ಸಿದ್ದು ಸರ್ಕಾರದಲ್ಲಿ ಗಂಭೀರತೆಯೇ ಇಲ್ಲ :ಎಚ್‌.ವಿಶ್ವನಾಥ್‌

ಮೈಸೂರು:

    ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2 ವರ್ಷಗಳನ್ನು ಪೂರೈತಿಸಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶವನ್ನು ಹಮ್ನಿಕೊಂಡಿದ್ದು, ಇದೇ ಸಮಾವೇಶದ ವಿರುದ್ಧ ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ.

    ಮೈಸೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಚ್‌.ವಿಶ್ವನಾಥ್‌, ‘ರಾಜ್ಯ ಸರ್ಕಾರವು ತನ್ನ ವೈಫಲ್ಯ ಹಾಗೂ ಭ್ರಷ್ಟಾಚಾರದ ಆರೋಪ ಮುಚ್ಚಿ ಹಾಕಲು ಸರ್ಕಾರದ ದುಡ್ಡಿನಲ್ಲಿ ಸಾಧನಾ ಸಮಾವೇಶ ಮಾಡುತ್ತಿದೆ. ಯಾವ ಸಾಧನೆ ಮಾಡಿದ್ದಕ್ಕಾಗಿ ಸಮಾವೇಶ ಹಮ್ಮಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಲಿಕಾಪ್ಟರ್‌ನಲ್ಲಿ ಓಡಾಡಿರುವುದೇ ಸಾಧನೆಯೇ? ಎಂದು ಪ್ರಶ್ನಿಸಿದರು.

    ಇದೇ ವೇಳೆ ಆಪರೇಷನ್ ಸಿಂಧೂರ ಕುರಿತು ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕು. ಪಕ್ಷಕ್ಕಿಂತ ದೇಶ ದೊಡ್ಡದು, ದೇಶ ಇದ್ದರೆ ನಾವು ಎಂಬುದನ್ನು ಅರಿಯಬೇಕು’ ಎಂದು ಹೇಳಿದರು.

    ‘ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ತಮ್ಮ ತವರು ಜಿಲ್ಲೆಯ ಅಭಿವೃದ್ಧಿಗೆ ಏನು ಅನುದಾನ ನೀಡಿದ್ದಾರೆ? ಹೆಲಿಕಾಪ್ಟರ್‌ನಲ್ಲಿ ಓಡಾಡಲು ಎಷ್ಟು ಖರ್ಚು ಮಾಡಿದ್ದೀರಿ? ಮುಡಾ ಹಗರಣದಲ್ಲಿ ನಿಮ್ಮ ಕುಟುಂಬದ ಪಾತ್ರವೇನು? ನಿಮ್ಮ ಕಟು ನುಡಿಗಳಿಂದ ಎಷ್ಟು ಸರ್ಕಾರಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನೂ ತಿಳಿಸಬೇಕು ಎಂದು ಕಿಡಿಕಾರಿದರು. 

   ‘ಮುಖ್ಯಮಂತ್ರಿಯೂ ಸೇರಿದಂತೆ ಎಲ್ಲಾ ಮಂತ್ರಿಗಳ ಆಸ್ತಿ ವಿವರವನ್ನು ಸಮಾವೇಶದಲ್ಲಿ ಜನರ ಮುಂದಿಡಬೇಕು. ಇಲ್ಲದಿದ್ದರೆ ನಾವೇ ಮೈಸೂರಿನಲ್ಲಿ ಸಮಾವೇಶ ಮಾಡಿ ವಿವರ ನೀಡುತ್ತೇವೆ. ಜಿಲ್ಲಾ ಮಂತ್ರಿ ಗುತ್ತಿಗೆದಾರರಿಗೆ ಹಾಗೂ ಸರ್ಕಾರಿ ಅಧಿಕಾರಿಗಳ ವರ್ಗಾವಣೆಗೆ ಸೀಮಿತವಾಗಿದ್ದಾರೆ. ಅಭಿವೃದ್ಧಿಯ ಬಗ್ಗೆ ಯೋಚನೆಯನ್ನೂ ಮಾಡುತ್ತಿಲ್ಲ. ಇದು ಜನರಿಗೆ ಟೋಪಿ ಹಾಕುವ ಪ್ರಚಾರದ ಸರ್ಕಾರ ಎಂದು ವಿಶ್ವನಾಥ್ ಕುಟುಕಿದರು. 

   ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಜಿಂದಾಲ್‌ ಕಂಪೆನಿಗೆ ಭೂಮಿ ನೀಡುವುದನ್ನು ನಾವು ತಡೆದೆವು. ಆದರೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಕೂಡಲೇ ಅನುಮತಿ ನೀಡಿದರು. ಹೀಗಾಗಿ ಬಿಜೆಪಿಗೂ ಕಾಂಗ್ರೆಸ್‌ಗೂ ವ್ಯತ್ಯಾಸವಿಲ್ಲದಂತಾಗಿದೆ. ಕಾಂಗ್ರೆಸ್‌ ಜನರ ವಿಶ್ವಾಸ ಕಳೆದುಕೊಂಡಿದೆ. ಬಿಜೆಪಿಯು ಸುಳ್ಳು ಹೇಳಿ ಅಧಿಕಾರ ಕಳೆದುಕೊಂಡಿತು. ಈಗಿನ ಸರ್ಕಾರಕ್ಕೂ ಅದೇ ಪರಿಸ್ಥಿತಿ ಬರುತ್ತದೆ. ಗ್ರೇಟರ್‌ ಬೆಂಗಳೂರಿನಿಂದ ಸೈಟ್‌ಗಳ ಬೆಲೆ ಮೂರು ಪಟ್ಟು ಹೆಚ್ಚಾಗುತ್ತದೆ. ಮಂತ್ರಿಗಳು ರಿಯಲ್‌ ಎಸ್ಟೇಟ್‌ನಡಿ ಸಿಲುಕಿದ್ದಾರೆ. ಈ ಬಗ್ಗೆ ಸರಿದಾರಿಯಲ್ಲಿ ಹೋಗಿ ಎಂದು ತಿಳಿಸಿದರೆ ಮಾನಹಾನಿ ಪ್ರಕರಣ ದಾಖಲಿಸುತ್ತಾರೆ. ಈ ಸರ್ಕಾರಕ್ಕೆ ಟೀಕೆ ಎದುರಿಸುವ ಸೌಜನ್ಯ ಹಾಗೂ ಧೈರ್ಯ ಇಲ್ಲ ಎಂದು ಕಿಡಿಕಾರಿದರು.

   ಗ್ಯಾರಂಟಿಯಿಂದ ಸರ್ಕಾರಕ್ಕೆ ಉತ್ತಮ ಹೆಸರು ಬಂದಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಗ್ಯಾರಂಟಿಯು ಸರ್ಕಾರದ ಹುಚ್ಚು ನಿರ್ಧಾರ. ರಾಜ್ಯದಲ್ಲಿ ನೀರಾವರಿ ಕೆಲಸ ಕುಂಟುತ್ತಿದೆ. ಉದ್ಯೋಗ ಸೃಷ್ಟಿಸುತ್ತಿದ್ದ ಸಕ್ಕರೆ ಕಾರ್ಖಾನೆಗಳು ಮುಚ್ಚುತ್ತಿವೆ. ಇದರ ನಡುವೆ ಯಾವುದೇ ಮಾನದಂಡವಿಲ್ಲದೆ ಉಚಿತ ಯೋಜನೆಗಳನ್ನು ಜಾರಿ ಮಾಡಿ ಜನರ ಹಣ ಪೋಲು ಮಾಡಲಾಗುತ್ತಿದೆ. ಬಡವರ ಆರ್ಥಿಕ ಚಟುವಟಿಕೆಗೆ ವಿರೋಧ ಮಾಡುವುದಿಲ್ಲ. ಆದರೆ ಉಚಿತವಾಗಿ ನೀಡಿದಾಗ ಅದರ ಮೌಲ್ಯ ಅರಿವಾಗುವುದಿಲ್ಲ. ಸಿದ್ದರಾಮಯ್ಯ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರಷ್ಟೇ, ಅವರ ಆಡಳಿತದಲ್ಲಿ ಗಂಭಿರತೆಯೇ ಇಲ್ಲ’ ಎಂದು ಟೀಕಿಸಿದರು.

Recent Articles

spot_img

Related Stories

Share via
Copy link