ತುಮಕೂರು :
ರಾಜ್ಯದಲ್ಲಿ ಮರಾಠ ಪ್ರಾಧಿಕಾರ ರಚನೆ ಮಾಡಿರುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿ ಕನ್ನಡ ಒಕ್ಕೂಟದ ವತಿಯಿಂದ ಜ. 9 ರಂದು ರಾಜ್ಯಾದ್ಯಂತ ರೈಲು ಬಂದ್ ಚಳವಳಿ ಹಮ್ಮಿಕೊಂಡಿರುವುದಾಗಿ ವಾಟಾಳ್ ನಾಗರಾಜ್ ತಿಳಿಸಿದರು.
ನಗರದ ರೈಲ್ವೆ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮರಾಠ ಪ್ರಾಧಿಕಾರವನ್ನು ರಚನೆ ಮಾಡಿರುವ ಸರ್ಕಾರ ಹಿಂದಕ್ಕೆ ಪಡೆಯುವ ಸೂಚನೆಯನ್ನು ತೋರಿಸುತ್ತಿಲ್ಲ. ಹೀಗಾಗಿ ರಾಜ್ಯದ ಎಲ್ಲ ಕಡೆ ಚಳವಳಿ ನಡೆಸಲಾಗುತ್ತಿದೆ. ಜ. 9 ರಂದು ರಾಜ್ಯದ 500 ಸ್ಥಳಗಳಲ್ಲಿ ರೈಲು ಸಂಚಾರ ಬಂದ್ ಮಾಡಿ ರೈಲ್ವೆ ಹಳಿಗಳ ಮೇಲೆ ಕುಳಿತು ಸತ್ಯಾಗ್ರಹ ನಡೆಸುವುದಾಗಿ ಹೇಳಿದರು.
ಜ. 9 ರಂದು ರೈಲುಗಳನ್ನು ಓಡಿಸುವಾಗ ಎಚ್ಚರದಿಂದ ಓಡಿಸಬೇಕು. ಈಗ ನಿಗದಿಪಡಿಸಿರುವ 500 ಸ್ಥಳಗಳು ಮುಂದೆ 1 ಸಾವಿರ ಸ್ಥಳಗಳಾಗಬಹುದು. ಹಾಗಾಗಿ ಅಂದು ರೈಲುಗಳನ್ನು ಚಾಲಕರು ಎಚ್ಚರಿಕೆಯಿಂದ ಓಡಿಸಬೇಕು. ಮರಾಠ ಪ್ರಾಧಿಕಾರ ರಚನೆ ವಿಚಾರದಲ್ಲಿ ರಾಜ್ಯ ಸರ್ಕಾರ ತನ್ನ ದ್ವಂದ್ವ ನೀತಿಯನ್ನು ಕೈ ಬಿಡಬೇಕು. ಮರಾಠ ಪ್ರಾಧಿಕಾರವನ್ನು ರಚನೆಯಿಂದ ಕನ್ನಡಿಗರಿಗೆ ಭಾರೀ ಅಪಾಯ ಇದೆ. ರಾಜ್ಯದ ಬೆಳಗಾವಿ, ಖಾನಾಪುರ, ಕಾರವಾರ ಇವೆಲ್ಲವನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಸುಪ್ರೀಂ ಕೋರ್ಟ್‍ನಲ್ಲಿ ದಾವೆ ಹೂಡಲಾಗಿದೆ. ಅವರು ನಮ್ಮ ಮೇಲೆ ದಾಳಿ ಆಗಾಗ್ಗೆ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬೆಳಗಾವಿ ಭಾಗವನ್ನು ಬಿಟ್ಟು ಕೊಡುವುದಿಲ್ಲ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಪ್ರಾಧಿಕಾರ ರಚನೆ ಮಾಡುವಾಗ ಯಾವುದೇ ಚಿಂತನೆ ಮಾಡದೆ, ಶಾಸನ ಸಭೆಯಲ್ಲೂ ಚರ್ಚೆ ಮಾಡದೆ, ಮಂತ್ರಿ ಮಂಡಲದಲ್ಲೂ ಚರ್ಚಿಸದೆ ತಾವೇ ನಿರ್ಧಾರ ಕೈಗೊಂಡು ಪ್ರಾಧಿಕಾರ ರಚನೆ ಮಾಡಿದ್ದಾರೆ. ವಿಧಾನಸೌಧದಲ್ಲಿ ಪರಭಾಷೆಯ ಪ್ರಾಧಿಕಾರ ಮಾಡಿ ಮಂತ್ರಿ ಸ್ಥಾನಮಾನ ಕೊಡುತ್ತಿರುವುದು ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲು. ಯಾವ ಮುಖ್ಯಮಂತ್ರಿಗಳೂ ಇಂಥ ಕೆಲಸವನ್ನು ಮಾಡಿಲ್ಲ. ಈ ಮುಖ್ಯಮಂತ್ರಿಗಳಿಗೆ ಗಡಿನಾಡ ಬಗ್ಗೆ ಚಿಂತನೆ ಇಲ್ಲ, ಕನ್ನಡ ಬೆಳೆಸುವ ಕಾಳಜಿ ಇಲ್ಲ, ಪ್ರಾಮಾಣಿಕತೆಯೂ ಇಲ್ಲ ಎಂದು ಹರಿಹಾಯ್ದರು.
