ನನಗೂ ಸಚಿವನಾಗಬೇಕೆಂಬ ಆಸೆ ಇದೆ : ವಿನಯ್‌ ಕುಲಕರ್ಣಿ

ಬೆಳಗಾವಿ:

    ನನಗೂ ಸಚಿವನಾಗಬೇಕೆಂಬ ಆಸೆ ಇದೆ. ಉತ್ತರ ಕರ್ನಾಟಕ ಭಾಗದಲ್ಲಿ ನನ್ನದೇ ಆದ ಛಾಪು ಇದ್ದು, ಸಚಿವ ಸ್ಥಾನ ನೀಡುವಾಗ ನನಗೆ ಇರುವ ಹಿರಿತನವೂ ಪರಿಗಣನೆಗೆ ಬರುತ್ತದೆ ಎಂಬ ವಿಶ್ವಾಸವಿದೆ ಎಂದು ಧಾರವಾಡ ಶಾಸಕ ವಿನಯ ಕುಲಕರ್ಣಿ ಅವರು ಮಂಗಳವಾರ ಹೇಳಿದರು.

   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗೇಂದ್ರ ರಾಜೀನಾಮೆಯಿಂದ ಸಚಿವ ಸ್ಥಾನವೊಂದು ತೆರವಾಗಿದ್ದು, ನಿಮಗೆ ಸಚಿವ ಸಿಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಈ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ನಾನು ಹಿರಿಯ ರಾಜಕಾರಣಿಯಾಗಿದ್ದು, 20 ವರ್ಷಗಳಿಂದ ಶಾಸಕನಾಗಿ, ಒಮ್ಮೆ ಸಚಿವನಾಗಿ ಹಾಗೂ ಪಕ್ಷದ ಕಾರ್ಯಾಧ್ಯಕ್ಷನಾಗಿ ಕೆಲಸ ಮಾಡಿರುವುದರಿಂದ ನನಗೂ ಸಚಿವನಾಗುವ ಆಸೆ ಇದೆ. ಸಚಿವ ಸಂಪುಟ ವಿಸ್ತರಣೆ ವೇಳೆ ಹಿರಿತನವನ್ನು ಪಕ್ಷ ಪರಿಗಣಿಸಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

   ಸಚಿವ ಸ್ಥಾನಕ್ಕೆ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುವ ಅಗತ್ಯವಿಲ್ಲ, ಪಕ್ಷ ಕೇಳದೇ ಕಾರ್ಯಾಧ್ಯಕ್ಷ, ಮಂಡಳಿ ಅಧ್ಯಕ್ಷ ಸ್ಥಾನ ನೀಡಿದೆ. ಹೀಗಾಗಿ ನನ್ನ ಸಾಮರ್ಥ್ಯದ ಆಧಾರದಲ್ಲಿ ಸಚಿವ ಸಂಪುಟ ಪುನಾರಚನೆ ವೇಳೆ ಹೊಸ ಹುದ್ದೆ ನೀಡುವ ಬಗ್ಗೆ ಪಕ್ಷ ತೀರ್ಮಾನಿಸಲಿದೆ ಎಂದು ತಿಳಿಸಿದರು.

   ಕಳೆದ ಹಲವು ವರ್ಷಗಳಿಂದ ಬಸವ ಜಯ ಮೃತ್ಯುಂಜಯ ಸ್ವಾಮಿ ನೇತೃತ್ವದಲ್ಲಿ ಪಂಚಮಸಾಲಿ ಲಿಂಗಾಯತ ಮೀಸಲಾತಿ ಹೋರಾಟ ನಡೆಯುತ್ತಿದೆ. ‘ಬಿಜೆಪಿಯವರು ಸುಳ್ಳು ಆಶ್ವಾಸನೆ ನೀಡಿ ಸಮುದಾಯವನ್ನು ದಾರಿ ತಪ್ಪಿಸಿದ್ದಾರೆ. ಸರ್ಕಾರ ಎಲ್ಲ ಸಮುದಾಯದವರ ಬೇಡಿಕೆಗೆ ಸ್ಪಂದಿಸಬೇಕು. ನಮ್ಮ ಸಮುದಾಯಕ್ಕೆ ಹಾಗೂ ಇತರೆ ಸಮುದಾಯದವರಿಗೂ ನ್ಯಾಯ ಕೊಡಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಲಿಂಗಾಯತ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವಂತೆ ಹೋರಾಟ ಆರಂಭಿಸುತ್ತೇವೆಂದು ಹೇಳಿದರು. 

   ಬಳಿಕ ದರ್ಶನ್ ಪ್ರಕರಣ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ದರ್ಶನ್ ಅವರ ಮೇಲೆ ಆರೋಪ ಇದ್ದಿದ್ದಕ್ಕೆ ಪೊಲೀಸರು ಬಂಧಿಸಿ, ಕ್ರಮ ತೆಗೆದುಕೊಂಡಿದ್ದಾರೆ. ಪೊಲೀಸರು ಅವರ ಕರ್ತವ್ಯ ಮಾಡಿದ್ದಾರೆ. ತಪ್ಪು ಯಾರೇ ಮಾಡಿದರೂ ಅದು ತಪ್ಪೇ. ಏನು ಶಿಕ್ಷೆ ಆಗಬೇಕು ಎಂಬುದನ್ನು ಕೋರ್ಟ್ ತೀರ್ಮಾನಿಸುತ್ತದೆ ಎಂದರು.

   ಸಹಜವಾಗಿ ನಟ ದರ್ಶನ್ ಅವರು ರ್‍ಯಾಶ್​ ಆಗಿ ವರ್ತಿಸುತ್ತಿದ್ದರು. ಆದರೆ, ನಮ್ಮ ಜೊತೆ ಇರುವಾಗ ಆ ರೀತಿ ಇರುತ್ತಿರಲಿಲ್ಲ ಎಂದು ಹೇಳಿದರು.

   ದರ್ಶನ್ ಪ್ರಕರಣದಲ್ಲಿ ರಾಜಕೀಯ ಒತ್ತಡ ಹೇರಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಈ ಪ್ರಕರಣದಲ್ಲಿ ಯಾರ ಒತ್ತಡಕ್ಕೂ ಮಣಿಯುವುದಿಲ್ಲ, ಮಾಧ್ಯಮಗಳ ಮೂಲಕ ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಹಾಗಾಗಿ ಇದರಲ್ಲಿ ಯಾರ ಒತ್ತಡವೂ ನಡೆಯುವುದಿಲ್ಲ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap