ಹುಳಿಯಾರು ಪಪಂ ಚುನಾವಣೆ : ಸಂಸದರು ಗೈರಾದರೆ ಚಿತ್ರಣವೇ ಬದಲು!!

ಹುಳಿಯಾರು :

      ಎಲ್ಲವೂ ಅಂದುಕೊಂಡಂತೆ ನಡೆದರೆ ಹುಳಿಯಾರು ಪಟ್ಟಣ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಕೆಎಂಎಲ್ ಕಿರಣ್ ಹಾಗೂ ಉಪಾಧ್ಯಕ್ಷೆಯಾಗಿ ಶೃತಿಸನತ್ ಆಯ್ಕೆಯಾಗುವುದು ಬಹುತೇಕ ನಿಶ್ವಿತ.

      ಹುಳಿಯಾರು ಪಪಂ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದಿದ್ದರಿಂದ ಸಹಜವಾಗಿ ಯಾವ ಪಕ್ಷ ಗದ್ದುಗೆ ಏರುತ್ತದೆಂಬ ಕುತೂಹಲ ಸೃಷ್ಠಿಯಾಗಿತ್ತು. ಅಧ್ಯಕ್ಷರ ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿ ಬಿಜೆಪಿ ತೆಕ್ಕೆಗೆ ಅಧಿಕಾರ ವಾಲಿತ್ತಾದರೂ ಚುನಾವಣೆ ಮುಂದೂಡಿದ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಕಡೆ ತಿರುಗಿತ್ತು.

      ಹೀಗೆ ದಿನಕ್ಕೊಂದು ತಿರುವು ಪಡೆಯುವ ಮೂಲಕ ಸಾರ್ವಜನಿಕ ವಲಯದಲ್ಲಿ ಮತ್ತೊಷ್ಟು ಕುತೂಹಲ ಮನೆ ಮಾಡಿತ್ತು. ಮೂರೂ ಪಕ್ಷದ ಸದಸ್ಯರು ಪಕ್ಷ ನಿಷ್ಠೆ ಪ್ರದರ್ಶಿಸುತ್ತಿದ್ದರಿಂದ ಅಧ್ಯಕ್ಷ ಆಕಾಂಕ್ಷಿಗಳ ತಂತ್ರಗಾರಿಗೆ, ಆಮಿಷಗಳು ವಿಫಲವಾಗುತ್ತಿತ್ತು. ಪಕ್ಷದ ಸದಸ್ಯರನ್ನು ಅಲುಗಾಡಿಸುವುದು ಕಷ್ಟಸಾಧ್ಯ ಎನ್ನುವ ಅಭಿಪ್ರಾಯ ಮೂಡಿದ ಪರಿಣಾಮ ಲಾಟರಿ ಮೂಲಕ ಅಧ್ಯಕ್ಷರ ಆಯ್ಕೆ ಅನಿವಾರ್ಯ ಎನ್ನಲಾಗಿತ್ತು.
ಆದರೆ ದಿಡೀರ್ ಅಚ್ಚರಿಯ ಬೆಳವಣಿಗೆ ಎನ್ನುವಂತೆ ಕಾಂಗ್ರೆಸ್ ಸದಸ್ಯ ರಾಜುಬಡಗಿ ನಾಟ್ ರೀಚಬಲ್ ಆಗಿ ಕದನ ಕುತೂಹಲ ಕೆರಳಿಸಿತ್ತು. ಚುನಾವಣೆ ಮುಂದೂಡಿನ ದಿನದಿಂದಲೂ ಧರಣಿ, ಪತ್ರಿಕಾಗೋಷ್ಠಿ ಸೇರಿದಂತೆ ಸಭೆ ಸಮಾರಂಭದಲ್ಲಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಣದಲ್ಲಿ ಆತಂಕ ಸೃಷ್ಠಿಯಾಯಿತು. ಅದರಲ್ಲೂ ಅಧ್ಯಕ್ಷರಾಗುವ ಆಸೆಯಿಂದ ಸಚಿವರ ಸಖ್ಯ ತೊರೆದು ಮೈತ್ರಿ ಪಕ್ಷ ಬೆಂಬಲಿಸಿದ್ದ ಜಹೀರ್ ಸಾಬ್ ಅವರ ನಿದ್ದೆಗೆಡಿಸಿತು.

