ತುಮಕೂರು :
-ಸಾ.ಚಿ.ರಾಜಕುಮಾರ
ಕೊರೊನಾ ಪಾಸಿಟಿವ್‍ಗೆ ಒಳಗಾಗಿ ಆಸ್ಪತ್ರೆಗೆ ಬರುವವರೆಲ್ಲ ವೆಂಟಿಲೇಟರ್ ಬೇಕೆಂಬ ಬೇಡಿಕೆ ಇಡುತ್ತಿದ್ದಾರೆ. ಆದರೆ ಯಾರಿಗೆ ಈ ವೆಂಟಿಲೇಟರ್‍ಗಳ ಅಗತ್ಯವಿದೆ ಎಂಬುದನ್ನು ತಿಳಿದುಕೊಳ್ಳುವಲ್ಲಿ ವಿಫಲರಾಗುತ್ತಿರುವುದೇ ಸಮಸ್ಯೆಯ ಭೀಕರತೆಗೆ ಕಾರಣವಾಗುತ್ತಿದೆ.
ಕೋವಿಡ್ ಲಕ್ಷಣವುಳ್ಳ ರೋಗಿಗಳು, ಕೋವಿಡ್ ಪಾಸಿಟೀವ್ ದೃಢಪಟ್ಟವರು ಹಾಗೂ ಕೋವಿಡ್ ಜೊತೆ ಇತರೆ ರೋಗಗಳು ಇರುವವರು ಹೀಗೆ ರೋಗಿಗಳನ್ನು ವೈದ್ಯಕೀಯ ವಲಯ ಪ್ರತ್ಯೇಕಿಸಿ ನೋಡುತ್ತಿದೆ. ಯಾರಿಗೆ ಎಂತಹ ಚಿಕಿತ್ಸೆ ಅಗತ್ಯವಿದೆ ಎಂಬುದನ್ನು ವೈದ್ಯರೇ ನಿರ್ಧರಿಸಬೇಕು.
ಕೋವಿಡ್ ಲಕ್ಷಣವುಳ್ಳವರಿಗಾಗಿಯೇ ತುಮಕೂರು ನಗರ ಹಾಗೂ ಜಿಲ್ಲೆಯಾದ್ಯಂತ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ. ಸರ್ಕಾರ ನಿಗದಿಪಡಿಸಿರುವ ದಿನಗಳವರೆಗೆ ಈ ಕೇಂದ್ರದಲ್ಲಿ ಪ್ರತ್ಯೇಕವಾಗಿದ್ದರೆ ಸೋಂಕು ಹರಡುವುದನ್ನು ತಡೆಗಟ್ಟಬಹುದಲ್ಲದೆ, ಸರ್ಕಾರವೆ ನಿಗದಿಪಡಿಸಿರುವ ಕೆಲವೊಂದು ಮಾತ್ರೆ ಹಾಗೂ ರೋಗ ನಿರೋಧಕ ಶಕ್ತಿಯುಳ್ಳ ಮಾತ್ರೆಗಳನ್ನು ಸೇವಿಸಿ ಗುಣಮುಖರಾಗಿ ಹೊರಬರುವುದು ಸಾಮಾನ್ಯ.
ಕೋವಿಡ್ ದೃಢಪಟ್ಟು ಈಗಾಗಲೇ ರೋಗ ಉಲ್ಬಣಗೊಂಡಿದ್ದರೆ, ಅಂದರೆ ಶ್ವಾಸಕೋಶಕ್ಕೆ ವೈರಾಣು ತಲುಪಿದ್ದರೆ ಆಗ ರೋಗಿಯ ತೀವ್ರತೆಯನ್ನು ಅರಿತು ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಶ್ವಾಸಕೋಶದ ತೊಂದರೆ, ಉಸಿರಾಟದ ಸಮಸ್ಯೆ ಹಾಗೂ ಇತರೆ ರೋಗಗಳು ಇರುವ ಕೋವಿಡ್ ಸೋಂಕಿತರನ್ನು ಮಾತ್ರವೆ ವೆಂಟಿಲೇಟರ್‍ಗೆ ಒಳಪಡಿಸಲಾಗುತ್ತದೆ. ಇದು ಎಲ್ಲ ಹಂತಗಳಲ್ಲೂ ದಾಟಿದ ಕೊನೆಯ ಪ್ರಯತ್ನ.
