ ನೀಡಲಾಗಿದೆ ಮತ್ತು ಇತರ ನಾಲ್ವರ ಅರ್ಜಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಜನವರಿ 27 ರಂದು, ಬಿಜೆಪಿ ಆಡಳಿತದ ಉತ್ತರಾಖಂಡವು ಸ್ವತಂತ್ರ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದ ಮೊದಲ ರಾಜ್ಯವಾಯಿತು. ಇದು ಎಲ್ಲಾ ಧರ್ಮಗಳಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಸಮಾನ ಕಾನೂನುಗಳನ್ನು ಉತ್ತೇಜಿಸುತ್ತದೆ.
ಆದರೆ ಲಿವ್-ಇನ್ ಸಂಬಂಧಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ಎಂಬ ಯುಸಿಸಿಯ ನಿಬಂಧನೆಯು ಜನರ ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಹಲವರು ಟೀಕಿಸಿದ್ದರು.
ಆದಾಗ್ಯೂ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಲಿವ್-ಇನ್ ಜೋಡಿಗಳ ಕಡ್ಡಾಯ ನೋಂದಣಿಯು ಶ್ರದ್ಧಾ ವಾಲ್ಕರ್ ಅವರ ಕೊಲೆಯಂತಹ ಕ್ರೂರ ಘಟನೆಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಹೇಳುವ ಮೂಲಕ ಅದನ್ನು ಸಮರ್ಥಿಸಿಕೊಂಡಿದ್ದರು.