      ರಾಜುಬಡಗಿ ನಾಟ್‍ರೀಚಬಲ್ ಆಗಿದ್ದು ಬಿಜೆಪಿ ಪಾಳಯದ ಸಂಭ್ರಮಕ್ಕೆ ಕಾರಣವಾಯಿತು. ಪರಿಣಾಮ ಪಂಚಾಯ್ತಿ ಅಧಿಕಾರ ಹಿಡಿಯುವ ಉತ್ಸಾಹದಲ್ಲಿ ವಾರದ ಮುಂಚೆಯೇ ಸದಸ್ಯರಿಗೆ ಪ್ರವಾಸ ಭಾಗ್ಯ ಒಲಿಯಿತು. ಆದರೆ ರಾಜುಬಡಗಿಯಿಂದ ಅಧಿಕಾರಿ ಕೈತಪ್ಪುವ ಆತಂಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷ ರಾಜುಬಡಗಿ ಹುಡುಕಲು ಹರಸಾಹಸ ಪಟ್ಟು ವಿಫಲವಾಗಿ ಸದಸ್ಯತ್ವ ಕಳೆಯಲು ವಿಪ್ ಜಾರಿ ಪ್ರಹಸಕ್ಕೆ ಕೈ ಹಾಕಿತು.

ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದರೂ ರಾಜುಬಡಗಿ ಯಾರ ಕೈಗೂ ಸಿಗದಿರುವುದರಿಂದ ಸಹಜವಾಗಿ ಬಿಜೆಪಿ ಗದ್ದುಗೆ ಏರುತ್ತದೆ ಎನ್ನಲಾಗಿದೆ. ಹಾಗಾಗಿ ಬಿಜೆಪಿ ಅಧ್ಯಕ್ಷ ಅಭ್ಯರ್ಥಿ ಕೆಎಂಎಲ್ ಕಿರಣ್ ಹಾಗೂ ಉಪಾಧ್ಯಕ್ಷೆ ಅಭ್ಯರ್ಥಿ ಶೃತಿಸನತ್ ಅವರ ಗೆಲುವು ನಿಶ್ಚಿತವಾಗಲಿದೆ. ಆದರೆ ರಾಜುಬಡಗಿ ಚುನಾವಣೆಗೆ ಬಂದರೆ ಚಿತ್ರಣವೇ ಬದಲಾಗುವುದಿದ್ದು ಬರುವರೋ, ಇಲ್ಲವೋ ಎಂದು ಕಾದುನೋಡಬೇಕಿದೆ.

ಪಕ್ಷಗಳ ಬಲಾಬಲ

      16 ಸಂಖ್ಯಾ ಬಲವುಳ್ಳ ಹುಳಿಯಾರು ಪಟ್ಟಣ ಪಂಚಾಯ್ತಿಯಲ್ಲಿ ಬಿಜೆಪಿಯ ಆರು ಸದಸ್ಯರು, ಕಾಂಗ್ರೆಸ್‍ನ ಐದು ಸದಸ್ಯರು, ಜೆಡಿಎಸ್‍ನ ಮೂವರು ಸದಸ್ಯರು ಹಾಗೂ ಪಕ್ಷೇತರರು ಇಬ್ಬರು ಇದ್ದಾರೆ. ಬಿಜೆಪಿಗೆ ಶಾಸಕರು, ಸಂಸದರು ಹಾಗೂ ಪಕ್ಷೇತರ ಅಭ್ಯರ್ಥಿಯ ಓರ್ವರ ಮತ ಸೇರಿ 9 ಮತಗಳಾಗುತ್ತವೆ. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಜೊತೆ ಓರ್ವ ಪಕ್ಷೇತರ ಸೇರಿದರೆ 9 ಆಗುತ್ತದೆ. ಆದರೆ ಇದರಲ್ಲಿ ರಾಜುಬಡಗಿ ಚುನಾವಣೆಗೆ ಗೈರಾದರೆ 8 ಮತಗಳಿಗೆ ಕುಸಿಯುತ್ತದೆ.

