ವಿಜಯಪುರ:
ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ವಿಜಯಪುರ ಮಹಾನಗರ ಪಾಲಿಕೆ ಸದಸ್ಯರು ಶನಿವಾರ ಮಧ್ಯರಾತ್ರಿ ಪಾಲಿಕೆ ಕಟ್ಟಡದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದು, ಈ ಬೆಳವಣಿಗೆ ವಿವಾದ ಸೃಷ್ಟಿಸಿತ್ತು.
ಪ್ರತಿ ವರ್ಷ ಪಾಲಿಕೆಯಲ್ಲಿ ಗಣೇಶ ಚತುರ್ಥಿಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಹ್ಬಬದ ಆಚರಣೆ ಮಾಡಲಾಗುತ್ತಿತ್ತು. ಹಿಂದಿನ ಎಲ್ಲಾ ವರ್ಷಗಳಲ್ಲಿಯೂ ಪಾಲಿಕೆಯ ಎಲ್ಲ ಸಿಬ್ಬಂದಿಗಳ ಒಂದು ದಿನದ ವೇತನ ಗಣೇಶ ಚತುರ್ಥಿಯ ಹಬ್ಬಕ್ಕೆ ನೀಡಲಾಗುತ್ತಿತ್ತು. ಹಬ್ಬದ ವೇಳೆ ಗಣಪನ ಮೂರ್ತಿ ಪ್ರತಿಷ್ಠಾಪಿಸಿ, ಸತ್ಯ ನಾರಾಯಣ ಪೂಜೆ ಹಾಗೂ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಗಣಪತಿ ಹಬ್ಬದ ಆಚರಣೆ ಮಾಡಿಲ್ಲವೆಂಬ ಆರೋಪ ಕೇಳಿ ಬಂದಿದೆ.
ಪಾಲಿಕೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗಣೇಶನ ಮೂರ್ತಿ ಪ್ರತಿಷ್ಟಾಪಿಸಿ ಚೌತಿಯ ಆಚರಣೆ ಮಾಡಲು ಪಾಲಿಕೆಯ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಮೇಯರ್ ಮೆಹಜಬೀನ್ ಹೊರ್ತಿ ಉಪ ಮೇಯರ್ ದಿನೇಶ ಹಳ್ಳಿ ನಿರ್ಲಕ್ಷ್ಯ ಮಾಡಿದ್ದಾರೆಂದು ಬಿಜೆಪಿ ಸದಸ್ಯರು ಆರೋಪ ಮಾಡಿದ್ದಾರೆ.
ಹೀಗಾಗಿ ತಡರಾತ್ರಿ ಪಾಲಿಕೆಯ ಸದಸ್ಯರಾದ ರಾಹುಲ್ ಜಾಧವ್, ಕಿರಣ ಪಾಟೀಲ್, ಶಿವರುದ್ರ ಬಾಗಲಕೋಟೆ, ಮಲ್ಲಿಕಾರ್ಜುನ ಗಡಗಿ, ರಾಜಶೇಖರ್ ಮಗೀಮಠ, ಬಂದೇನವಾಜ್ ಬೀಳಗಿ, ಜಮೀರ್ ಬಾಂಗಿ, ಜವಾಹರ ಗೋಸಾವಿ, ಮಾಜಿ ಸದಸ್ಯ ರಾಜೇಶ ದೇವಗಿರಿ ಹಾಗೂ ಇತರರಿಂದ ಶಾಸ್ತ್ರೋಸ್ತ್ರವಾಗಿ ಗಣಪನ ಮೂರ್ತಿ ಪ್ರತಿಷ್ಠಾಪನೆಯಾಗಿದೆ. ಎಲ್ಲರೂ ಕೂಡಿ ಗಣೇಶನ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಜಲನಗರ ಪೊಲೀಸರ ಭೇಟಿ ಪರಿಶೀಲನೆ ಮಾಡಿದರು.
