ಲಖನೌ:
ಜನ ಸಾಮಾನ್ಯರ ನಡುವೆ ವಾಗ್ವಾದ, ಗದ್ದಲ, ಗಲಾಟೆ ನಡೆದರೆ ಅದನ್ನು ಪರಿಹರಿಸಿ ನ್ಯಾಯ ಒದಗಿಸುವುದು ವಕೀಲರು ಮತ್ತು ನ್ಯಾಯಾಧೀಶರ ಕರ್ತವ್ಯ. ಆದರೆ ನ್ಯಾಯಾಧೀಶರು ಮತ್ತು ವಕೀಲರ ಮಧ್ಯೆ ವಾಗ್ವಾದ ನಡೆದರೆ? ಇಬ್ಬರೂ ಪರಸ್ಪರ ಕಿತ್ತಾಡಿಕೊಂಡರೆ? ಆಗ ಪರಿಸ್ಥಿತಿ ಬೇಲಿಯೇ ಎದ್ದು ಹೊಲವ ಮೇಯುವಂತಾಗುತ್ತದೆ. ಇಂತಹದ್ದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ . ನ್ಯಾಯಾಧೀಶರ ಕೊಠಡಿಗೆ ತೆರಳಿದ ವಕೀಲರ ಗುಂಪು ಗಲಾಟೆ ನಡೆಸಿದ ಘಟನೆ ಸದ್ಯ ದೇಶಾದ್ಯಂತ ಸದ್ದು ಮಾಡುತ್ತಿದೆ. ಘಟನೆಯ ವಿಡಿಯೊ ವೈರಲ್ ಆಗಿದೆ.
ಗಾಜಿಯಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದೆ. ನ್ಯಾಯಾಧೀಶರು ಮತ್ತು ವಕೀಲರ ನಡುವೆ ವಾಗ್ವಾದ ನಡೆದು ಅದು ಅತಿರೇಕಕ್ಕೆ ಹೋಗಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು. ನ್ಯಾಯಾಧೀಶರ ಕೊಠಡಿಯಲ್ಲಿ ಹೆಚ್ಚಿನ ವಕೀಲರು ಜಮಾಯಿಸಿ ಗದ್ದಲ ಸೃಷ್ಟಿಸಿದ್ದರಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರನ್ನು ಕರೆಸಬೇಕಾಯಿತು. ಪೊಲೀಸರು ಕುರ್ಚಿಗಳನ್ನು ಎತ್ತಿ ವಕೀಲರನ್ನು ಓಡಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಅರೆಸೈನಿಕ ಸಿಬ್ಬಂದಿ ಕೂಡ ಸ್ಥಳಕ್ಕೆ ಧಾವಿಸಬೇಕಾಯಿತು.
ಘಟನೆಯಲ್ಲಿ ಹಲವು ವಕೀಲರು ಗಾಯಗೊಂಡಿದ್ದಾರೆ ಮತ್ತು ಪರಿಸ್ಥಿತಿಯನ್ನು ಚರ್ಚಿಸಲು ಬಾರ್ ಅಸೋಸಿಯೇಷನ್ ಸಭೆ ಕರೆದಿದೆ. ನ್ಯಾಯಾಧೀಶರ ಕೊಠಡಿಯಿಂದ ಹೊರಗೆ ಕಳುಹಿಸಲ್ಪಟ್ಟ ವಕೀಲರು ಜಮಾಯಿಸಿ ಭದ್ರತಾ ಪಡೆಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಪ್ರಾಥಮಿಕ ಮಾಹಿತಿಯ ಪ್ರಕಾರ, ಜಾಮೀನು ಅರ್ಜಿಯ ವಿಚಾರದಲ್ಲಿ ನ್ಯಾಯಾಧೀಶರು ಮತ್ತು ವಕೀಲರ ನಡುವೆ ಆರಂಭವಾದ ವಾಗ್ವಾದ ಬಳಿಕ ಗಲಾಟೆಯ ಸ್ವರೂಪ ಪಡೆದುಕೊಂಡಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.
ಪೊಲೀಸರು ಮತ್ತು ವಕೀಲರ ನಡುವಿನ ಘರ್ಷಣೆಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ಗಲಾಟೆಯ ವೇಳೆ ನ್ಯಾಯಾಲಯದಲ್ಲಿದ್ದ ಕುರ್ಚಿಗಳನ್ನು ಸಹ ಎಸೆಯಲಾಯಿತು. ಜಿಲ್ಲಾ ನ್ಯಾಯಾಧೀಶರೊಂದಿಗೆ ವಾಗ್ವಾದ ಪ್ರಾರಂಭವಾಗುತ್ತಿದ್ದಂತೆ, ಹೆಚ್ಚಿನ ಸಂಖ್ಯೆಯ ವಕೀಲರು ನ್ಯಾಯಾಧೀಶರ ಕೊಠಡಿಯನ್ನು ಸುತ್ತುವರಿದರು. ನಂತರ ನ್ಯಾಯಾಧೀಶರು ಪೊಲೀಸರಿಗೆ ಮಾಹಿತಿ ನೀಡಿದರು. ಅವರು ಸ್ಥಳಕ್ಕೆ ಬಂದು ವಕೀಲರನ್ನು ಬಲವಂತದಿಂದ ಹೊರಗೆ ಕಳುಹಿಸಲು ಆರಂಭಿಸಿದರು ಎಂದು ಮೂಲಗಳು ತಿಳಿಸಿವೆ.
ಲಾಠಿ ಪ್ರಹಾರದಿಂದ ಆಕ್ರೋಶಗೊಂಡ ವಕೀಲರು ಪ್ರತಿಭಟನೆ ನಡೆಸಿ ನ್ಯಾಯಾಲಯದ ಸಂಕೀರ್ಣದಲ್ಲಿರುವ ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ವಕೀಲರು ನ್ಯಾಯಾಧೀಶರ ವಿರುದ್ಧ ಘೋಷಣೆಗಳನ್ನೂ ಕೂಗಿದ್ದಾರೆ. ಈ ಘಟನೆಯ ನಂತರ ಎಲ್ಲ ನ್ಯಾಯಾಧೀಶರು ತಮ್ಮ ಕರ್ತವ್ಯ ಮೊಟಕುಗೊಳಿಸಿದ್ದಾರೆ.
ʼʼಗಾಜಿಯಾಬಾದ್‌ನ ರಾಜ್ ನಗರ ಪ್ರದೇಶದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸಂಕೀರ್ಣದಲ್ಲಿ ವಕೀಲ ನಹರ್ ಸಿಂಗ್ ಯಾದವ್ ಅವರು ನ್ಯಾಯಾಧೀಶರೊಂದಿಗೆ ತೀವ್ರ ವಾಗ್ವಾದದಲ್ಲಿ ತೊಡಗಿದ್ದ ನಂತರ ಪರಿಸ್ಥಿತಿ ಹದಗೆಟ್ಟಿದೆ. ನಹರ್ ಸಿಂಗ್ ಯಾದವ್ ಆರೋಪಿಯ ಜಾಮೀನು ವಿಚಾರಣೆಯ ಸಮಯದಲ್ಲಿ ನ್ಯಾಯಾಧೀಶರೊಂದಿಗೆ ತೀವ್ರ ಚರ್ಚೆ ನಡೆಸಿದ ಕಾರಣ ಈ ಪರಿಸ್ಥಿತಿ ತಲೆದೋರಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆʼʼ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.