ಸಂಸದರು ಗೈರಾದರೂ ಚಿತ್ರಣ ಬದಲು :

     ಹುಳಿಯಾರು ಪಟ್ಟಣ ಪಂಚಾಯ್ತಿ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಗದ್ದುಗೆ ಏರಬೇಕೆಂದಿದ್ದರೆ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಸಂಸದ ಜಿ.ಎಸ್.ಬಸವರಾಜು ಅವರು ಭಾಗವಹಿಸುವುದು ಅನಿವಾರ್ಯವಾಗಿದೆ. ಏಕೆಂದರೆ ಬಿಜೆಪಿಗಿಂತ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮತಗಳು ಹೆಚ್ಚಾಗಿವೆ. ಜೆಸಿಎಂ ಮೇಲಿನ ಮುನಿಸಿನಿಂದಾಗಿ ಜಿಎಸ್‍ಬಿ ಚುನಾವಣೆಗೆ ಗೈರಾದರೆ ಸುಲಭವಾಗಿ ಗಾದಿ ಹಿಡಿಯುವ ಲೆಕ್ಕಾಚಾರದಲ್ಲಿ ಮೈತ್ರಿ ಪಕ್ಷಗಳಿವೆ. ಆದರೆ ಪಕ್ಷ ಗೆಲ್ಲವುದನ್ನು ತಪ್ಪಿಸಿದರೆ ತಪ್ಪು ಸಂದೇಶ ರವಾನೆಯಾಗುತ್ತದೆಂದು ಮುನಿಸು ಬದಿಗಿತ್ತು ಚುನಾವಣೆಗೆ ಸಂಸದರು ಬರುವ ವಿಶ್ವಾಸ ಬಿಜೆಪಿ ಪಾಳಯದಲ್ಲಿದೆ.

ಅಧ್ಯಕ್ಷರಾಗಲು ಪತಿಪತ್ನಿಯರಿಬ್ಬರಿಗೂ ಅವಕಾಶ :

    ಹುಳಿಯಾರು ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಪತಿಪತ್ನಿಯರಿಬ್ಬರೂ ಒಮ್ಮೆಲೇ ಚುನಾಯಿತರಾಗಿ ಇತಿಹಾಸ ಪುಟ ಸೇರಿದ ಕೆ.ಎಂ.ಎಲ್ ಕಿರಣ್ ಹಾಗೂ ಸಂಧ್ಯ ಅವರಿಬ್ಬರಲ್ಲಿ ಒಬ್ಬರು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಆಗುವ ಅವಕಾಶವನ್ನು ಸಚಿವರು ನೀಡಿದ್ದರು. ಆದರೆ ಪತಿಯಾಗಲಿ ಎಂದು ಪತ್ನಿ ಹೇಳಿದರೆ ಪತ್ನಿಯೇ ಆಗಲಿ ಎಂದು ಪತಿ ಹೇಳುತ್ತಾ ಇಲ್ಲಿಯವರೆವಿಗೂ ದಿನದೂಡಿದರು. ಸಂಧ್ಯ ಅವರ ಪರವಾಗಿ ಅತ್ತೆಯೂ ಸಹ ಬ್ಯಾಟಿಂಗ್ ಮಾಡಿ ಸೊಸೆಯನ್ನೇ ಅಭ್ಯರ್ಥಿ ಮಾಡು ಎನ್ನುವ ಸಂದೇಶವನ್ನು ಮಗನಿಗೆ ಕೊಟ್ಟರು. ಆದರೆ ಸಂಧ್ಯ ಅವರು ಮಾತ್ರ ಪಟ್ಟುಹಿಡಿದು ಪತಿ ಕೆಎಂಎಲ್ ಕಿರಣ್ ಅವರನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link