ತುಮಕೂರು:
ಮೊಟ್ಟೆ ಏರಿಕೆ : ಚಿಕನ್ ಯಥಾಸ್ಥಿತಿ : ಎಟುಕುತ್ತಿವೆ ಸೊಪ್ಪು, ಬೇಳೆ-ಕಾಳು
ಅಕಾಲಿಕ ಮಳೆಯಿಂದಾಗಿ ಕಳೆದ 2-3 ತಿಂಗಳಿನಿಂದ ಶತಕ ದಾಟಿದ್ದ ತರಕಾರಿ, ಸೊಪ್ಪಿನ ಬೆಲೆಗಳು ಇಳಿಕೆಯತ್ತ ಸಾಗಿದ್ದು, ಜನರ ಜೇಬುಗಳು ಕೊಂಚ ಹಗುರವಾಗಿವೆ. ಕಳೆದ ಹದಿನೈದು ದಿನಗಳಿಂದ ಮಳೆ ಇಲ್ಲವಾಗಿದ್ದು, ಮಳೆ ಬಿಡುವು ಕೊಟ್ಟಿದೆ. ಆದ್ದರಿಂದ ಮಾರುಕಟ್ಟೆಗೆ ಸೊಪ್ಪು-ತರಕಾರಿ ಹೆಚ್ಚಾಗಿ ಬರುತ್ತಿದ್ದು, ಬೆಲೆ ಇಳಿಕೆಯಾಗಲು ಕಾರಣವಾಗಿದೆ. ಸದ್ಯ ಎಲ್ಲಾ ಕಡೆ ಶುಭ ಸಮಾರಂಭಗಳು ಕಡಿಮೆ ಯಾಗಿದ್ದು, ಬೇಡಿಕ ಕಡಿಮೆಯಾದಂತೆ ತರಕಾರಿಗಳ ಬೆಲೆ ನಿಧಾನವಾಗಿ ಇಳಿಕೆಯತ್ತ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿವೆ.
ನೂರರ ಒಳಗೆ ಬಂದ ತರಕಾರಿ ಬೆಲೆ :
ಕಳೆದ ಕೆಲ ದಿನಗಳಿಂದ ನೂರರ ಗಡಿ ದಾಟಿದ್ದ ತರಕಾರಿಗಳ ಬೆಲೆಗಳು ಇಳುಮುಖವಾಗಿರುವುದು ನೆಮ್ಮದಿ ತಂದಿದೆ. ಬಹುತೇಕ ತರಕಾರಿ ಬೆಲೆಗಳು ಇಳಿ ಮುಖವಾಗಿರುವುದರಿಂದ ಜನರು ತರಕಾರಿ ಕೊಳ್ಳಲು ಮಾರುಕಟ್ಟೆಗೆ ಆಗಮಿಸುತ್ತಿರುವುದು ಕಂಡು ಬಂದಿದೆ. ಬೀನ್ಸ್ ಕೆ.ಜಿ. ಗೆ 10 ರೂ. ಇಳಿಕೆಯಾಗಿ, ಕೆ.ಜಿ 60-70 ಕ್ಕೆ ಮಾರಾಟವಾಗುತ್ತಿದೆ. ಟೊಮೆಟೊ ಬೆಲೆ ಕೂಡ 10 ರೂ. ಕಡಿಮೆಯಾಗಿದೆ. ಬದನೆಕಾಯಿ, ಗೆಡ್ಡೆಕೋಸು, ಎಲೆಕೋಸು, ಹಾಗಲಕಾಯಿ, ಹಸಿಮೆಣಸಿನಕಾಯಿ, ಕ್ಯಾಪ್ಸಿಕಂ ಸೇರಿದಂತೆ ಬಹುತೇಕ ತರಕಾರಿಗಳ ಬೆಲೆ ಇಳುಮುಖವಾಗಿದೆ. ಕಳೆದ ವಾರ ಕೆ.ಜಿ 50 ರಿಂದ 60 ರೂ. ಇದ್ದ ಮೂಲಂಗಿ ದರ ಕೆ.ಜಿ. ಗೆ 25 ರಿಂದ 30 ಕ್ಕೆ ಕುಸಿದಿದೆ. ಇದು ಅಂತರಸನಹಳ್ಳಿ ಮಾರುಕಟ್ಟೆಯ ಧಾರಣೆಯಾಗಿದ್ದು, ಚಿಲ್ಲರೆಯಾಗಿ ಹಾಗೂ ಇತರೆ ಮಾರುಕಟ್ಟೆಗಳಲ್ಲಿ ತರಕಾರಿಗಳ ಬೆಲೆ ಕಡಿಮೆಯಾಗಲು ಇನ್ನಷ್ಟು ಸಮಯ ಹಿಡಿಯಬಹುದು.
