ನವದೆಹಲಿ:
ಸಾವರ್ಕರ್ ಕುರಿತ ರಾಹುಲ್ ಗಾಂಧಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದ ಮಹಾರಾಷ್ಟ್ರ ಮಾಜಿ ಸಿಎಂ ಹಾಗೂ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ವಿಪಕ್ಷಗಳ ಸಭೆಯಿಂದ ದೂರ ಉಳಿದ ಬೆನ್ನಲ್ಲೇ ಎಚ್ಚೆತ್ತಿರುವ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಸಾವರ್ಕರ್ ಕುರಿತು ಹೊಸ ‘ಸಂಕಲ್ಪ’ ಮಾಡಿವೆ.
ಸಾವರ್ಕರ್ ಕುರಿತು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯನ್ನು ವಿರೋಧಿಸಿ ಮಹಾರಾಷ್ಟ್ರ ಮಹಾ ವಿಕಾಸ್ ಅಘಾಡಿ ಒಕ್ಕೂಟದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಸಭೆಗೆ ಗೈರಾಗಿದ್ದಾರೆ. ಔತಣಕೂಟದಲ್ಲಿ ಉದ್ಧವ್ ಠಾಕ್ರೆ ಗೈರುಹಾಜರಿಯ ಬಗ್ಗೆ ತೀವ್ರ ಚರ್ಚೆ ನಡೆದಿದೆ ಎನ್ನಲಾಗಿದೆ.
ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರವಾಗಿ ಕ್ಷಮೆ ಕೇಳಲು ನಿರಾಕರಿಸಿದ್ದ ರಾಹುಲ್ ಗಾಂಧಿ, “ನನ್ನ ಹೆಸರು ಸಾವರ್ಕರ್ ಅಲ್ಲ, ನಾನು ಕ್ಷಮೆಯಾಚಿಸುವುದಿಲ್ಲ,” ಎಂದು ಹೇಳಿದ್ದರು. ರಾಹುಲ್ ಗಾಂಧಿ ಅವರ ಈ ಹೇಳಿಕೆಯಿಂದ ಕೆರಳಿದ್ದ ಉದ್ಧವ್ ಠಾಕ್ರೆ ಇದಕ್ಕೆ ತೀಕ್ಷ್ಣವಾಗಿಯೇ ತಿರುಗೇಟು ನೀಡಿದ್ದರು. ಬಲಪಂಥೀಯ ಐಕಾನ್ ವ್ಯಕ್ತಿಯ ರಾಹುಲ್ ಗಾಂಧಿ ಹೇಳಿಕೆ ಆಕ್ಷೇಪಣೀಯ. ನಮ್ಮ ಆರಾಧ್ಯ ವ್ಯಕ್ತಿಯನ್ನು ಅವಮಾನಿ ಸುವುದನ್ನು ನಿಲ್ಲಿಸದಿದ್ದರೆ ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷದ ಮೈತ್ರಿಯಲ್ಲಿ ಬಿರುಕು ಮೂಡುತ್ತದೆ ಎಂದು ಎಚ್ಚರಿಸಿದ್ದರು.