ಇನ್ನು ಈ ಹಿಂದೆ ಪಾಲಿಕೆಯ ನೆಲ ಮಹಡಿಯ ಪ್ರವೇಶ ದ್ವಾರದ ಎದುರು ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಜಿಬಿ ಅಂದರೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ನಂತರ ಕಳೆದ ಜುಲೈನಲ್ಲಿ ವಿವಿಧ ದಲಿತ ಪರ ಸಂಘಟನೆಗಳು ಅಂಬೇಡ್ಕರ್ ಮೂರ್ತಿಯನ್ನು ಇಟ್ಟಿದ್ದರು ಈ ಘಟನೆ ವಿವಾದಕ್ಕೆ ಕಾರಣವಾಗಿತ್ತು. ಆ ವೇಳೆ ಅಂಬೇಡ್ಕರ್ ಹಾಗೂ ಇತರೆ ಮಹಾನ್ ನಾಯಕರ ಮೂರ್ತಿ ಪಾಲಿಕೆಯ ಆವರಣದಲ್ಲಿ ಪ್ರತಿಷ್ಟಾಪಿಸಲಾಗುತ್ತದೆ ಎಂದು ಆಯುಕ್ತರು ಭರವಸೆ ನೀಡಿ ವಿವಾದಕ್ಕೆ ತೆರೆ ಎಳೆದಿದ್ದರು. ಈಗಾ ಅಂಬೇಡ್ಕರ್ ಮೂರ್ತಿ ಸ್ಥಾಪಿಸಿದ ವಿಚಾರಕ್ಕೂ ಗಣಪನ ಹಬ್ಬದ ವಿಚಾರಕ್ಕೂ ಯಾವುದೇ ಸಂಬಂಧ ಇಲ್ಲಾ. ಚೌತಿಯ ದಿನ ಗಣೇಶನ ಮೂರ್ತಿ ಪ್ರತಿಷ್ಟಾಪಿಸಿದ ಕಾರಣ ಗಣಪನ ಮೂರ್ತಿಯನ್ನು ಇಟ್ಟಿದ್ದೇವೆಂದು ಪಾಲಿಕೆಯ ಹಾಲಿ ಮಾಜಿ ಸದಸ್ಯರು ತಿಳಿಸಿದ್ದಾರೆ.
ಬಿಜೆಪಿ ಕಾರ್ಪೊರೇಟರ್‌ಗಳಲ್ಲೊಬ್ಬರಾದ ರಾಹುಲ್ ಜಾಧವ್ ಮಾತನಾಡಿ, ಗಣೇಶ ಚತುರ್ಥಿ ಹಬ್ಬದಂದು ಪಾಲಿಕೆಯ ವಾರ್ಷಿಕ ಕಾರ್ಯಕ್ರಮದ ಭಾಗವಾಗಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಪೂಜೆ ನೆರವೇರಿಸಲಾಯಿತು. ಈ ವರ್ಷ, ಆಚರಣೆಯನ್ನು ತಪ್ಪಿಸಲಾಗುತ್ತಿತ್ತು. ಹೀಗಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡಿದೆವು ಎಂದು ಹೇಳಿದ್ದಾರೆ.
ಸರ್ಕಾರದಿಂದ ಅನುಮತಿ ಪಡೆಯಲಾಗಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿ, ಇದು ದೇಶಾದ್ಯಂತ ಆಚರಿಸಲಾಗುವ ಧಾರ್ಮಿಕ ಕ್ರಿಯೆಯಾಗಿರುವುದರಿಂದ ಅನುಮತಿ ಅಗತ್ಯವಿಲ್ಲ. ಮೇಲಾಗಿ ಐದು ದಿನ ಮಾತ್ರ ಮೂರ್ತಿ ಇಡುತ್ತಿದ್ದೇವೆ, ನಂತರ ನಿಮಜ್ಜನ ಮಾಡುತ್ತೇವೆ, ಶಾಶ್ವತವಾಗಿ ಇಡುವ ವಿಗ್ರಹ ಇದಲ್ಲ ಎಂದರು.
ದಲಿತ ಮುಖಂಡ ಮತೀನ್‌ಕುಮಾರ್ ಮಾತನಾಡಿ, ಇತರ ದಲಿತ ಮುಖಂಡರ ಜತೆ ಮುಂದಿನ ಕ್ರಿಯಾಯೋಜನೆ ಕುರಿತು ಚರ್ಚಿಸುವುದಾಗಿ ತಿಳಿಸಿದರು. ಈ ನಡುವೆ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಪ್ರತಿಕ್ರಿಯೆಗೆ ಸಂಪರ್ಕಕ್ಕೆ ಸಿಕ್ಕಿಲ್ಲ.