ಬೆಂಗಳೂರು:
ಬೆಂಗಳೂರು ನಗರ ವೇಗಗತಿಯಲ್ಲಿ ಬೆಳೆಯುತ್ತಿದ್ದರೂ ಮೂಲಭೂತ ಸೌಕರ್ಯಗಳ ಕೊರತೆ ಮಾತ್ರ ಜನರನ್ನು ಕಾಡುತ್ತಲೇ ಇದೆ. ಇದಕ್ಕೆ ಉದಾಹರಣೆ ಎಂದರೆ ರಾಜ್ಯದ ಶಕ್ತಿಕೇಂದ್ರವಾಗಿರುವ ವಿಧಾನಸೌಧ ಬಳಿಯೇ ಬಸ್ ತಂಗುದಾಣವಿಲ್ಲದಿರುವುದು.ಈ ಪ್ರದೇಶದಲ್ಲಿ ಪ್ರತೀ ನಿತ್ಯ ಸರ್ಕಾರಿ ನೌಕರರು ಸೇರಿದಂದೆ ನೂರಾರು ಜನರು ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಸುತ್ತಿರುತ್ತಾರೆ. ಸೂಕ್ತ ಬಸ್ ತಂಗುದಾಣವಿಲ್ಲದ ಕಾರಣ, ಮಳೆ, ಗಾಳಿ, ಬಿಸಿಲಿನಲ್ಲಿ ನಿಲ್ಲಬೇಕಾಗಿದೆ.
ಕಚೇರಿಗಳಿಗೆ ಹೋಗುವವರು, ಬಿಎಂಟಿಸಿ ಬಸ್ಗಳನ್ನು ಅವಲಂಬಿಸಿರುವ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಪ್ರಯಾಣಿಕರು ಪ್ರತೀನಿತ್ಯ ಸಂಕಷ್ಟ ಎದುರಿಸುತ್ತಿದ್ದಾರೆ.ವಿಧಾನಸೌಧ ಗೇಟ್ 1 ರ ಪಕ್ಕದಲ್ಲಿರುವ ಮೆಟ್ರೋ ಎಕ್ಸಿಟ್ ಎ ಬಳಿಯ ಬಿಎಂಟಿಸಿ ಬಸ್ ತಂಗುದಾಣವಿಲ್ಲದ ಕಾರಣ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಮಧ್ಯಾಹ್ನ ಬಿರು ಬಿಸಿಲಿರುತ್ತದೆ. ಮಳೆಯ ಸಮಯದಲ್ಲಂತೂ ಸಂಕಷ್ಟ ಹೇಳತೀರದು. ಬಸ್ ಗಾಗಿ ಕಾದು ನಿಲ್ಲುವ ಜನರಿಗೆ ನಿಲ್ಲಲು ಸ್ಥಳವಿಲ್ಲ. ಸರ್ಕಾರ ಮೂಲಭೂತ ಸೌಕರ್ಯ ಒದಗಿಸುವಲ್ಲಿ ವಿಫಲವಾಗಿದೆ ಎಂದು ಎಂಎಸ್ ಬಿಲ್ಡಿಂಗ್ನಲ್ಲಿರುವ ಸರ್ಕಾರಿ ಕಚೇರಿಯ ಸಿಬ್ಬಂದಿ ರಮೇಶ್ ಎಂಬುವವರು ಬೇಸರ ವ್ಯಕ್ತಪಡಿಸಿದ್ದಾರೆ.
ದೈನಂದಿನ ಪ್ರಯಾಣಿಕರಾದ ನಂಜುಂಡಮ್ಮ ಎಂಬುವವರು ಮಾತನಾಡಿ, ಕುಳಿತುಕೊಳ್ಳಲು ಸ್ಥಳವಿಲ್ಲದ ಕಾರಣ, ನಾನು ಪಾದಚಾರಿ ಮಾರ್ಗದಲ್ಲಿ ಕುಳಿತುಕೊಳ್ಳುತ್ತೇನೆ. ಆಟೋರಿಕ್ಷಾಗಳು ಬಸ್ ನಿಲ್ಲುವ ಸ್ಥಳದಲ್ಲಿಯೇ ನಿಲ್ಲುತ್ತವೆ. ಕೆಲವೊಮ್ಮೆ ನನಗೆ ರಸ್ತೆಯಲ್ಲಿ ನಿಲ್ಲುವುದನ್ನು ಬಿಟ್ಟು ಬೇರೆ ದಾರಿಯಿಲ್ಲದಂತಾಗುತ್ತದೆ. ಪಾದಚಾರಿ ಮಾರ್ಗದಲ್ಲಿ ಕುಳಿತರೆ, ಆಟೋಗಳು ನಿಂತಿದ್ದರೆ. ಪ್ರಯಾಣಿಕರಿಲ್ಲ ಎಂದು ಭಾವಿಸಿ ಬಸ್ ಚಾಲಕರು ಬಸ್ ನಿಲ್ಲಿಸದೆ ಮುಂದೆ ಹೊರಟು ಹೋಗಿರುತ್ತಾರೆ. ಪ್ರತೀನಿತ್ಯ ನಾವು ಸಮಸ್ಯೆ ಎದುರಿಸುತ್ತಿರುತ್ತೇವ. ಆಧಿಕಾರಿಗಳು ಮಾತ್ರ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧ ಮೆಟ್ರೋ ನಿಲ್ದಾಣದ ಭದ್ರತಾ ಸಿಬ್ಬಂದಿಯೊಬ್ಬರು ಮಾತನಾಡಿ, ಸಾಕಷ್ಟು ಪ್ರಯಾಣಿಕರು ಬಿಸಿಲು ಹಾಗೂ ಮಳೆಯಲ್ಲಿ ನಿಂತು ಕಷ್ಟಪಡುತ್ತಿರುವುದನ್ನು ನೋಡುತ್ತಿರುತ್ತೇನೆ. ಬಿಸಿಲು ಹೆಚ್ಚಾಗಿದ್ದಾಗ ಕೆಲವರು ಮೆಟ್ರೋ ನಿಲ್ದಾಣದ ಬಳಿ ನಿಲ್ಲುತ್ತಾರೆಂದು ಹೇಳಿದ್ದಾರೆ.
ಈ ಬಗ್ಗೆ BMRCL ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಬಸ್ ನಿಲ್ದಾಣ ಸ್ಥಾಪನೆ ಮಾಡಿದರೆ ಇದರಿಂದ ಭದ್ರತೆಗೆ ಯಾವುದೇ ತೊಡಕುಗಳು ಎದುರಾಗುವುದಿಲ್ಲ ಎಂದು ವಿಧಾನಸೌಧ ಭದ್ರತಾ ಪೊಲೀಸರು ತಿಳಿಸಿದ್ದಾರೆಂದು ತಿಳಿಸಿದ್ದಾರೆ.ಪೂರ್ವ ವಲಯ ಆಯುಕ್ತೆ ಸ್ನೇಹಲ್ ಆರ್ ಅವರು ಮಾತನಾಡಿ, ಸಮಸ್ಯೆಯ ಬಗ್ಗೆ ತಿಳಿದಿರಲಿಲ್ಲ. ಬಸ್ ನಿಲ್ದಾಣ ವ್ಯವಸ್ಥೆ ಕಲ್ಪಿಸುವ ಕುರಿತು ಶೀಘ್ರದಲ್ಲೇ ಕೆಲಸಗಳು ಪ್ರಾರಂಭವಾಗಲಿದೆ ಎಂಂದು ಹೇಳಿದ್ದಾರೆ