ಶ್ರೀನಗರ:
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ತಮ್ಮ ಕುಕೃತ್ಯ ಮುಂದುವರೆಸಿದ್ದು, ಸೇನಾವಾಹನದ ಮೇಲೆ ದಾಳಿ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅಖ್ನೂರ್‌ನ ಬತ್ತಲ್ ಪ್ರದೇಶದಲ್ಲಿ ಸೇನಾ ವಾಹನದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ. ಆದರೆ ಕೂಡಲೇ ಸೈನಿಕರು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಸೇನಾ ಮೂಲಗಳ ಪ್ರಕಾರ ಘಟನಾ ಪ್ರದೇಶದಲ್ಲಿ ಮೂವರು ಉಗ್ರರು ಅವಿತಿರುವ ಶಂಕೆ ಇದ್ದು ಸೇನೆ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದೆ.
ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರ ಉಪಸ್ಥಿತಿಯನ್ನು ಖೌರ್‌ನ ಭಟ್ಟಾಲ್ ಪ್ರದೇಶದ ಅಸ್ಸಾನ್ ದೇವಾಲಯದ ಬಳಿ ಗ್ರಾಮಸ್ಥರು ವರದಿ ಮಾಡಿದ್ದಾರೆ ಎನ್ನಲಾಗಿದೆ. ಸೇನೆಯ ಆಂಬ್ಯುಲೆನ್ಸ್ ಹಾದು ಹೋಗುತ್ತಿದ್ದಾಗ ಗ್ರಾಮದಲ್ಲಿ ಕೆಲವು ಗುಂಡಿನ ಶಬ್ದಗಳು ಕೇಳಿಬಂದವು.ಕೂಡಲೇ ಪೊಲೀಸ್ ಜೊತೆಗೆ ಸೇನಾ ಪಡೆಗಳು ಗ್ರಾಮದ ಅಕ್ಕಪಕ್ಕದ ಪ್ರದೇಶಗಳನ್ನು ಸುತ್ತುವರೆದಿವೆ. ಉಗ್ರರು ಗಡಿಯಾಚೆಯಿಂದ ಒಳ ನುಸುಳಿದ್ದಾರೆ ಎಂದು ಹೇಳಲಾಗಿದ್ದು, ಇದೀಗ ಉಗ್ರರ ತಟಸ್ಥಗೊಳಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.