ನವದೆಹಲಿ:
ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಭಾರೀ ಬೇಡಿಕೆ ಇದೆ. ರೈಲ್ವೆ ಇಲಾಖೆ ವಂದೇ ಭಾರತ್ ಸ್ಲೀಪರ್ ಮಾದರಿ ರೈಲು ಸಂಚಾರಕ್ಕೆ ಸಹ ಯೋಜನೆ ರೂಪಿಸಿದೆ. ಈ ರೈಲುಗಳ ಪ್ರಾಯೋಗಿಕ ಸಂಚಾರ ಪೂರ್ಣಗೊಂಡಿದೆ. ಆದರೆ ರೈಲು ಸೇವೆ ಯಾವಾಗ ಆರಂಭ?.
2024ರ ಡಿಸೆಂಬರ್‌ನಲ್ಲಿ ವಂದೇ ಭಾರತ್ ಸ್ಲೀಪರ್ ಮಾದರಿ ರೈಲುಗಳ ವೇಗದ ಪರೀಕ್ಷೆಯನ್ನು ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಮಾರ್ಗದಲ್ಲಿ ನಡೆಸಲಾಗಿತ್ತು. 2025ರ ಆರಂಭದಲ್ಲಿ ರೈಲು ಸಂಚಾರದ ನಿರೀಕ್ಷೆ ಇತ್ತು.ಆದರೆ ಜುಲೈ ಅಂತ್ಯ ಸಮೀಪಿಸಿದರೂ ಸಹ ದೇಶದ ಯಾವುದೇ ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ಮಾದರಿ ರೈಲುಗಳ ಸಂಚಾರ ಆರಂಭವಾಗಿಲ್ಲ. ದೂರದ ನಗರಗಳ ನಡುವಿನ ಸಂಪರ್ಕಕ್ಕೆ ಈ ಮಾದರಿ ರೈಲುಗಳನ್ನು ಓಡಿಸುವುದು ಇಲಾಖೆಯ ಯೋಜನೆಯಾಗಿದೆ.
ರಾಜ್ಯಸಭೆಗೆ ಲಿಖಿತ ಉತ್ತರ ನೀಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ವಂದೇ ಭಾರತ್ ಸ್ಲೀಪರ್ ರೈಲಿನ ಕುರಿತು ಮಾಹಿತಿ ನೀಡಿದ್ದಾರೆ.‘ಸಚಿವರು ತಮ್ಮ ಉತ್ತರದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರವನ್ನು ನಡೆಸಲಾಗಿದೆ. ಮೊದಲ ಈ ಮಾದರಿ ರೈಲು ಬೋಗಿ ಈಗಾಗಲೇ ಸಂಚಾರಕ್ಕೆ ಸಿದ್ಧವಾಗಿದೆ’ ಎಂದು ತಿಳಿಸಿದ್ದಾರೆ.
‘ಭಾರತೀಯ ರೈಲ್ವೆ ಕಡೆಯಿಂದ ವಂದೇ ಭಾರತ್ ಸ್ಲೀಪರ್ ಮಾದರಿ ರೈಲಿನ ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ. ಈ ಮಾದರಿ ರೈಲು ತಯಾರಿಕೆ ಆರಂಭವಾಗಿದ್ದು, ಒಟ್ಟು 10 ರೈಲುಗಳನ್ನು ತಯಾರು ಮಾಡಲಾಗುತ್ತಿದೆ’ ಎಂದು ಸಚಿವರು ವಿವರಣೆ ನೀಡಿದ್ದಾರೆ .‘ಚೆನ್ನೈನ ಐಸಿಎಫ್‌ನಲ್ಲಿ 50 ವಂದೇ ಭಾರತ್ ರೈಲು ಬೋಗಿ ತಯಾರಾಗಲಿದೆ. 200 ಬೋಗಿ ತಯಾರು ಮಾಡುವ ನಿಟ್ಟಿನಲ್ಲಿ ತಯಾರಕರ ಜೊತೆ ತಂತ್ರಜ್ಞಾನ ಮತ್ತು ಇತರ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ’ ಎಂದು ಸಚಿವರು ಉತ್ತರದಲ್ಲಿ ಸದನಕ್ಕೆ ತಿಳಿಸಿದರು.
‘ಕೆಐಎನ್ಇಟಿ ರೈಲ್ವೆ ಸಲ್ಯೂಷನ್ ಲಿಮಿಟೆಡ್ 16 ಬೋಗಿಯನ್ನು ಹೊಂದಿರುವ 120 ರೈಲುಗಳನ್ನು ಪೂರೈಕೆ ಮಾಡಲಿದೆ. ಇದು ಈ ಮಾದರಿ ರೈಲು ಪೂರೈಕೆಯ ಮೂಲ ಒಪ್ಪಂದವಾಗಿದೆ.ವಂದೇ ಭಾರತ್ ಸ್ಲೀಪರ್ ರೈಲಿಗೆ ಭಾರೀ ಬೇಡಿಕೆ ಇದೆ. ದೇಶದ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸಲು ಈ ಮಾದರಿ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಬೆಂಗಳೂರು-ಬೆಳಗಾವಿ, ಮುಂಬೈ-ಹೈದರಾಬಾದ್, ಮಂಗಳೂರು-ಮುಂಬೈ ಸೇರಿದಂತೆ ವಿವಿಧ ಮಾರ್ಗದಲ್ಲಿ ಈ ಮಾದರಿ ರೈಲು ಓಡಿಸಲಾಗುತ್ತದೆ ಎಂಬ ಸುದ್ದಿಗಳಿವೆ.
ರೈಲ್ವೆ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ವಂದೇ ಭಾರತ್ ಸ್ಲೀಪರ್ ರೈಲುಗಳ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. 130 ಕಿಲೋ ಮೀಟರ್ ಮತ್ತು 180 ಕಿಲೋ ಮೀಟರ್ ವೇಗದಲ್ಲಿ ಸಂಚಾರವನ್ನು ನಡೆಸುವಂತೆ ಪ್ರಾಯೋಗಿಕ ಸಂಚಾರವನ್ನು ಮಾಡಲಾಗಿದೆ. ಆದರೆ ರೈಲುಗಳ ಸಂಚಾರಕ್ಕೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ.
ವಂದೇ ಭಾರತ್ ರೈಲುಗಳ ದರಗಳು ಹೆಚ್ಚಿವೆ ಎಂದು ಜನರು ದೂರುತ್ತಿದ್ದಾರೆ. ವಂದೇ ಭಾರತ್ ಸ್ಲೀಪರ್ ಮಾದರಿ ರೈಲಿನ ದರಗಳು ಎಷ್ಟಿರಲಿವೆ? ಎಂಬುದು ಇನ್ನೂ ಅಂತಿಮಗೊಂಡಿಲ್ಲ. ನವದೆಹಲಿ-ಶ್ರೀನಗರ ಮಾರ್ಗದಲ್ಲಿ ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರವನ್ನು ನಡೆಸಲಿದೆ ಎಂದು ಅಂದಾಜಿಸಲಾಗಿದೆ.
