ಹಾಸನ:
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಿರೀಕ್ಷಿಸಿದಷ್ಟು ಅಂಕ ಬಾರದ ಹಿನ್ನೆಲೆಯಲ್ಲಿ ಮನನೊಂದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದು ಜಿಲ್ಲೆಯ ಅರಸೀಕೆರೆಯಲ್ಲಿ ನಡೆದಿದೆ. ಶೇ. 79 ಅಂಕ ಬಂದಿದ್ದರೂ ಕಡಿಮೆ ಎಂದು ವಿದ್ಯಾರ್ಥಿ ಪ್ರಾಣಬಿಟ್ಟಿದ್ದಾನೆ. ಶಿಕ್ಷಕ ಪ್ರಕಾಶ್ ಅವರ ಪುತ್ರ ಮನೋಜ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಫಲಿತಾಂಶ ನೋಡಿ ಬಂದ ಮನೋಜ್ ಮಂಗಳವಾರ ರಾತ್ರಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅರಸೀಕೆರೆ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.
ಅರಸೀಕೆರೆಯ ಅನಂತ ಪಿಯು ಕಾಲೇಜಿನಲ್ಲಿ ಮನೋಜ್ ಪಿಸಿಎಂಬಿ ಸೈನ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ. ದ್ವಿತೀಯ ಪಿಯು ಫಲಿತಾಂಶದಲ್ಲಿ ಶೇ. 79 ಅಂಕ ಬಂದಿತ್ತು. ಕನ್ನಡ-98, ಇಂಗ್ಲಿಷ್- 85, ಫಿಸಿಕ್ಸ್-71, ಕೆಮಿಸ್ಟ್ರಿ- 74, ಮ್ಯಾಥ್ಸ್- 82 ಮತ್ತು ಬಯಾಲಜಿ-64 ಒಟ್ಟು-474 ಅಂಕ ಪಡೆದುಕೊಂಡಿದ್ದ. ಆದರೆ, ತಾನು ಅಂದುಕೊಂಡಿದ್ದಕ್ಕಿಂತ ಕಡಿಮೆ ಅಂಕ ಬಂದಿದೆ ಎಂದು ಮನನೊಂದಿದ್ದ ಮನೋಜ್ ರಾತ್ರಿ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ.
ಎಸ್ಎಸ್ಎಲ್ಸಿಯಲ್ಲಿ ಮನೋಜ್ ಶೇ. 98 ಅಂಕ ಪಡೆದಿದ್ದ. ಆದರೆ, ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಮನೋಜ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