ಜನತೆಗೆ ಈ ಮಾಹಿತಿಯ ಅರಿವಿಲ್ಲ. ಸ್ವಲ್ಪ ಸುಸ್ತಾದರೂ ಸಾಕು ಕೋವಿಡ್ ದೃಢಪಟ್ಟಿದೆ ಎಂದರೆ ಬದುಕುವುದೇ ಕಷ್ಟ ಎಂದೆಲ್ಲ ತಮಗೆ ತಾವೇ ನಿರ್ಧರಿಸಿ ಬೇಗ ಗುಣಮುಖರಾಗಲು ವೆಂಟಿಲೇಟರ್‍ಗೆ ಅವಕಾಶ ಕಲ್ಪಿಸಿ ಎಂದು ಇನ್ನಿಲ್ಲದ ಪ್ರಯತ್ನ ಪಡುತ್ತಾರೆ. ಆಸ್ಪತ್ರೆಗಳಿಗೆ ಎಡತಾಕುತ್ತಾರೆ. ಶಿಫಾರಸ್ಸು ಮಾಡಿಸುತ್ತಾರೆ. ಆಕ್ಸಿಜನ್ ಬೆಡ್ ಯಾವ ರೋಗಿಗಳಿಗೆ ಬೇಕು, ಸಾಮಾನ್ಯ ಬೆಡ್ ಎಂತಹವರಿಗೆ ಹಾಗೂ ಐಸಿಯು ವೆಂಟಿಲೇಟರ್ ಯಾವ ರೋಗಿಗೆ ಬೇಕೆಂಬುದನ್ನು ವೈದ್ಯರು ಹೇಳಬೇಕೇ ಹೊರತು ಅದು ರೋಗಿಯ ಕಡೆಯವರಿಂದಲ್ಲ.
ಕೋವಿಡ್ ಪಾಸಿಟೀವ್ ಬಂದಿರುವ ರೋಗಿಗಿಂತ ರೋಗಿಯ ಕಡೆಯವರೆ ಹೆಚ್ಚು ಘಾಸಿಗೆ ಒಳಗಾಗುತ್ತಿದ್ದಾರೆ. ರೋಗಿಗೆ ಮಾನಸಿಕವಾಗಿ ಧೈರ್ಯ ತುಂಬುವ ಬದಲು ಇವರು ಗಾಬರಿಯಾಗಿ ರೋಗಿಗೆ ಮತ್ತಷ್ಟು ಆತಂಕ ಉಂಟು ಮಾಡುತ್ತಾರೆ. ಪ್ರಾರಂಭದ ಹಂತದಲ್ಲಿಯೇ ಕೋವಿಡ್ ಸೋಂಕಿತರನ್ನು ಕುಸಿಯುವಂತೆ ಮಾಡುವುದೇ ಇಂತಹ ಪ್ರಯತ್ನಗಳು.
ವೆಂಟಿಲೇಟರ್‍ಗೆ ಹೋಗುವ ರೋಗಿಗಳು ಆರಂಭದಲ್ಲಿ ಚೆನ್ನಾಗಿಯೇ ಇರುತ್ತಾರೆ. ಅಲ್ಲಿ ಹೋದ ಮೇಲೆ ಮತ್ತಷ್ಟು ಕೃಷವಾಗಲು ಕಾರಣಗಳಿವೆ. 60 ವರ್ಷಕ್ಕಿಂತ ಹೆಚ್ಚಿನ ಹಿರಿಯರು ನಡೆದುಕೊಂಡೇ ಆಸ್ಪತ್ರೆಗೆ ಹೋಗುವವರಿದ್ದಾರೆ. ಹೋದ ಮೇಲೆ ವಾಪಸ್ ಬರುತ್ತಾರೆ ಎಂಬ ಖಾತ್ರಿ ಯಾರಿಗೂ ಇಲ್ಲ. ಕೆಲವರು ಬರಬಹುದು, ಬಾರದೇ ಇರಬಹುದು.
