ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ವಿಭು ಬಖ್ರು ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: 

   ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾಗಿ ವಿಭು ಬಖ್ರು  ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರು ಪ್ರಮಾಣ ವಚನ ಬೋಧಿಸಿದರು. ರಾಜಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪಾಲ್ಗೊಂಡು, ನೂತನ ಮುಖ್ಯ ನ್ಯಾಯಮೂರ್ತಿಗಳಿಗೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಸಭಾಪತಿಗಳಾದ ಬಸವರಾಜ ಹೊರಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

   ಕರ್ನಾಟಕ ಹೈಕೋರ್ಟ್‌  ನೂತನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ವಿಭು ಬಖ್ರು  ಅವರನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ನೇಮಿಸಿ ಆದೇಶ ಹೊರಡಿಸಿತ್ತು.

   ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿರುವ ನ್ಯಾ.ವಿಭು ಬಖ್ರು ಅವರು 1966ರಲ್ಲಿ ನಾಗಪುರದಲ್ಲಿ ಜನಿಸಿದರು. ಅವರು ದೆಹಲಿಯ ಮಥುರಾ ರಸ್ತೆಯಲ್ಲಿರುವ ದೆಹಲಿ ಪಬ್ಲಿಕ್‌ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದು, 1987ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿದ್ದಾರೆ. 1989ರಲ್ಲಿ ಚಾರ್ಟರ್ಡ್‌ ಅಕೌಂಟೆಂಟ್‌ ಆಗಿಯೂ ಅರ್ಹತೆ ಪಡೆದಿದ್ದರು. ಆನಂತರ 1990ರಲ್ಲಿ ಎಲ್‌ಎಲ್‌ಬಿ ಪದವಿ ಪಡೆದು, ಅದೇ ವರ್ಷ ದೆಹಲಿ ವಕೀಲರ ಪರಿಷತ್‌ನಲ್ಲಿ ವಕೀಲರಾಗಿ ನೋಂದಣಿ ಮಾಡಿಸಿದ್ದರು.

   ನ್ಯಾ. ಭಕ್ರು ಅವರು ವಕೀಲರಾಗಿದ್ದ ಅವಧಿಯಲ್ಲಿ ಸುಪ್ರೀಂ ಕೋರ್ಟ್‌, ದೆಹಲಿ ಹೈಕೋರ್ಟ್‌, ಕಂಪನಿ ಕಾನೂನು ಮಂಡಳಿ ಮತ್ತು ಇತರೆ ನ್ಯಾಯ ಮಂಡಳಿಗಳಲ್ಲಿ ವಕೀಲಿಕೆ ಮಾಡಿದ್ದಾರೆ. 2011ರಲ್ಲಿ ಹಿರಿಯ ವಕೀಲರಾಗಿ ಅವರು ಪದೋನ್ನತಿ ಪಡೆದಿದ್ದರು. 2013ರ ಏಪ್ರಿಲ್‌ 17ರಂದು ದೆಹಲಿ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು 2015ರ ಮಾರ್ಚ್‌ 18ರಂದು ಕಾಯಂಗೊಂಡಿದ್ದರು. 

   ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಕೊಲಿಜಿಯಂ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ನ್ಯಾ.ವಿಭು ಬಖ್ರು ಅವರ ಹೆಸರನ್ನು ಶಿಫಾರಸು ಮಾಡಿತ್ತು.

Recent Articles

spot_img

Related Stories

Share via
Copy link