ತೆಲಂಗಾಣ :
ನಟ ವಿಜಯ್ ದೇವರಕೊಂಡ ಅವರು ರಶ್ಮಿಕಾ ಮಂದಣ್ಣ ಜೊತೆ ಹಲವು ವರ್ಷಗಳಿಂದ ಆಪ್ತವಾಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಅವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಪರಸ್ಪರ ಬೆಂಬಲವಾಗಿ ಅವರು ನಿಂತುಕೊಂಡಿದ್ದಾರೆ. ಇಬ್ಬರೂ ರಿಲೇಷನ್ಶಿಪ್ನಲ್ಲಿ ಇದ್ದಾರೆ ಎಂಬ ಗಾಸಿಪ್ ಇದೆ. ಆದರೆ ಈ ಬಗ್ಗೆ ಅವರು ಸಾರ್ವಜನಿಕವಾಗಿ ಏನನ್ನೂ ಹೇಳಿಲ್ಲ. ಈಗ ರಶ್ಮಿಕಾ ಮಂದಣ್ಣ ನಟಿಸಿರುವ ‘ದಿ ಗರ್ಲ್ಫ್ರೆಂಡ್’ ಸಿನಿಮಾದ ಟೀಸರ್ ಅನ್ನು ವಿಜಯ್ ದೇವರಕೊಂಡ ಬಿಡುಗಡೆ ಮಾಡಿದ್ದಾರೆ. ಅಲ್ಲದೇ, ರಶ್ಮಿಕಾ ಬಗ್ಗೆ ಅವರು ಸಿಕ್ಕಾಪಟ್ಟೆ ಹೊಗಳಿಕೆಯ ಮಾತುಗಳನ್ನು ಹೇಳಿದ್ದಾರೆ.
‘ದಿ ಗರ್ಲ್ಫ್ರೆಂಡ್’ ಸಿನಿಮಾದಲ್ಲಿ ದೀಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ನಟಿಸುತ್ತಿದ್ದಾರೆ. ರಾಹುಲ್ ರವೀಂದ್ರನ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರ ಪಾತ್ರ ಯಾವ ರೀತಿ ಇರಲಿದೆ ಎಂಬುದನ್ನು ತಿಳಿಸುವ ಟೀಸರ್ ಬಿಡುಗಡೆ ಆಗಿದೆ. ವಿಜಯ್ ದೇವರಕೊಂಡ ಅವರು ಸೋಶಿಯಲ್ ಮೀಡಿಯಾದಲ್ಲಿ ಟೀಸರ್ ಹಂಚಿಕೊಂಡಿದ್ದಾರೆ.
‘ಜಗತ್ತಿಗೆ ದಿ ಗರ್ಲ್ಫ್ರೆಂಡ್ ಪರಿಚಯಿಸುತ್ತಿದ್ದೇನೆ. ಈ ಟೀಸರ್ನ ಪ್ರತಿ ದೃಶ್ಯವೂ ನನಗೆ ಇಷ್ಟ ಆಯಿತು. ಈ ಕಥೆ ತೆರೆದುಕೊಳ್ಳುವುದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ. ನಮ್ಮಂಥ ಹಲವು ನಟರಿಗೆ ರಶ್ಮಿಕಾ ಅವರು ಅದೃಷ್ಟದ ನಟಿ. ದೊಡ್ಡ ದೊಡ್ಡ ಯಶಸ್ಸಿನ ಭಾಗವಾಗಿದ್ದಾರೆ. ಅವರು ದೊಡ್ಡ ಸ್ಟಾರ್ ನಟಿಯಾಗಿ ಬೆಳೆದಿದ್ದರೂ ಕೂಡ ನಾನು 8 ವರ್ಷಗಳ ಹಿಂದೆ ಭೇಟಿಯಾದ ಹುಡುಗಿಯ ರೀತಿಯೇ ಇದ್ದಾರೆ. ಅವರಿಗೆ ಇನ್ನಷ್ಟು ಯಶಸ್ಸು ಸಿಗಲೆಂದು ಹಾರೈಸುತ್ತೇನೆ’ ಎಂದು ವಿಜಯ್ ದೇವರಕೊಂಡ ಅವರು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ ನಟಿಸಿದ ‘ಪುಷ್ಪ 2’ ಸಿನಿಮಾ ದೊಡ್ಡ ದಾಖಲೆ ಬರೆದಿದೆ. 3 ದಿನಕ್ಕೆ ವಿಶ್ವಾದ್ಯಂತ 621 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾ ಅಭೂತಪೂರ್ವವಾಗಿ ಪ್ರದರ್ಶನ ಕಾಣುತ್ತಿರುವಾಗಲೇ ‘ದಿ ಗರ್ಲ್ಫ್ರೆಂಡ್’ ಟೀಸರ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.