ಉಸಿರಾಟದ ವೆಂಟಿಲೇಟರ್ ಬಗ್ಗೆ ತಿಳಿಯುವುದಾದರೆ ಈ ಪ್ರಾಣ ರಕ್ಷಕ ಯಂತ್ರ ಕೆಲವರಿಗೆ ಮೃತ್ಯು ಯಂತ್ರವಾಗಿಯೇ ಬದಲಾಗಿದೆ. ವೆಂಟಿಲೇಟರ್‍ಗೆ ಬಿಟ್ಟುಬಿಟ್ಟರೆ ಸಾಕು ಅಲ್ಲಿ ಗುಣಮುಖರಾಗುತ್ತಾರೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ ಆ ಯಂತ್ರ ಯಾವ ರೀತಿ ಕೆಲಸ ನಿರ್ವಹಿಸುತ್ತದೆ ಎಂಬುದು ಹೊರಗೆ ಇರುವವರಿಗೆ ಹೇಗೆ ಗೊತ್ತಾಗಬೇಕು? ಒಮ್ಮೆ ರೋಗಿ ವೆಂಟಿಲೇಟರ್‍ಗೆ ಒಳಪಟ್ಟ ಮೇಲೆ ಆತನ ಸುತ್ತಮುತ್ತ ಯಾರೂ ಇರುವುದಿಲ್ಲ. ಪಕ್ಕದಲ್ಲೇ ಇರುವ ವೆಂಟಿಲೇಟರ್‍ನ ವ್ಯಕ್ತಿ ಸಾವಾಗಬಹುದು. ಅಲ್ಲಿನ ದೃಶ್ಯ ಮತ್ತಷ್ಟು ಭಯವನ್ನು ಉಂಟು ಮಾಡುತ್ತದೆ.
ಮೂಗಿಗೆ ಮಾಸ್ಕ್ ಹಾಕಿ ಪ್ಲಾಸ್ಟಿಕ್ ನಾಳಗಳನ್ನು ಶ್ವಾಸಕೋಶದವರೆಗೆ ಸಂಪರ್ಕ ಕಲ್ಪಿಸಲಾಗಿರುತ್ತದೆ. ಇರುವಷ್ಟು ದಿನಗಳ ಕಾಲ ಒಂಟಿಯಾಗಿ ಹಾಗೆಯೇ ಇರಬೇಕು. ಸರಾಗವಾಗಿ ಹೊರಗಡೆ ಓಡಾಡುವಂತಿಲ್ಲ. ಸ್ವಾಭಾವಿಕ ಕ್ರಿಯೆಗಳೆಲ್ಲ ಸ್ಥಗಿತಗೊಳ್ಳುತ್ತವೆ. ಬಹಳಷ್ಟು ದಿನಗಳ ಕಾಲ ವ್ಯಕ್ತಿ ವೆಂಟಿಲೇಟರ್‍ನಲ್ಲಿ ಇದ್ದರೆ ತನ್ನ ಮಾಂಸಖಂಡಗಳ ಸಾಮಥ್ರ್ಯ ಕಳೆದುಕೊಳ್ಳುತ್ತಾನೆ. ಹಿರಿಯ ರೋಗಿಗಳು, ಹೃದಯ ಸಂಬಂಧಿ, ಶ್ವಾಸಕೋಶ ಕಾಯಿಲೆ ಇರುವವರು ಅಲ್ಲಿನ ಪರಿಸ್ಥಿತಿ, ದೃಶ್ಯ ನೋಡಿಯೇ ಆಘಾತಕ್ಕೆ ಒಳಗಾಗುತ್ತಾರೆ. ಬಹುತೇಕ ಮಂದಿ ಸಾವನ್ನಪ್ಪುತ್ತಿರುವುದು ಮಾನಸಿಕ ಆಘಾತಕ್ಕೆ ಒಳಗಾಗಿ. ಹೀಗಾಗಿ ವೆಂಟಿಲೇಟರ್ ಎಲ್ಲರಿಗೂ ಅವಶ್ಯಕತೆ ಇರುವುದಿಲ್ಲ. ಬಹಳಷ್ಟು ಜನರಲ್ಲಿ ಇರುವ ಈ ತಪ್ಪು ತಿಳಿವಳಿಕೆಯನ್ನು ಹೋಗಲಾಡಿಸುವ ಅವಶ್ಯಕತೆ ಇದೆ. ಓರ್ವ ರೋಗಿಗೆ ರೋಗ ಉಲ್ಬಣವಾಗುತ್ತಿರುವಾಗ ಆತನಿಗೆ ಮಾನಸಿಕ ಸ್ಥೈರ್ಯದ ಜೊತೆಗೆ ರೋಗನಿರೋಧಕ ಶಕ್ತಿ ತರಿಸುವ ಚಿಕಿತ್ಸೆ ಅನಿವಾರ್ಯ. ಅದು ಯಾವುದೇ ರೂಪದಲ್ಲಿರಬಹುದು. ಆಕ್ಸಿಜನ್ ಯಾವಾಗಬೇಕು ಇತ್ಯಾದಿ ವ್ಯವಸ್ಥೆಗಳೆಲ್ಲವೂ ವೈದ್ಯರಿಂದಲೇ ನಿರ್ಧಾರವಾಗಬೇಕೇ ಹೊರತು ಅದನ್ನು ಪೋಷಕರು ನಿರ್ಧರಿಸಬಾರದು. ಆಸ್ಪತ್ರೆಯ ಒಂದು ಕೊಠಡಿಯಲ್ಲಿ ರೋಗಿಯನ್ನು ವೆಂಟಿಲೇಟರ್ ಒಳಗೆ ಹಾಕಿದರೆ ಗುಣಮುಖನಾಗಬಲ್ಲ ರೋಗಿಯೂ ಮಾನಸಿಕವಾಗಿ ದೃತಿಗೆಡುತ್ತಾನೆ ಎಂಬ ಒಂದಷ್ಟು ಎಚ್ಚರಿಕೆ ಸದಾ ಇರಬೇಕು.
ಶೇ.5 ರಷ್ಟು ರೋಗಿಗಳಿಗೆ ಮಾತ್ರ ಅಗತ್ಯ :
ಜನರಲ್ಲಿ ಇದೊಂದು ತಪ್ಪು ತಿಳಿವಳಿಕೆ ಶುರುವಾಗಿದೆ. ಕೋವಿಡ್ ಬಾಧಿತ ನೂರು ಜನರಲ್ಲಿ ಕೇವಲ 3 ರಿಂದ 5 ಜನರಿಗೆ ಮಾತ್ರವೆ ವೆಂಟಿಲೇಟರ್ ಬೇಕಾಗಬಹುದು. ಅದೂ ತುಂಬಾ ಕ್ರಿಟಿಕಲ್ ಇರುವವರಿಗೆ ಮಾತ್ರ. ಎರಡು ರೀತಿಯ ಐಸಿಯು ಮತ್ತು ಎನ್‍ಐಯು ಎರಡು ರೀತಿಯ ವೆಂಟಿಲೇಟರ್ ವ್ಯವಸ್ಥೆ ಇದೆ. ಕೆಲವೊಂದು ಸಂದರ್ಭ ಪೈಪ್ ಹಾಕಬಹುದು. ಇನ್ನು ಕೆಲವು ಸಂದರ್ಭ ಪೈಪ್ ಇಲ್ಲದೆಯೇ ವೆಂಟಿಲೇಟರ್ ಅಳವಡಿಸಬಹುದು. ಇದೆಲ್ಲವೂ ವೈದ್ಯರ ಸಲಹೆಯಂತೆಯೇ ನಿರ್ಧರಿತವಾಗಬೇಕು. ಆದರೆ ಜನರಿಗೆ ಬೇಗ ಗುಣಮುಖರಾದರೆ ಸಾಕು ಎಂಬ ಧಾವಂತದಲ್ಲಿ ವೆಂಟಿಲೇಟರ್ ಬೇಕೆಂದು ಬೇಡಿಕೆ ಇಡುತ್ತಾರೆ.
-ಡಾ.ಬಸವರಾಜು, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು.
