ವಿಜಯಪುರ:
ಭೀಮಾತೀರದ ಗ್ರಾಮ ಪಂಚಾಯಿತಿ ಅಧ್ಯಕ್ಷನ ಕೊಲೆ ಪ್ರಕರಣದಲ್ಲಿ ಕರ್ತವ್ಯ ಲೋಪ ಆಧಾರದಲ್ಲಿ ಚಡಚಣ ಪಿಎಸ್‌ಐ ಪ್ರವೀಣ್ ಅವರನ್ನು ಅಮಾನತು ಮಾಡಲಾಗಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ ಭೀಮನಗೌಡ ಬಿರಾದಾರ್ ಅವರನ್ನು ಬರ್ಬರವಾಗಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಕರ್ತವ್ಯ ಲೋಪ, ನಿರ್ಲಕ್ಷ್ಯ ಆರೋಪದ ಮೇಲೆ ಚಡಚಣ ಪಿಎಸ್ಐ ಪ್ರವೀಣರನ್ನು ಸಸ್ಪೆಂಡ್ ಮಾಡಲಾಗಿದೆ.
ಅಮಾನತು ಆದೇಶವನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಜಾರಿ ಮಾಡಿದ್ದಾರೆ. ಕಳೆದ ಸೆ.3ರ ಬೆಳಗ್ಗೆ ದೇವರನಿಂಬರಗಿ ಗ್ರಾಮದಲ್ಲಿ ಗುಂಡಿಕ್ಕಿ ಭೀಮನಗೌಡ ಹತ್ಯೆ ಮಾಡಲಾಗಿತ್ತು. ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಬೆಳಗ್ಗೆ ಕಟಿಂಗ್ ಶಾಪ್‌ಗೆ ಬಂದಿದ್ದ ಭೀಮನಗೌಡನ ಮೇಲೆ ನಾಲ್ವರು ಆರೋಪಿಗಳು ಅಮಾನುಷವಾಗಿ ಎರಗಿದ್ದರು. ಕಣ್ಣಿಗೆ ಖಾರದ ಪುಡಿ ಎರಚಿ ಕಂಟ್ರೀ ಪಿಸ್ತೂಲ್‌ನಿಂದ ಗುಂಡುಗಳನ್ನು ಹಾರಿಸಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.
ಘಟನೆ ನಡೆದ ದಿನವೇ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಜೀವುಲ್ಲಾ ಮಕಾನದಾರ್, ವಾಸೀಂ ಮನಿಯಾರ್, ಫಿರೋಜ್ ಶೇಖ್ ಹಾಗೂ ಮೌಲಾಸಾಬ್ ಬಂಧಿತ ಆರೋಪಿಗಳಾಗಿದ್ದಾರೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.