ಹಣ್ಣು ಬಲು ದುಬಾರಿ :
ಬಾಳೆಹಣ್ಣು ಬಿಟ್ಟರೆ ಇತರೆ ಹಣ್ಣುಗಳ ಬೆಲೆಗಳು ಇಳಿಕೆಯಾಗುತ್ತಿಲ್ಲ. ಮಿಕ್ಕ ಹಣ್ಣುಗಳ ಧಾರಣೆ ಮತ್ತಷ್ಟು ಏರಿಕೆಯಾಗಿದೆ. ದಾಳಿಂಬೆ ಮೂಸಂಬಿ, ಸಪೆÇೀಟ, ಸೀಬೆ, ಪೈನಾಪಲ್, ಕರಬೂಜ ಹಣ್ಣು ದುಬಾರಿಯಾಗಿದೆ. ಕೆ.ಜಿ ರೂ. 40 ಕ್ಕೆ ಸಿಗುತ್ತಿದ್ದ ಕಿತ್ತಳೆಹಣ್ಣು ಈ ವಾರ ಕೆಜಿಗೆ 10-20 ರೂ ಏರಿಕೆಯಾಗಿದೆ ಇದಕ್ಕೆ ಕಾರಣ ಕಿತ್ತಳೆ ಹಣ್ಣಿನ ಋತುಮಾನ ಮುಗಿಯುತ್ತಿದ್ದು, ಕೊಡಗಿನಿಂದ ಬರುತ್ತಿದ್ದ ರುಚಿಕರ ನಾಟಿ ಕಿತ್ತಳೆ ಹಣ್ಣಿನಲ್ಲಿ ಆವಕ ಕಡಿಮೆಯಾಗಿದೆ ಎನ್ನಲಾಗಿದೆ. ಹಬ್ಬಗಳ ಸಂದರ್ಭದಲ್ಲಿ ದುಬಾರಿಯಾಗುವ ಬಾಳೆಹಣ್ಣು ಮಾತ್ರ ಅಗ್ಗವಾಗಿ ದೊರೆಯುತಿದ್ದು ಏಲಕ್ಕಿ ಬಾಳೆಹಣ್ಣು ಕೆಜಿಗೆ ರೂ. 35-40 ಹಾಗೂ ಪಚ್ಚೆಬಾಳೆ ಕೆಜಿಗೆ 20 ರೂ.ಗೆ ದೊರೆಯುತ್ತಿದೆ.
ಬೇಳೆ-ಕಾಳು ಕೊಂಚ ಇಳಿಕೆ :
ಬೇಳೆ ಹಾಗೂ ಧಾನ್ಯಗಳ ಬೆಲೆಯಲ್ಲಿ ಏರಿಳಿತ ಮುಂದುವರೆದಿದೆ. ಉದ್ದಿನ ಬೇಳೆ ತುಸು ದುಬಾರಿಯಾಗಿದ್ದರೆ, ಹೆಸರು ಬೇಳೆ ಬೆಲೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇಳಿಕೆ ಕಂಡಿದ್ದ ಕಡಲೆ ಬೀಜ ಮತ್ತೆ ಕೊಂಚ ಏರಿಕೆ ದಾಖಲಿಸಿದೆ.
