ಸ್ವದೇಶಿ ಉತ್ಪನ್ನ ಬಳಸಲು ಸಂಸದ ವಿಶ್ವೇಶ್ವರ ಹೆಗಡೆ ಕರೆ

ಶಿರಸಿ

    ಸ್ವದೇಶಿ ಉತ್ಪಾದಿತ ವಸ್ತುಗಳ ಬಳಕೆಯ ಅಗತ್ಯತೆ ಈಗ ಹಿಂದೆoದಿಗಿoತ ಹೆಚ್ಚಿದೆ.ವಿದೇಶಿ ಉತ್ಪಾದನೆಗಿಂತ ಗುಣಮಟ್ಟದ ಉತ್ಪನ್ನಗಳು ನಮ್ಮಲ್ಲಿಯೇ ಸಿದ್ಧವಾಗುತ್ತಿದ್ದು, ಅವನ್ನೇ ಬಳಸುವ ಮೂಲಕ ನಮ್ಮ ಆರ್ಥಿಕತೆಯನ್ನು ಇನ್ನಷ್ಟು ಬಲಪಡಿಸಿಕೊಳ್ಳಬೇಕಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಶಿರಸಿ ನಗರದ ಶಿವಾಜಿ ಚೌಕ ಗಣೇಶ ಮಂಟಪದಲ್ಲಿ ಮಂಗಳವಾರ ಆತ್ಮನಿರ್ಭರ ಭಾರತಕ್ಕಾಗಿ ಸ್ವದೇಶಿ ಅಭಿಯಾನ ಚರ್ಚೆಯಲ್ಲಿ ಅವರು ಮಾತನಾಡಿದರು.

   ಸ್ವದೇಶಿ ಆಂದೋಲನ ಮಹಾತ್ಮಾಗಾಂಧೀಜಿ ಅವರಿಂದಲೇ ಆರಂಭಗೊoಡಿದ್ದು,ಸ್ವಾತಂತ್ರ್ಯ ಹೋರಾಟದಲ್ಲಿಯೂ ಮಹತ್ವದ ಪಾತ್ರ ನಿಭಾಯಿಸಿದೆ. ಆದಾಗ್ಯೂ ಕಾಲ ಕಾಲಕ್ಕೆ ನಾವು ವಿದೇಶೀ ವಸ್ತುಗಳ ದಾಳಿಗೆ ಬಲಿಯಾಗುತ್ತಲೇ ಇದ್ದೇವೆ. ಅನೇಕ ಬಾರಿ ನಮಗೆ ಅರಿವಿಲ್ಲದಂತೆಯೇ ವಿದೇಶಿ ವಸ್ತುಗಳನ್ನೂ ನಾವು ಬಳಸುತ್ತಿದ್ದೇವೆ. ಆದರೆ, ಇಂದು ಕಾಲ ಬದಲಾಗಿದೆ. ವಿದೇಶಗಳಿಗಿಂತ ಗುಣಮಟ್ಟದ ಉತ್ಪನ್ನಗಳು ನಮ್ಮಲ್ಲಿಯೇ ತಯಾರಾಗುತ್ತಿರುವಾಗ ನಾವು ಮತ್ತೆ ವಿದೇಶಿ ವಸ್ತುಗಳನ್ನೇ ಬಳಸಿದರೆ ಇಲ್ಲಿಯ ಉತ್ಪಾದಕರಿಗೂ ಹಾನಿ, ಭಾರತದ ಆರ್ಥಿಕ ವ್ಯವಸ್ಥೆಗೂ ಉತ್ತಮವಲ್ಲ ಎಂದರು.

   ಅಮೇರಿಕ ನಮ್ಮ ಮೇಲೆ ತೆರಿಗೆ ದಾಳಿ ನಡೆಸಿದ್ದನ್ನು ನಾವೆಲ್ಲ ನೋಡಿದ್ದೇವೆ. ನಾವು ನಮ್ಮದೇ ಉತ್ಪನ್ನ ಬಳಸಿದರೆ ಇಂತಹ ದಾಳಿಯಿಂದ ಏನೂ ಮಾಡಲು ಸಾಧ್ಯವಿಲ್ಲ. ವಿದೇಶಿ ಉತ್ಪಾದಿತ ಇಂಧನ ಬಳಕೆಯ ಅನಿವಾರ್ಯ ಸ್ಥಿತಿ ಒಂದೆಡೆ ಇದೆ. ಆದರೆ, ಭಾರತೀಯ ಉತ್ಪನ್ನಗಳಿರುವ ವಸ್ತುಗಳನ್ನು ನಾವು ನಿರ್ಲಕ್ಷಿಸಿ ವಿದೇಶಿ ವಸ್ತುಗಳನ್ನು ಖರೀದಿಸಬಾರದು. ಸ್ವದೇಶಿ ಜನಾಂದೋಲನದ ರೀತಿಯಲ್ಲಿ ನಾವು ಈಗ ಯೋಚಿಸಲೇಬೇಕಿದೆ. ನಮ್ಮ ಸೈನ್ಯ ಇಂದು ಭಾರತೀಯ ಉತ್ಪಾದಿತ ಶಸ್ತಾಸ್ತ್ರಗಳು, ವಸ್ತುಗಳನ್ನು ಬಳಕೆ ಮಾಡುತ್ತಿದೆ.

    ಅದೇ ರೀತಿ ನಾವೂ ಸಹ ಭಾರತೀಯ ಉತ್ಪನ್ನಗಳನ್ನು ಬಳಸಲು ಮುಂದಾಗದಿದ್ದರೆ ನಮ್ಮ ನಿರೀಕ್ಷಿತ ಭಾರತ ಕಟ್ಟಲು ಸಾಧ್ಯವಿಲ್ಲ. ನಿರುದ್ಯೋಗ ಸಮಸ್ಯೆ ಪರಿಹಾರದ ಜೊತೆ ಭಾರತದ ಮಾನವ ಸಂಪನ್ಮೂಲಕ್ಕೂ ಆರ್ಥಿಕ ಶಕ್ತಿ ಈ ಮೂಲಕ ತುಂಬಬೇಕಾಗಿದೆ ಎಂದರು.
ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಮಾತನಾಡಿ, ಪ್ರಧಾನಿ ಮೋದಿಯವರ ದೂರದರ್ಶಿತ್ವವನ್ನು ನಾವು ಗಮನಿಸಬೇಕು. ಪ್ರತಿ ವಸ್ತು ಖರೀದಿಸುವ ಮುನ್ನ ಅದು ಎಲ್ಲಿ ಉತ್ಪನ್ನ ಎಂಬುದನ್ನು ಗಮನಿಸಬೇಕು. ನಮ್ಮ ಜವಾಬ್ದಾರಿಯನ್ನು ಅರಿತು ನಾವು ಕೆಲಸ ಮಾಡೋಣ ಎಂದರು.ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್,ರಾಘವೇಂದ್ರ ಶೆಟ್ಟಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಶ್ರೀಧರ ಹಿರೆಹದ್ದ, ಗಿರೀಶ ಹೆಗಡೆ ಇತರರಿದ್ದರು.

Recent Articles

spot_img

Related Stories

Share via
Copy link