ಜ. 9 ರಂದು ರಾಜ್ಯದಾದ್ಯಂತ ರೈಲು ಬಂದ್ ಮಾಡಿ ಹೋರಾಟ ನಡೆಸುವ ಜತೆಗೆ ಬೆಳಗಾವಿಯಲ್ಲಿ ಕನ್ನಡ ಧ್ವಜವನ್ನು ಹಾರಿಸಲು ಕನ್ನಡಪರ ಸಂಘಟನೆಗಳು ಸಿದ್ದಗೊಂಡಿವೆ. ಕನ್ನಡದ ಅಸ್ತಿತ್ವಕ್ಕಾಗಿ ಹೋರಾಟ ಅನಿವಾರ್ಯ, ನಮ್ಮನ್ನು ಜೈಲಿಗೆ ಹಾಕಿದರೂ ಚಿಂತೆಯಿಲ್ಲ ಹೋರಾಟ ಮಾಡಿಯೇ ತೀರುತ್ತೇವೆ ಎಂದರು.
ರಾಜ್ಯ ಸರ್ಕಾರದ ಅಧಿಕಾರಿಗಳಲ್ಲಿ ಹೊಂದಾಣಿಕೆ ಇಲ್ಲ ಎಂಬುದಕ್ಕೆ ಇಬ್ಬರು ಐಪಿಎಸ್ ಅಧಿಕಾರಿಗಳು ತಮಗೆ ಮನ ಬಂದಂತೆ ಕೆಸರೆರಚಾಟ, ಜಟಾಪಟಿ ನಡೆಸುತ್ತಿರುವುದೇ ಸಾಕ್ಷಿಯಾಗಿದೆ. ನಿರ್ಭಯ ನಿಧಿ ಟೆಂಡರ್‍ಗೆ ಸಂಬಂಧಿಸಿದಂತೆ ಅವ್ಯವಹಾರ ನಡೆದಿದೆ. ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಮುಖ್ಯ ಕಾರ್ಯದರ್ಶಿ ಮಾತಿಗೂ ಬೆಲೆ ಇಲ್ಲ. ನಿರ್ಭಯಾ ನಿಧಿ ಯೋಜನೆಗೆ 612 ಕೋಟಿ ಅವಶ್ಯಕತೆ ಇಲ್ಲ. ನಿರ್ಭಯ ಎನ್ನುವ ಹೆಸರಿನಲ್ಲಿ ಲೂಟಿ ಹೊಡೆಯಲು ಸಂಚು ನಡೆದಿದೆ. ಟ್ರಾಫಿಕ್‍ಗಳಲ್ಲೂ ಪೆÇಲೀಸರಂತೆ ಗೊಂಬೆ ನಿಲ್ಲಿಸಲಾಗಿತ್ತು. ಇದಕ್ಕಾಗಿ ಕೋಟಿ ಕೋಟಿ ಖರ್ಚಾಗಿತ್ತು. ಆದರೆ ಈಗ ಆ ಗೊಂಬೆಗಳೇ ಇಲ್ಲ ಎಂದು ದೂರಿದರು.
ಪೆÇಲೀಸರ ಹಿತರಕ್ಷಣೆಗಾಗಿ ಔರಾದ್‍ಕರ್ ವರದಿಯನ್ನು ಕೂಡಲೇ ಜಾರಿ ಮಾಡಬೇಕು. ಪೊಲೀಸರ ವಾಸದ ಮನೆಗಳು ಮೋರಿಯಾಗಿವೆ. ಅದನ್ನು ಸರಿಪಡಿಸಿ ಅನುಕೂಲ ಕಲ್ಪಿಸಬೇಕು ಎಂದ ಅವರು, ಜನವರಿ ಅಂತ್ಯದವರೆಗೂ ಕಾಯುತ್ತೇವೆ. ಅಷ್ಟರೊಳಗೆ ಔರಾದ್‍ಕರ್ ವರದಿ ಜಾರಿ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