ಕಾರವಾರ:
ಮೊಬೈಲ್ ನೋಡಬೇಡ ಎಂದು ತಂದೆ ಮಗನಿಗೆ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಮಂಗಳವಾಡ ಗ್ರಾಮದಲ್ಲಿ ನಡೆದಿದೆ.
ಹಳಿಯಾಳದ ಸರ್ಕಾರಿ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಓಂ ಕದಂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿ ಪ್ರತಿದಿನ ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತಿದ್ದ ಮಗನಿಗೆ ತಂದೆ ಮನೋಹರ್ ಮೊಬೈಲ್ ನೋಡದಂತೆ ಬುದ್ದಿವಾದ ಹೇಳುತ್ತಿದ್ದರು. ಮಾತು ಕೇಳದೇ ಓಂ ಕದಂ ಹಠಕ್ಕೆ ಬಿದ್ದು ಮೊಬೈಲ್ ನೋಡುತ್ತಿದ್ದ. ಮಂಗಳವಾರ ರಾತ್ರಿ ಮೊಬೈಲ್ ನೋಡುತ್ತಿದ್ದ ಮಗನಿಗೆ ಗದರಿಸಿ ಮೊಬೈಲ್ ಕಸಿದುಕೊಂಡು, ಓದಿಕೊಳ್ಳುವಂತೆ ತಂದೆ ಮನೋಹರ್ ಬುದ್ದಿವಾದ ಹೇಳಿದ್ದರು.
ಇದರಿಂದ ಮನನೊಂದು ಓಂ ಕದಂ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣ ಹಳಿಯಾಳದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ ಆತ ಬದುಕುಳಿಯಲಿಲ್ಲ. ಘಟನೆ ಸಂಬಂಧ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.