ವಿಕ್ಕಿ ಕೌಶಲ್‌ ಜತೆಗಿನ ʼಛಾವಾʼಕ್ಕೆ ಭರ್ಜರಿ ಓಪನಿಂಗ್‌….!

ಮುಂಬೈ: 

      ಕಳೆದ ವರ್ಷಾಂತ್ಯದಲ್ಲಿ ತೆರೆಕಂಡ ಟಾಲಿವುಡ್‌ನ ʼಪುಷ್ಪ 2ʼ   ಚಿತ್ರದ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದ ರಶ್ಮಿಕಾ ಮಂದಣ್ಣ   ಇದೀಗ ತಮ್ಮ ಜೈತ್ರಯಾತ್ರೆಯನ್ನು ಬಾಲಿವುಡ್‌ನಲ್ಲಿಯೂ ಮುಂದುವರಿಸಿದ್ದಾರೆ. ಫೆ. 14ರಂದು ರಿಲೀಸ್‌ ಆದ ವಿಕ್ಕಿ ಕೌಶಲ್‌   ಜತೆ ರಶ್ಮಿಕಾ ಮೊದಲ ಬಾರಿ ತೆರೆ ಹಂಚಿಕೊಂಡ ʼಛಾವಾʼ ಚಿತ್ರ ಭರ್ಜರಿ ಓಪನಿಂಗ್‌ ಪಡೆದುಕೊಂಡಿದೆ  . ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಂಭಾಜಿ ಮಹಾರಾಜರ ಜೀವನದ ಮೇಲೆ ಬೆಳಕು ಚೆಲ್ಲುವ ಈ ಚಿತ್ರಕ್ಕೆ ಪ್ರೇಕ್ಷಕರು ಜೈ ಎಂದಿದ್ದಾರೆ. ಇದರ ಪರಿಣಾಮ ಉತ್ತಮ ಗಳಿಕೆ ಕಂಡು ಬರುತ್ತಿದೆ. ಆ ಮೂಲಕ ಈ ವರ್ಷ ಮೊದಲ ದಿನ ಅತೀ ಹೆಚ್ಚು ಗಳಿಸಿದ ಚಿತ್ರ ಎನಿಸಿಕೊಂಡಿದೆ. ಲಕ್ಷ್ಮಣ್‌ ಉಟೇಕರ್‌ ನಿರ್ದೇಶದ ಈ ಚಿತ್ರ ಅದ್ಧೂರಿ ಮೇಕಿಂಗ್‌ನಿಂದಲೇ ಗಮನ ಸೆಳೆದಿದೆ. 

     2025ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ʼಛಾವಾʼ ಇದೀಗ ಬಾಕ್ಸ್‌ ಅಫೀಸ್‌ನಲ್ಲಿ ಅಬ್ಬರಿಸುತ್ತಿದೆ. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಪಾಸಿಟಿವ್‌ ಪ್ರತಿಕ್ರಿಯೆ ಪಡೆದುಕೊಂಡ ಈ ಸಿನಿಮಾ ಮೊದಲ ದಿನ ಭಾರತದಲ್ಲಿ ಬರೋಬ್ಬರಿ 33.1 ಕೋಟಿ ರೂ. ಬಾಚಿಕೊಂಡಿದೆ. ಇನ್ನು ಜಾಗತಿಕ ಗಲ್ಲಾ ಪೆಟ್ಟಿಗೆಯಲ್ಲಿ 10 ಕೋಟಿ ರೂ. ತನ್ನದಾಗಿಸಿಕೊಂಡಿದೆ. ಸಂಭಾಜಿ ಮಹಾರಾಜರ ಪಾತ್ರವನ್ನು ವಿಕ್ಕಿ ಕೌಶಲ್‌ ಜೀವಿಸಿದ್ದು, ಮತ್ತೊಂದು ರಾಷ್ಟ್ರ ಪ್ರಶಸ್ತಿ ಖಚಿತ ಎನ್ನುವ ಮಾತುಗಳೂ ಕೇಳಿ ಬಂದಿವೆ. ಬಾಲಿವುಡ್‌ ಸೂಪರ್‌ ಸ್ಟಾರ್‌ ಅಕ್ಷಯ್‌ ಕುಮಾರ್‌ ಅಭಿನಯದ ʼಸ್ಕೈ ಫೋರ್ಸ್‌ʼ ಚಿತ್ರದ ಕಲೆಕ್ಷನ್‌ ಅನ್ನೂ ಮೀರಿ ʼಛಾವಾʼ ಮೊದಲ ದಿನ ಪ್ರೇಕ್ಷಕರನ್ನು ಇಂಪ್ರೆಸ್‌ ಮಾಡಿದೆ. ʼಸ್ಕೈ ಫೋರ್ಸ್‌ʼ ಮೊದಲ ದಿನ 15 ಕೋಟಿ ರೂ. ಗಳಿಸಿತ್ತು. ಶನಿವಾರ ಮತ್ತು ಭಾನುವಾರ ʼಛಾವಾʼದ ಕಲೆಕ್ಷನ್‌ ಅಧಿಕವಾಗುವ ಸಾಧ್ಯತೆ ಇದೆ.

