ನಕ್ಸಲ್ ವಿಕ್ರಂ ಗೌಡ ಪೊಲೀಸ್ ಬಲೆಗೆ ಬಿದ್ದಿದ್ಹೇಗೆ ಗೊತ್ತಾ?

ಉಡುಪಿ

   ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಎಎನ್​ಎಫ್​ ಪೊಲೀಸರು ಸೋಮವಾರ ರಾತ್ರಿ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆ ಬಳಿ ಎನ್​​ಕೌಂಟರ್​ ಮಾಡಿ ನಕ್ಸಲ್ ಮುಖಂಡ ವಿಕ್ರಂ ಗೌಡನನ್ನು ಹತ್ಯೆ ಮಾಡಿದ್ದರು. ಆದರೆ, ವಿಕ್ರಂ ಗೌಡ ನಕ್ಸಲ್ ನಿಗ್ರಹ ಪಡೆ ಪೊಲೀಸರ ಬಲೆಗೆ ಅಷ್ಟು ಸುಲಭವಾಗಿ ಬಿದ್ದಿದ್ಹೇಗೆ ಎಂಬ ಕುತೂಹಲ ಈಗ ಮೂಡಿದೆ. ವಿಕ್ರಂ ಗೌಡನನ್ನು ಪೊಲೀಸರು ಖೆಡ್ಡಾಕ್ಕೆ ಕೆಡವಿದ ರೀತಿ ಹೇಗಿದೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.

   ಸೋಮವಾರ ಸಂಜೆ 6.30 ರ ವೇಳೆಗೆ ಕಬ್ಬಿನಾಲೆಯ ಪಿತ್ತಬೈಲ್​​​ನಲ್ಲಿರುವ ಮನೆಗೆ ವಿಕ್ರಂ ಹಾಗೂ ತಂಡ ಬಂದಿತ್ತು. ಪಿತ್ತಬೈಲ್​​ನಲ್ಲಿ ಮೂರು ಕುಟುಂಬಗಳು ವಾಸವಾಗಿವೆ. ಈ ಪೈಕಿ ಸುಧಕರ್ ಗೌಡ ಎಂಬುವವರ ಮನೆಗೆ ವಿಕ್ರಂ ಗೌಡ ಹಾಗೂ ತಂಡ ಬಂದಿತ್ತು. ದಿನಸಿ ಸಾಮಗ್ರಿ ಪಡೆಯುವುದಕ್ಕೆಂದು ಅವರು ಬಂದಿದ್ದರು. 

   ಸುಧಕರ್ ಗೌಡ ಮನೆಗೆ ವಿಕ್ರಂ ಗೌಡ ಬರಬಹುದು ಎಂಬ ಸುಳಿವಿದ್ದ ಎಎನ್​ಎಫ್ ಸಿಬ್ಬಂದಿ ಮೂರು ದಿನಗಳ‌ ಹಿಂದೆಯೇ ಸುಧಕರ್ ಕುಟುಂಬವನ್ನು ಅಲ್ಲಿಂದ ಖಾಲಿ ಮಾಡಿಸಿದ್ದರು. ಬಳಿಕ ಎಎನ್​ಎಫ್​ ಸಿಬ್ಬಂದಿಯೇ ಮನೆಯಲ್ಲಿ ತಂಗಿದ್ದರು. ಆದರೆ, ಮನೆಯೊಳಗೆ ಎಎನ್ಎಫ್ ಪಡೆ ಇರುವುದರ ಸಣ್ಣ ಸುಳಿವು ಕೂಡ ಇಲ್ಲದ ವಿಕ್ರಂ ಗೌಡ ಮನೆಯೊಳ ಹೊಕ್ಕಿದ್ದಾನೆ. ತಕ್ಷಣವೇ ಎಎನ್ಎಫ್ ಸಿಬ್ಬಂದಿ ಎದುರಾಗಿದ್ದಾರೆ. ಕೂಡಲೇ ವಿಕ್ರಂ ಗೌಡ ತಪ್ಪಿಸಿಕೊಂಡು ಓಡಿಹೋಗಲು ಅಂಗಳಕ್ಕೆ ಓಡಿ ಬಂದಿದ್ದ. ಆದರೆ ಅಂಗಳದಲ್ಲೇ ವಿಕ್ರಂ ಗೌಡನನ್ನು ಎಎನ್ಎಫ್ ಸಿಬ್ಬಂದಿ ಸುತ್ತುವರೆದಿದ್ದರು.

