ಮಧ್ಯಪ್ರದೇಶ:
ಏಷ್ಯಾದಲ್ಲೇ ಅತ್ಯಂತ ಹಿರಿಯ ಆನೆ ಎನ್ನುವ ಖ್ಯಾತಿ ಪಡೆದಿದ್ದ ಮಧ್ಯಪ್ರದೇಶ ಪನ್ನಾ ಹುಲಿ ಮೀಸಲು ಪ್ರದೇಶದಲ್ಲಿದ್ದ ವತ್ಸಲಾ ತನ್ನ 100 ವಯಸ್ಸಿನಲ್ಲಿ ನಿಧನಳಾಗಿದ್ದಾಳೆ. ವತ್ಸಲಾಳ ಅಂತ್ಯಕ್ರಿಯೆಯನ್ನು ಪನ್ನಾ ಹುಲಿ ಮೀಸಲು ಪ್ರದೇಶದ ಅಧಿಕಾರಿಗಳು ಮತ್ತು ನೌಕರರು ಮಂಗಳವಾರ ನೆರವೇರಿಸಿದರು. ಈ ಆನೆಯನ್ನು ಕೇರಳದಿಂದ ಪನ್ನಾ ಹುಲಿ ಮೀಸಲು ಪ್ರದೇಶಕ್ಕೆ ಕರೆತರಲಾಗಿತ್ತು. ಅನೇಕ ವರ್ಷಗಳಿಂದ ಇಲ್ಲಿನ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ವತ್ಸಲಾ ಮೀಸಲು ಪ್ರದೇಶದಲ್ಲಿರುವ ಆನೆಗಳ ಸಂಪೂರ್ಣ ಗುಂಪನ್ನು ಮುನ್ನಡೆಸುತ್ತಿತ್ತು.
ವತ್ಸಲಾ ನಿಧನದ ಬಗ್ಗೆ ಮಾಹಿತಿ ನೀಡಿರುವ ಹುಲಿ ಮೀಸಲು ಪ್ರದೇಶದ ಅಧಿಕಾರಿಗಳು, ಏಷ್ಯಾದ ಅತ್ಯಂತ ಹಿರಿಯ ಆನೆ ಎಂದು ಪರಿಗಣಿಸಲಾಗಿದ್ದ ‘ವತ್ಸಲಾ’ ಮಂಗಳವಾರ ಮಧ್ಯಪ್ರದೇಶದ ಪನ್ನಾ ಹುಲಿ ಮೀಸಲು ಪ್ರದೇಶದಲ್ಲಿ ನಿಧನವಾಗಿದೆ. ಅದಕ್ಕೆ 100 ವರ್ಷ ವಯಸ್ಸಾಗಿತ್ತು. ಈ ಹೆಣ್ಣು ಆನೆಯನ್ನು ಕೇರಳದಿಂದ ನರ್ಮದಾಪುರಂಗೆ ಕರೆತರಲಾಗಿತ್ತು. ಬಳಿಕ ಅಲ್ಲಿಂದ ಪನ್ನಾ ಹುಲಿ ಮೀಸಲು ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ವತ್ಸಲಾಳ ಅಂತ್ಯಕ್ರಿಯೆಯನ್ನು ಪನ್ನಾ ಹುಲಿ ಮೀಸಲು ಪ್ರದೇಶದ ಅಧಿಕಾರಿಗಳು ಮತ್ತು ನೌಕರರು ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹಲವಾರು ವರ್ಷಗಳಿಂದ ಪನ್ನಾ ಹುಲಿ ಮೀಸಲು ಪ್ರದೇಶದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ವತ್ಸಲಾ ಇಲ್ಲಿನ ಅತ್ಯಂತ ಹಿರಿಯ ಆನೆಯಾಗಿದೆ. ಅದು ಈ ಮೀಸಲು ಪ್ರದೇಶದಲ್ಲಿರುವ ಆನೆಗಳ ಸಂಪೂರ್ಣ ಗುಂಪನ್ನು ಮುನ್ನಡೆಸುತ್ತಿತ್ತು. ಇತರ ಹೆಣ್ಣು ಆನೆಗಳು ಕರುಗಳಿಗೆ ಜನ್ಮ ನೀಡಿದಾಗ ವತ್ಸಲಾ ಅಜ್ಜಿಯ ಪಾತ್ರವನ್ನು ನಿರ್ವಹಿಸುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
ವತ್ಸಲಾಳ ಮುಂಭಾಗದ ಕಾಲುಗಳ ಉಗುರುಗಳಿಗೆ ಗಾಯಗಳಾಗಿದ್ದರಿಂದ ಅಭಯಾರಣ್ಯದ ಹಿನೌಟಾ ಪ್ರದೇಶದ ಖೈರೈಯಾನ್ ಚರಂಡಿ ಬಳಿ ಮಂಗಳವಾರ ಕುಳಿತಿದ್ದಳು. ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಮೇಲಕ್ಕೆತ್ತಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದರು. ಆದರೆ ಮಧ್ಯಾಹ್ನದ ವೇಳೆಗೆ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ.
