ಉಡುಪಿ
ಪತಿ ಬಾಲಕೃಷ್ಣನನ್ನು (44) ಕೊಲೆ ಮಾಡಲು ಪತ್ನಿ ಪ್ರತಿಮಾ ಮತ್ತು ಆಕೆಯ ಪ್ರಿಯಕರ ಹೇಗೆ ಪ್ಲಾನ್ ಮಾಡಿದ್ದರು ಎಂಬ ರೋಚಕ ಅಂಶ ಬಯಲಾಗಿದೆ. ಬಾಲಕೃಷ್ಣ ಅವರನ್ನು ಕೊಲೆ ಮಾಡಲು ಆರೋಪಿಗಳು ಐದು ತಿಂಗಳ ಹಿಂದೆಯೇ ಸಂಚು ರೂಪಿಸಿದ್ದರು. ಬಾಲಕೃಷ್ಣ ಅವರಿಗೆ ಸ್ಲೋ ಪಾಯ್ಸನ್ ನೀಡಿ ಕೊಲೆ ಮಾಡಬೇಕೆಂದು ಆರೋಪಿಗಳು ಮೊದಲೆ ನಿರ್ಧರಿಸಿದ್ದರು.
ಬಾಲಕೃಷ್ಣ ಅವರನ್ನು ಕೊಲೆ ಮಾಡಲು ಪ್ರತಿಮಾ ಪ್ರಿಯಕರ ದಿಲೀಪ್ ಹೆಗ್ಡೆ ಸ್ಲೋ ಪಾಯ್ಸನ್ಗಾಗಿ ಹುಡಕಾಟ ನಡೆಸಿದ್ದನು. ಸ್ಲೋ ಪಯ್ಸಾನ್ ಹೇಗೆ ಕಾರ್ಯ ನಿರ್ವಹಿಸುತ್ತದೆ? ಯಾವ ಸ್ಲೋ ಪಾಯ್ಸನ್ ನೀಡಿದರೆ ವ್ಯಕ್ತಿ ಸಾಯುತ್ತಾನೆ ಎಂದು ಆರೋಪಿ ದಿಲೀಪ್ ಹೆಗ್ಡೆ ಗೂಗಲ್ನಲ್ಲಿ ಹುಡುಕಾಡಿದ್ದನು. ಆಗ, ಆರ್ಸೆನಿಕ್ ಟ್ರೈಆಕ್ಸೈಡ್ ಎಂಬ ರಾಸಾಯನಿಕ ವಸ್ತು ಬಗ್ಗೆ ತಿಳಿದಿದೆ.
ಆರ್ಸೆನಿಕ್ ಟ್ರೈಆಕ್ಸೈಡ್ ಹೇಗೆ ಕಾರ್ಯ ನಿರ್ವಹಿಸುತ್ತದೆ? ಆರ್ಸೆನಿಕ್ ಟ್ರೈಆಕ್ಸೈಡ್ ಸೇವಿಸಿದ ಮೇಲೆ ಎಷ್ಟು ದಿನದ ಬಳಿಕ ಮನುಷ್ಯ ಸಾಯುತ್ತಾನೆ ಎಂಬೆಲ್ಲ ವಿಚಾರದ ಬಗ್ಗೆ ತಿಳಿದುಕೊಂಡಿದ್ದಾನೆ. ಇನ್ನು, “ಆರ್ಸೆನಿಕ್ ಟ್ರೈಆಕ್ಸೈಡ್ ರಾಸಾಯನಿಕ ವಸ್ತು ಹೆಚ್ಚು ವಿಷಕಾರಿ ಮತ್ತು ಬಹುಮುಖ ಸಂಯುಕ್ತ ವಸ್ತು. ಇದನ್ನು ಶಾಲಾ-ಕಾಲೇಜುಗಳ ಲ್ಯಾಬ್‌ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಬಿಳಿ, ಹಳದಿ ಬಣ್ಣದ ಪುಡಿ. ವಾಸನೆ ಇರುವುದಿಲ್ಲ.”
ಆರೋಪಿ ದಿಲೀಪ್ ಹೆಗ್ಡೆ ಜೂನ್ ತಿಂಗಳಲ್ಲಿ ಉಡುಪಿಯ ರಮನ್ಸ್ ಲ್ಯಾಬ್ನಲ್ಲಿ ಆರ್ಸೆನಿಕ್ ಟ್ರೈಆಕ್ಸೈಡ್ ಬಗ್ಗೆ ವಿಚಾರಿಸಿದ್ದಾನೆ. ಆಗ, ಆರ್ಸೆನಿಕ್ ಟ್ರೈಆಕ್ಸೈಡ್ ಅನ್ನು ಶಾಲಾ-ಕಾಲೇಜುಗಳ ಲ್ಯಾಬ್‌ಗಳಲ್ಲಿ ಬಳಸಲಾಗುತ್ತದೆ ಎಂದು ತಿಳಿದುಕೊಂಡಿದ್ದಾನೆ. ಅಲ್ಲದೇ, ಈ ಆರ್ಸೆನಿಕ್ ಟ್ರೈಆಕ್ಸೈಡ್ ಪೌಡರ್ ಅನ್ನು ಶಾಲಾ-ಕಾಲೇಜುಗಳಿಗೆ ಹೊರತುಪಡಿಸಿ ಹೊರಗಿನವರಿಗೆ ಸಿಗುವುದಿಲ್ಲ ಎಂಬುವುದನ್ನೂ ತಿಳಿದಿದ್ದಾನೆ.