ಶೇ.5ರಷ್ಟು ಮಾತ್ರವೆ ಚೇತರಿಕೆ
ಶ್ವಾಸಕೋಶಕ್ಕೆ ಹಾನಿಯಾದಾಗ ಆಮ್ಲಜನಕ ನೀಡಬೇಕಾಗುತ್ತದೆ. ದೇಹದಲ್ಲಿ ಆಮ್ಲಜನಕದ ಪ್ರಮಾಣ ಶೇ.90ಕ್ಕಿಂತ ಕಡಿಮೆಯಾದಾಗ ಆಕ್ಸಿಜನ್, ಆನಂತರ ಎರಡನೇ ಹಂತವಾಗಿ ಹೈಫ್ಲೋ ಆಕ್ಸಿಜನ್ (ಎಚ್.ಎಫ್.ಎನ್.ಸಿ.) ನೀಡಲಾಗುತ್ತದೆ. ಬಹಳಷ್ಟು ರೋಗಿಗಳು ಈ ಎರಡನೇ ಹಂತದಲ್ಲಿಯೇ ಗುಣಮುಖರಾಗುತ್ತಾರೆ. ಈ ಹಂತದಲ್ಲಿ 60 ರಿಂದ 80 ಲೀಟರ್ ಆಕ್ಸಿಜನ್ ಕೊಡಮಾಡಲಾಗುತ್ತದೆ. ಈ ಎಲ್ಲಾ ಪ್ರಯತ್ನಗಳು ಮುಗಿದು ಕೊನೆಯ ಹಾಗೂ ಅಂತಿಮ ಹಂತವಾಗಿ ವೆಂಟಿಲೇಟರ್ ಬಳಸಬೇಕು. ಒಮ್ಮೆ ವೆಂಟಿಲೇಟರ್‍ಗೆ ರೋಗಿಯನ್ನು ಅಳವಡಿಸಿತೆಂದರೆ ಗುಣಮುಖರಾಗಿ ಬರುವುದು ನೂರರಲ್ಲಿ ಶೇ. ಐದರಷ್ಟು ರೋಗಿಗಳು ಮಾತ್ರ. ಹೀಗಾಗಿ ಎಲ್ಲರಿಗೂ ವೆಂಟಿಲೇಟರ್‍ಗಳ ಅವಶ್ಯಕತೆ ಇರುವುದಿಲ್ಲ.
-ಡಾ.ಮುರಳೀಧರ್, ಫಿಷಿಜಿಯನ್.
ಭಯದಿಂದಾಗುವ ಸಾವುಗಳೇ ಹೆಚ್ಚು
ಓರ್ವ ರೋಗಿಯ ಗಂಭೀರತೆ ಮತ್ತು ಚೇತರಿಕೆಯ ಪ್ರಮಾಣ ಆತನ ವಯಸ್ಸು ಮತ್ತು ಕಾಯಿಲೆಯನ್ನು ಅವಲಂಬಿಸಿರುತ್ತದೆ. ವಯಸ್ಸಿನ ಜೊತೆಗೆ ಇತರೆ ಕಾಯಿಲೆಗಳು ಅಂದರೆ ಕೋಮಾರ್ಬಿಡಿಟಿ-ಸಕ್ಕರೆ ಕಾಯಿಲೆ, ಕಿಡ್ನಿ ಸಮಸ್ಯೆ, ಬಿ.ಪಿ. ಇತ್ಯಾದಿಗಳು ಇದ್ದರೆ ಸಮಸ್ಯೆ ಉಲ್ಬಣಗೊಳ್ಳುವುದು ಸಹಜ. ಆಮ್ಲಜನಕ ಸಾಂದ್ರತೆ 90 ರಿಂದ 95ರ ವರೆಗೆ ಇರುವವರು ಆತಂಕ ಪಡಬೇಕಾಗಿಲ್ಲ. 85 ಕ್ಕಿಂತ ಕಡಿಮೆಯಾದರೆ ಮಾತ್ರವೆ ಅಂತಹವರಿಗೆ ಆಮ್ಲಜನಕದ ಅಗತ್ಯತೆ ಇರುತ್ತದೆ. ರೋಗನಿರೋಧಕ ಶಕ್ತಿ ಕಡಿಮೆ ಇದ್ದಾಗ, ಉಸಿರಾಟಕ್ಕೆ ತೊಂದರೆಯಾಗಿ ರೋಗಿ ಗಂಭೀರ ಸ್ಥಿತಿಗೆ ತಲುಪಿದಾಗ ಮಾತ್ರವೆ ಐಸಿಯು ವೆಂಟಿಲೇಟರ್ ಬೇಕು. ಉಳಿದಂತೆ ಎಲ್ಲ ರೋಗಿಗಳಿಗೂ ಅವಶ್ಯಕತೆ ಇರುವುದಿಲ್ಲ.
-ಡಾ.ಲಕ್ಷ್ಮೀಕಾಂತ್, ಫಿಜಿಷಿಯನ್.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