ಬಸ್‌ನಲ್ಲಿ ಯುವತಿ ಎದೆಗೆ ಕೈ ಹಾಕಿದ ಯುವಕ; ಕಾಮುಕನಿಗೆ ಬಿತ್ತು ಧರ್ಮದೇಟು

ಕಾರವಾರ

   ಬಸ್‌ನಲ್ಲಿ ನಿದ್ದೆ ಮಾಡುತ್ತಿದ್ದ ಯುವತಿಗೆ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಕಾರವಾರದಲ್ಲಿ ನಡೆದಿದೆ. ಕಾಮುಕನ ನೀಚ ಕೃತ್ಯ ಕಂಡು ತರಾಟೆಗೆ ತೆಗೆದುಕೊಂಡಿರುವ, ಈ ಬಗ್ಗೆ ವಿಡಿಯೊ ಮಾಡುವ ಮೂಲಕ ಖದೀಮನ ಬಣ್ಣ ಬಯಲು ಮಾಡಿದ್ದಾಳೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

   ಕಾರವಾರದಿಂದ ಅಂಕೋಲಾಗೆ ಬಸ್‌ನಲ್ಲಿ ತೆರಳುತ್ತಿದ್ದ ಯುವತಿ ಸೀಟ್‌ನಲ್ಲಿ ನಿದ್ರಿಸುತ್ತಿದ್ದಳು. ಈ ವೇಳೆ ಪಕ್ಕದಲ್ಲಿ ಸೀಟಿನಲ್ಲಿದ್ದ ಕಾಮುಕ, ಯುವತಿ ನಿದ್ದೆಯಲ್ಲಿದ್ದಾಗ ಆಕೆಯ ಎದೆಯ ಮೇಲೆ ಕೈ ಹಾಕಿದ್ದಾನೆ. ನಿದ್ದೆಯಲ್ಲಿದ್ದ ಯುವತಿಗೆ ಏನೋ ಸ್ಪರ್ಶವಾದಂತಾಗಿ ಒಮ್ಮೆಲೇ ಎಚ್ಚರಗೊಂಡಿದ್ದಾಳೆ. ಈ ವೇಳೆ ಆರೋಪಿಯ ಕೈ ಆಕೆಯ ಎದೆಯ ಮೇಲಿತ್ತು. ಈ ವೇಳೆ ಗಾಬರಿಗೊಂಡಿದ್ದಾಳೆ. ನಂತರ ಧೃತಿ ಗೆಡದೆ ತಕ್ಷಣವೇ ಮೊಬೈಲ್ ಹೊರತೆಗೆದು ಆರೋಪಿಯ ಕೃತ್ಯವನ್ನು ವಿಡಿಯೊ ಮಾಡಿದ್ದಾಳೆ.

   ಬಳಿಕ ಯುವತಿ ಆತನಿಗೆ ಬೈದು, ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಪ್ರಯಾಣಿಕರಿಂದ ಯುವಕನಿಗೆ ಧರ್ಮದೇಟು ಬಿದ್ದಿದೆ. ಕಾಮುಕನ ಕೃತ್ಯವನ್ನು ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾಳೆ. ವೈರಲ್ ಆಗಿರುವ ವಿಡಿಯೋದಲ್ಲಿ ‘ನಮ್ಮ ರಕ್ಷಣೆಗೆ ನಾವೇ ಮುಂದಾಗಬೇಕು, ಇಂತಹ ಇಂತಹ ಕಾಮುಕರಿಗೆ ತಕ್ಕ ಶಾಸ್ತಿಯಾಗಬೇಕು’ ಎಂದು ಹೇಳಿದ್ದಾಳೆ. ಅಲ್ಲದೆ, ಪೊಲೀಸ್ ಹಿರಿಯ ಅಧಿಕಾರಿಗಳನ್ನು ಟ್ಯಾಗ್ ಮಾಡಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. 

   ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ಭಾರಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು, ಕ್ರಮಕ್ಕೆ ಮುಂದಾಗಿದ್ದಾರೆ. ಪ್ರಕರಣದ ತನಿಖೆ ನಡೆಸಿ, ಕೂಡಲೇ ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸುವಂತೆ ಅಂಕೋಲಾ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ. ಸದ್ಯ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಪ್ರಕ್ರಿಯೆ ನಡೆಯುತ್ತಿದ್ದು, ಪೊಲೀಸರು ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.

Recent Articles

spot_img

Related Stories

Share via
Copy link