ನವದೆಹಲಿ
ಮಾಜಿ ಐಪಿಎಲ್ ಛೇರ್ಮನ್ ಲಲಿತ್ ಮೋದಿ ಅವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂಥ ಸ್ಥಿತಿ ಆಗಿದೆ. ಕೆಲ ತಿಂಗಳ ಹಿಂದೆ ಅವರಿಗೆ ನೀಡಲಾಗಿದ್ದ ವಾನೋಟೂ ದೇಶದ ಪಾಸ್ಪೋರ್ಟ್ ಅನ್ನು ರದ್ದು ಮಾಡಲಾಗಿದೆ. ಭಾರತದ ವಶಕ್ಕೆ ಬೀಳುವುದನ್ನು ತಪ್ಪಿಸಿಕೊಳ್ಳಲು ವಾನೋಟೂಗೆ ಹೋಗುವ ಲಲಿತ್ ಮೋದಿ ಪ್ರಯತ್ನ ನೀರಲ್ಲಿ ಹೋಮ ಮಾಡಿದಂತಾಗಬಹುದು. ಭಾರತಕ್ಕೆ ಹಸ್ತಾಂತರಗೊಳ್ಳುವುದನ್ನು ತಪ್ಪಿಸಿಕೊಳ್ಳಲು ಲಲಿತ್ ಮೋದಿ ಯತ್ನಿಸುತ್ತಿದ್ದಾರೆ ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ವಾನೋಟೂ ದೇಶದ ಪ್ರಧಾನಿ ಜೋಥಮ್ ನಾಪಾಟ್ ಅವರು ಮೋದಿಯ ಪಾಸ್ಪೋರ್ಟ್ ರದ್ದುಗೊಳಿಸುವಂತೆ ತನ್ನ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ವಾನೋಟೂ ದೇಶದ ಪಾಸ್ಪೋರ್ಟ್ ಸಿಕ್ಕ ಬಳಿಕ ಲಲಿತ್ ಮೋದಿ ಅವರು ಕೆಲ ದಿನಗಳ ಹಿಂದಷ್ಟೇ ತನ್ನ ಭಾರತೀಯ ಪಾಸ್ಪೋರ್ಟ್ ಅನ್ನು ಮರಳಿಸಲು ಅರ್ಜಿ ಹಾಕಿದ್ದರು. ಆದರೆ, ವಾನೋಟೂ ಪಾಸ್ಪೋರ್ಟ್ ರದ್ದುಗೊಳ್ಳಬಹುದು ಎಂದು ಅವರು ನಿರೀಕ್ಷಿಸಿರಲಿಲ್ಲ.
ವಾನೋಟೂ ಎಂಬುದು ಆಸ್ಟ್ರೇಲಿಯಾ ಸಮೀಪ ಇರುವ ಒಂದು ಪುಟ್ಟ ದ್ವೀಪ ರಾಷ್ಟ್ರ. ಇದು ಹೆಚ್ಚಿನ ದೇಶಗಳ ಜೊತೆ ಗಡೀಪಾರು ಒಪ್ಪಂದಗಳಿಗೆ ಸಹಿ ಹಾಕಿಲ್ಲ. ಅಂದರೆ, ಯಾವುದೇ ದೇಶದ ಪ್ರಜೆಗಳು ವಾನೋಟೂನಲ್ಲಿ ಆಶ್ರಯ ಪಡೆದಿದ್ದು, ಅವರನ್ನು ಹಸ್ತಾಂತರಿಸುವಂತೆ ಅಥವಾ ಗಡೀಪಾರು ಮಾಡುವಂತೆ ಆ ದೇಶವು ಮನವಿ ಮಾಡಿಕೊಳ್ಳಬಹುದು ಅಷ್ಟೇ. ಆದರೆ, ಗಡೀಪಾರು ಮಾಡುವ ಯಾವ ಕಟ್ಟುಪಾಡಿಗೂ ವಾನೋಟೂ ಒಳಪಟ್ಟಿರುವುದಿಲ್ಲ. ಈ ಕಾರಣಕ್ಕೆ ಲಲಿತ್ ಮೋದಿ ಅವರು ಈ ಪುಟ್ಟ ದ್ವೀಪ ದೇಶದ ಆಶ್ರಯ ಬಯಸಿ ಹೋಗುತ್ತಿದ್ದಿರಬಹುದು.