ದಿಲೀಪ್ ಹೆಗ್ಡೆ “ತಾನು ವೈದಕೀಯ ವಿದ್ಯಾರ್ಥಿ, ಲ್ಯಾಬ್ ಬಳಕೆಗಾಗಿ ಆರ್ಸೆನಿಕ್ ಟ್ರೈಆಕ್ಸೈಡ್ ಬೇಕಾಗಿದೆ” ಅಂತ ಉಡುಪಿಯ ರಮನ್ಸ್ ಲ್ಯಾಬ್ಗೆ ಕರೆ ಮಾಡಿ, ಆರ್ಡರ್ ಮಾಡಿದ್ದಾನೆ. ಬಳಿಕ, ರಮನ್ಸ್ ಲ್ಯಾಬ್ಗೆ ತೆರಳಿ ಹಣ ಪಾವತಿ ಮಾಡಿದ್ದಾನೆ. ಒಂದು ವಾರದ ಬಳಿಕ ರಮನ್ಸ್ ಲ್ಯಾಬ್ ಸಿಬ್ಬಂದಿ ಆರೋಪಿ ದಿಲೀಪ್ ಹೆಗ್ಡೆಗೆ ಕರೆ ಮಾಡಿ ವಿಳಾಸ ಕೇಳಿದ್ದಾರೆ. ನಂತರ, ಲ್ಯಾಬ್ ಸಿಬ್ಬಂದಿ ದಿಲೀಪ್ ವಿಳಾಸಕ್ಕೆ ಆರ್ಸೆನಿಕ್ ಟ್ರೈಆಕ್ಸೈಡ್ ಪಾರ್ಸೆಲ್ ಕಳಿಸಿದ್ದಾರೆ.
ಖರೀದಿ ಮಾಡಿದ್ದ ಆರ್ಸೆನಿಕ್ ಟ್ರೈಆಕ್ಸೈಡ್ ಅನ್ನು ಆರೋಪಿ ದಿಲೀಪ್ ಎರಡು ಪ್ರತ್ಯೇಕ ಬಾಟಲಿಗಳಲ್ಲಿ ತುಂಬಿದ್ದಾನೆ. ಬೇರೆ ಬಾಟಲಿಗೆ ತುಂಬಿದ್ದ ಆರ್ಸೆನಿಕ್ ಟ್ರೈಆಕ್ಸೈಡ್ ಪೌಡರ್ ಅನ್ನು ಪಾರ್ಲರ್ನಲ್ಲಿದ್ದ ಪ್ರೇಯಸಿ ಪ್ರತಿಮಾಳಿಗೆ ನೀಡಿದ್ದಾನೆ. ಆಗಸ್ಟ್ವರೆಗೆ ಕಾದು, ನಂತರ ಸ್ಲೋ ಪಾಯ್ಸನ್ ನೀಡುವಂತೆ ಪ್ರೇಯಸಿ ಪ್ರತಿಮಾಗೆ ಹೇಳಿದ್ದಾನೆ.
ಪತ್ನಿ ಪ್ರತಿಮಾ ಗಣೇಶೊತ್ಸವ ಸಮಯದಲ್ಲಿ ಊಟದಲ್ಲಿ ಸ್ಲೋ ಪಾಯ್ಸನ್ ಬೆರೆಸಿ ಪತಿ ಬಾಲಕೃಷ್ಣ ಅವರಿಗೆ ನೀಡಲು ಆರಂಭಿಸಿದ್ದಾಳೆ. ಹೀಗೆ ಪ್ರತಿನಿತ್ಯ ಸ್ವಲ್ಪ ಸ್ವಲ್ಪ ಊಟದಲ್ಲಿ ಬೆರೆಸಿ ನೀಡಿದ್ದಾಳೆ. ದಿನಗಳು ಕಳದಂತೆ ಮೃತ ಬಾಲಕೃಷ್ಣ ಮಾನಸಿಕ ಹಾಗೂ ದೈಹಿಕ ಕ್ಷಮತೆ ಕಳೆದುಕೊಳ್ಳುತ್ತಾ ಹೋದರು.
ಆಗಸ್ಟ್ ತಿಂಗಳಲ್ಲಿ ಇವರಿಬ್ಬರ ಅಕ್ರಮ ಸಂಬಂಧ ಬಾಲಕೃಷ್ಣ ಅವರಿಗೆ ತಿಳಿದಿದೆ. ಗಲಾಟೆಯಾಗಿ ವಿಚಾರ ಪೊಲೀಸ್ ಠಾಣೆ ಮೆಟ್ಟಿಲು ಏರಿದೆ. ಇದೇ ಸಿಟ್ಟಿನಲ್ಲಿ ಪ್ರತಿಮಾ ಆರ್ಸೆನಿಕ್ ಟ್ರೈಆಕ್ಸೈಡ್ ಪೌಡರ್ ಅನ್ನು ಊಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆರಸಲು ಆರಂಭಿಸಿದ್ದಾಳೆ. ಇದರಿಂದ ಇನ್ನಷ್ಟು ಆರೋಗ್ಯ ಹದಗೆಟ್ಟು ಬಾಲಕೃಷ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಾಲಕೃಷ್ಣ ಅವರು ಸಾವಿನಿಂದ ಪಾರಾಗಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆರೋಪಿಗಳು ಬಾಲಕೃಷ್ಣ ಅವರನ್ನು ಉಸಿರುಗಟ್ಟಿಸಿ ಕೊಂದಿದ್ದಾರೆ.