ವಯಸ್ಸಾದ ಕಾರಣ ವತ್ಸಲಾ ತನ್ನ ದೃಷ್ಟಿಯನ್ನು ಕಳೆದುಕೊಂಡಿದ್ದಳು ಮತ್ತು ಆಕೆಯಿಂದ ಹೆಚ್ಚು ದೂರ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಅವಳನ್ನು ಹಿನೌಟಾ ಆನೆ ಶಿಬಿರದಲ್ಲಿ ಇರಿಸಲಾಗಿತ್ತು. ಪ್ರತಿದಿನ ಸ್ನಾನ ಮಾಡಲು ಖೈರೈಯಾನ್ ಚರಂಡಿಗೆ ಕರೆದೊಯ್ಯಲಾಗುತ್ತಿತ್ತು. ಆಕೆಗೆ ತಿನ್ನಲು ಗಂಜಿ ನೀಡಲಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪನ್ನಾ ಜಿಲ್ಲೆಯ ಹುಲಿ ಮೀಸಲು ಪ್ರದೇಶದಲ್ಲಿ ಪಶುವೈದ್ಯರು ಮತ್ತು ವನ್ಯಜೀವಿ ತಜ್ಞರು ವತ್ಸಲಾಳ ಆರೋಗ್ಯವನ್ನು ನಿಯಮಿತವಾಗಿ ಪರೀಕ್ಷಿಸುತ್ತಿದ್ದರು. ಸರಿಯಾದ ಆರೈಕೆಯಿಂದಾಗಿ ಅಭಯಾರಣ್ಯದ ವಿರಳ ಮತ್ತು ಒಣ ಅರಣ್ಯ ಪ್ರದೇಶದಲ್ಲಿ ವತ್ಸಲಾ ದೀರ್ಘಕಾಲ ಬದುಕಿದ್ದಳು ಎಂದು ತಿಳಿಸಿದ್ದಾರೆ.
ವತ್ಸಲಾ ಆನೆಗೆ ಗೌರವ ಸಲ್ಲಿಸಿರುವ ಮುಖ್ಯಮಂತ್ರಿ ಮೋಹನ್ ಯಾದವ್, ಶತಮಾನದ ಒಡನಾಟದ ಬಳಿಕ ‘ವತ್ಸಲಾ’ ಇಂದು ವಿರಾಮ ತೆಗೆದುಕೊಂಡಳು. ಮಂಗಳವಾರ ಮಧ್ಯಾಹ್ನ, ‘ವತ್ಸಲಾ’ ಪನ್ನಾ ಹುಲಿ ಅಭಯಾರಣ್ಯದಲ್ಲಿ ತನ್ನ ಅಂತಿಮ ಉಸಿರನ್ನು ತೆಗೆದುಕೊಂಡಿತು.ಆನೆ ಕರುಗಳನ್ನು ಪ್ರೀತಿಯಿಂದ ನೋಡಿಕೊಂಡಿದ್ದ ವತ್ಸಲಾ ಮಧ್ಯಪ್ರದೇಶದ ಭಾವನೆಗಳ ಸಂಕೇತವಾಗಿತ್ತು ಎಂದು ಹೇಳಿದ್ದಾರೆ.
ಅವಳು ಕೇವಲ ಆನೆಯಾಗಿರಲಿಲ್ಲ. ನಮ್ಮ ಕಾಡುಗಳ ಮೂಕ ರಕ್ಷಕಿ, ಪೀಳಿಗೆಗೆ ಸ್ನೇಹಿತೆ ಮತ್ತು ಮಧ್ಯಪ್ರದೇಶದ ಭಾವನೆಗಳ ಸಂಕೇತವಾಗಿದ್ದಳು. ಹುಲಿ ಅಭಯಾರಣ್ಯದ ಈ ಪ್ರೀತಿಯ ಸದಸ್ಯೆ ತನ್ನ ಕಣ್ಣುಗಳಲ್ಲಿ ಅನುಭವಗಳ ಸಮುದ್ರವನ್ನು ಹೊತ್ತಿದ್ದಳು. ಆಕೆ ಶಿಬಿರದ ಆನೆಗಳ ಗುಂಪನ್ನು ಮುನ್ನಡೆಸಿದ್ದಳು. ಅಜ್ಜಿಯಾಗಿ ಆನೆ ಮರಿಗಳನ್ನು ಪ್ರೀತಿಯಿಂದ ನೋಡಿಕೊಂಡಳು. ಅವಳು ಇಂದು ನಮ್ಮ ನಡುವೆ ಇಲ್ಲದಿದ್ದರೂ ಅವಳ ನೆನಪುಗಳು ನಮ್ಮ ಮಣ್ಣು ಮತ್ತು ಹೃದಯಗಳಲ್ಲಿ ಶಾಶ್ವತವಾಗಿ ವಾಸಿಸುತ್ತವೆ ಎಂದು ತಮ್ಮ ಹೇಳಿಕೆಯಲ್ಲಿ ಆಕೆಗೆ ಗೌರವ ಸಲ್ಲಿಸಿದ್ದಾರೆ.