    ವಿಕ್ರಂ ಗೌಡನನ್ನು ಸುತ್ತುವರೆದ ಎಎನ್​ಎಫ್​ ಸಿಬ್ಬಂದಿ, ಶರಣಾಗುವಂತೆ ಸೂಚನೆ ನೀಡಿದ್ದಾರೆ. ಆದರೆ ಆತ, ‘ಪ್ರಾಣ ಕೊಟ್ಟರೂ ಶರಣಾಗಲ್ಲ’ ಎಂದಿದ್ದಲ್ಲದೆ, ತನ್ನ ನಾಡಬಂದೂಕಿನಿಂದ ದಾಳಿ‌ನಡೆಸಲು ಮುಂದಾಗಿದ್ದಾನೆ. ಈ ವೇಳೆ, ಮನೆಯ ಸುತ್ತಲೂ ಕವರ್ ಅಪ್ ಆಗಿದ್ದ ಎಎನ್ಎಫ್ ಸಿಬ್ಬಂದಿ ಪ್ರತಿ ದಾಳಿ ನಡೆಸಿದ್ದಾರೆ. ಮೂರೂ ಕಡೆಯಿಂದ ವಿಕ್ರಂ ಗೌಡನಿಗೆ ಗುಂಡು ಹೊಡೆದಿದ್ದಾರೆ. ಹೀಗಾಗಿ ಮನೆಯ ಅಂಗಳದಲ್ಲೇ ಆತ ಅಸುನೀಗಿದ. 

   ಎಎನ್ಎಫ್ ಸಿಬ್ಬಂದಿಯ ಎಕೆ 47 ನಿಂದ ಹೊರಬಿದ್ದ ಆ ಮೂರು ಗುಂಡುಗಳು ಆತನ ಬಲಿಪಡೆದವು. ಎರಡು ಗುಂಡುಗಳು ಪಕ್ಕೆಲುಬು, ಒಂದು ಗುಂಡು ತೊಡೆಗೆ ತಗುಲಿತ್ತು. ನಕ್ಸಲ್ ಮುಖಂಡ ವಿಕ್ರಂ ಗೌಡ ಎನ್​ಕೌಂಟರ್ ನಡೆದ ಪಕ್ಕದ ಗ್ರಾಮದಲ್ಲಿಯೇ ವಾಸವಾಗಿದ್ದ. ಪಿತೇಬೈಲ್​​​ನ ಪಕ್ಕದ ಗ್ರಾಮ ಕೂಡ್ಲೂವಿನ ನಾಡ್ಪಾಲಿನಲ್ಲಿ ವಾಸವಾಗಿದ್ದ. 20 ವರ್ಷದ ಹಿಂದೆ ಕೊಡ್ಲುವಿನ ಮನೆಯಲ್ಲಿ ಮನೆಯವರ ಜೊತೆ ವಾಸವಾಗಿದ್ದ. ಕಳೆದ 7 ವರ್ಷಗಳ ಹಿಂದೆ ಆತನ ಸಹೋದರಿ ಸುಗುಣ ಮನೆ ಕಟ್ಟಲು ತಯಾರಿ ನಡೆಸುತ್ತಿದ್ದರು. ಆದರೆ ಆರ್ಥಿಕ ಸಮಸ್ಯೆಯಿಂದ ಅರ್ಧದಲ್ಲಿಯೇ ಮನೆಯ ಕಾಮಗಾರಿ ಸ್ಥಗಿತಗೊಂಡಿತ್ತು. ಆದರೆ, ವಿಕ್ರಂ ಗೌಡ ಮಾತ್ರ 20 ವರ್ಷಗಳಿಂದ ಮನೆ ಕಡೆ ಮುಖ ಮಾಡಿರಲಿಲ್ಲ.