   ಮರಾಠಿ ಲೇಖಕ ಶಿವಾಜಿ ಸಾವಂತ್‌ ಅವರ ʼಛಾವಾʼ ಕಾದಂಬರಿಯನ್ನು ಆಧರಿಸಿ ಈ ಚಿತ್ರವನ್ನು ತಯಾರಿಸಲಾಗಿದೆ. ಸಂಭಾಜಿ ಮಹಾರಾಜ ಅವರ ಪತ್ನಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು, ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಸಿಕ್ಕ ಅವಕಾಶವನ್ನು ಅವರು ಸದುಪಯೋಗ ಪಡಿಸಿಕೊಂಡಿದ್ದು, ಅವರ ಲುಕ್‌ಗೆ ಪ್ಯಾನ್ಸ್‌ ಫಿದಾ ಆಗಿದ್ದಾರೆ. ಅವರ ಧ್ವನಿ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು ಬಿಟ್ಟರೆ ಮಿಕ್ಕಂತೆ ಅವರ ಅಭಿನಯಕ್ಕೆ ಧನಾತ್ಮಕ ಪ್ರತಿಕ್ರಿಯೆ ಲಭಿಸಿದೆ. 

   ಇನ್ನು ಔರಂಗಜೇಬ್‌ ಪಾತ್ರದಲ್ಲಿ ಅಕ್ಷಯ್‌ ಖನ್ನಾ ಅಬ್ಬರಿದ್ದಾರೆ. ಆಶುತೋಷ್‌ ರಾಣಾ, ಡಯಾನಾ ಪೆಂಟಿ, ದಿವ್ಯಾ ದತ್ತಾ, ವಿನೀತ್‌ ಕುಮಾರ್‌ ಸಿಂಗ್‌ ಮತ್ತಿತರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎ.ಆರ್‌.ರೆಹಮಾನ್‌ ಅವರ ಸಂಗೀತ ಕೂಡ ಗಮನ ಸೆಳೆದಿದೆ.

   ಮೊದಲಿಗೆ ʼಛಾವಾʼ ಚಿತ್ರವನ್ನು ಕಳೆದ ಡಿ. 6ರಂದು ತೆರೆಗೆ ತರಲು ಸಿದ್ಧತೆ ನಡೆಸಲಾಗಿತ್ತು. ಆದರೆ ʼಪುಷ್ಪ 2ʼ ಚಿತ್ರ ಅದೇ ವೇಳೆ ಬಿಡುಗಡೆಯಾದ ಹಿನ್ನೆಲೆಯಲ್ಲಿ ಫೆ. 14ಕ್ಕೆ ಮುಂದೂಡಲಾಗಿತ್ತು. ಸದ್ಯ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಖುಷ್‌ ಆಗಿದೆ.