ಮೊಟ್ಟೆ ಏರಿಕೆ :
ಮೊಟ್ಟೆ ಬೆಲೆಯಲ್ಲಿ ಏರಿಕೆಯಾಗಿದೆ. ಕಳೆದ ವಾರ ಒಂದು ಡಜನ್ 72 ರೂ. ಇದ್ದ ಮೊಟ್ಟೆ ಬೆಲೆ ಈ ವಾರ 78 ರೂ.ಗೆ ಏರಿಕೆಯಾಗಿದ್ದು, ಪ್ರತಿ ಮೊಟ್ಟೆಗೆ 0.50 ಪೈಸೆಯಷ್ಟು ಬೆಲೆ ಏರಿದೆ. ಕ್ರಿಸ್‍ಮಸ್ ಹಾಗೂ ಹೊಸ ವರ್ಷಾಚರಣೆ ಸಮೀಪಿಸುತ್ತಿದ್ದು, ಮೊಟ್ಟೆ ಮತ್ತಷ್ಟು ಏರುವ ಸಾಧ್ಯತೆ ಇದೆ ಎನ್ನಲಾಗಿದೆ. ಚಿಕನ್ ಬೆಲೆ ಯಥಾಸ್ಥಿತಿ ಮುಂದುವರಿದಿದ್ದು ಹೊಸವರ್ಷದ ಸಂಭ್ರಮಾಚರಣೆ ಮುಗಿದ ನಂತರ ಹಾಗೂ ಮುಂದೆ ಸಂಕ್ರಾಂತಿ ಹಬ್ಬ, ಅಯ್ಯಪ್ಪ ಮಾಲಾಧಾರಿಗಳ ವ್ರತ ಇರುವುದರಿಂದ ಬೆಲೆ ಕೊಂಚ ಇಳಿಯ ಬಹುದು ಎನ್ನುತ್ತಾರೆ ಹುಳಿಯಾರಿನ ಕೋಳಿ ವ್ಯಾಪಾರಿ ಕರವೇ ಶ್ರೀನಿವಾಸ್.
ಹಣ್ಣುಗಳ ಧಾರಣೆ
(ಬೆಲೆ ಕೆ.ಜಿ ರೂ.)
ಸೇಬು 120-160
ದಾಳಿಂಬೆ 200
ಮೊಸಂಬಿ 80
ನಾಟಿ ಕಿತ್ತಳೆ 50-60
ಸಪೋಟ 60-80
ಏಲಕ್ಕಿ ಬಾಳೆ 35-40
ಪಚ್ಚ ಬಾಳೆ 20
ಪಪ್ಪಾಯ 25
ಕಲ್ಲಂಗಡಿ 30-40
ಕರಬೂಜ 70
ಸೀಬೆ 80
ಪೈನಾಪಲ್ 40-50
ದ್ರಾಕ್ಷಿ 160-180
ತರಕಾರಿ (ಬೆಲೆ ಕೆ.ಜಿ ರೂ.)
ಟೊಮೆಟೊ 50
ಈರುಳ್ಳಿ 25-30
ಆಲೂಗಡ್ಡೆ 25-30
ಬೀನ್ಸ್ 60-70
ಕ್ಯಾರೆಟ್ 50-60
ಬೀಟ್ರೂಟ್ 25-30
ಮೂಲಂಗಿ 50-60
ಗೆಡ್ಡೆಕೋಸು 70-80
ನುಗ್ಗೆಕಾಯಿ 100-120
ಬದನೆಕಾಯಿ 50-60
ಎಲೆಕೋಸು 60-50
ಹೂಕೋಸು 40-50
ಹಸಿ ಮೆಣಸಿನಕಾಯಿ 40-50
ಕ್ಯಾಪ್ಸಿಕಂ 70-80
ಮೊಟ್ಟೆ/ಮಾಂಸ ಬೆಲೆ (ಕೆ.ಜಿಗೆ)
ಬ್ರಾಯ್ಲರ್ 130
ಫಾರಂ 120
ನಾಟಿ ಕೋಳಿ ಮಾಂಸ 250-300
ಮಟನ್ 600-650
ಮೀನು (ಸಾಮಾನ್ಯ) 120-150
ಮೊಟ್ಟೆ (1 ಡಜನ್) 68
ಕೊಬ್ಬರಿ ಧಾರಣೆ
(ತಿಪಟೂರು)
ಪ್ರತಿ ಕ್ವಿಂಟಾಲ್
ಕನಿಷ್ಠ 15,000
ಗರಿಷ್ಠ 17,971
ಮಾದರಿ 17,911
ಒಟ್ಟು ಆವಕ–1076.72 ಕ್ವಿಂಟಾಲ್
(2504 ಚೀಲ)
-ಚಿದಾನಂದ್ ಹುಳಿಯಾರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