ಶಿಕ್ಷಿಸಬೇಕಿದ್ದ ಸರ್ಕಾರವೇ ಆರೋಪಿಗಳ ಪರ ನಿಂತಿದೆ : ಉದ್ಧವ್ ಠಾಕ್ರೆ

ಮುಂಬೈ:

   ಮಹಿಳೆಯರ ವಿರುದ್ಧದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಅಪರಾಧಿಗಳಿಗೆ ಶಿಕ್ಷೆ ನೀಡಬೇಕಿರುವ ಸರ್ಕಾರವೇ ಇದೀಗ ಆರೋಪಿಗಳ ಪರವಾಗಿ ನಿಂತಿರುವುದು ವಿಷಾದಕರ ವಿಚಾರ ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಶನಿವಾರ ಹೇಳಿದ್ದಾರೆ.

   ಬದ್ಲಾಪುರ ಘಟನೆ ಕುರಿತು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿರುವ ಅವರು, ರಾಜ್ಯ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅವರ ಜೊತೆಗೇ ನಿಂತಿದೆ. ಇದು ನಿಜಕ್ಕೂ ವಿಷಾದಕರ ಸಂಗತಿ. ಹೀಗಾಗಿ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವನ್ನು ಕಿತ್ತೊಗೆಯುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

   ಇದೇ ವೇಳೆ ಬಂದ್ ಕರೆಗೆ ಬಾಂಬೆ ಹೈಕೋರ್ಟ್ ನಿರ್ಬಂಧ ವಿಧಿಸಿರುವ ಕುರಿತು ಮಾತನಾಡಿ, ಬಂದ್ ಬದಲಿಗೆ ಪಕ್ಷದ ಕಾರ್ಯಕರ್ತರು ‘ಬೆಹನ್ ಸುರಕ್ಷಿತ್ ತರ್ ಘರ್ ಸುರಕ್ಷಿತ್’ (ಸಹೋದರಿಯರು ಸುರಕ್ಷಿತವಾಗಿದ್ದರೆ ಮನೆ ಸುರಕ್ಷಿತ) ಎಂಬ ಘೋಷಣೆಯೊಂದಿಗೆ ಸಹಿ ಅಭಿಯಾನ ಆರಂಭಿಸುವಂತೆ ಕರೆ ನೀಡಿದರು. ಸಹಿ ಅಭಿಯಾನ ಪೂರ್ಣಗೊಂಡ ಬಳಿಕ ಇದನ್ನು ಬಾಂಬೆ ಹೈಕೋರ್ಟ್‌ಗೆ ಪ್ರಸ್ತುತಪಡಿಸಲಾಗುತ್ತದೆ ಎಂದು ತಿಳಿಸಿದರು. ನ್ಯಾಯಾಲಯ ನಮ್ಮ ಬಂದ್ ನ್ನು ನಿಲ್ಲಿಸಿದೆ. ಆದರೆ, ನಮ್ಮ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ನಮ್ಮ ಪಕ್ಷ ಸಹಿ ಅಭಿಯಾನವನ್ನು ನಡೆಸಲಿದೆ ಎಂದು ಹೇಳಿದರು.

   ಘಟನೆ ಖಂಡಿಸಿ ಈ ಹಿಂದೆ ಮಹಾ ವಿಕಾಸ್ ಅಘಾಡಿ (ಎಂವಿಎ) ಪಕ್ಷ ಆಗಸ್ಟ್ 24 ರಂದು ಬಂದ್ ಕರೆ ನೀಡಿತ್ತು. ಇದಕ್ಕೆ ಬಾಂಬೆ ಹೈಕೋರ್ಟ್ ನಿರ್ಬಂಧ ವಿಧಿಸಿತ್ತು.ಬಂದ್‌ಗೆ ತಡೆಯೊಡ್ಡಲು ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸಿಜೆಐ ಡಿಕೆ ಉಪಾಧ್ಯಾಯ ಮತ್ತು ನ್ಯಾ ಅಮಿತ್ ಬೋರ್ಕರ್ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠ ನಿರ್ದೇಶನ ನೀಡಿತ್ತು.

   ಮಹಾರಾಷ್ಟ್ರದ ಬದ್ಲಾಪುರದ ಶಾಲೆಯೊಂದರಲ್ಲಿ ಇಬ್ಬರು ಬಾಲಕಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಆಗಸ್ಟ್ 17 ರಂದು, ಬಾಲಕಿಯರ ಮೇಲೆ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಶಾಲೆಯ ಅಟೆಂಡರ್‌ನನ್ನು ಪೊಲೀಸರು ಬಂಧಿಸಿದ್ದರು.

Recent Articles

spot_img

Related Stories

Share via
Copy link
Powered by Social Snap