ಒಂದೇ ಪಂದ್ಯದಲ್ಲಿ 60 ಸಾವಿರಕ್ಕೂ ಹೆಚ್ಚು ಎದುರಾಳಿಗಳ ಸೋಲಿಸಿದ ವಿಶ್ವನಾಥನ್‌ ಆನಂದ್‌!

ನವದೆಹಲಿ: 

    ವಿಶ್ವನಾಥನ್‌ ಆನಂದ್‌ ಚೆಸ್‌ ಆಟದ ಬಹುದೊಡ್ಡ ಪ್ರತಿಭೆ. ತನ್ನ ಚಾಣಾಕ್ಷತನದಿಂದ ಹಲವು ಪಂದ್ಯಾಟಗಳಲ್ಲಿ ಗೆಲುವಿನ ನಗು ಬೀರಿದ ಅಪ್ರತಿಮ ಕ್ರೀಡಾ ಸಾಧಕ. ಇವರ ಸಾಧನೆ ಪಟ್ಟಿಗೆ ಮತ್ತೊಂದು ಗರಿ ಸೇರಿದೆ. ಆನ್‌ಲೈನ್‌ ಮೂಲಕ ನಡೆದ ಒಂದೇ ಚೆಸ್‌ ಪಂದ್ಯದಲ್ಲಿ ಬರೋಬ್ಬರಿ 60,000ಕ್ಕೂ ಹೆಚ್ಚು ಪ್ರತಿಸ್ಪರ್ಧಿಗಳನ್ನು ಸೋಲಿಸಿ ಗಮನ ಸೆಳೆದಿದ್ದಾರೆ.

   ವಿಶ್ವದ ಅತಿದೊಡ್ಡ ಚೆಸ್ ಸಂಸ್ಥೆಗಳಲ್ಲಿ ಒಂದಾದ ಚೆಸ್‌ ಡಾಟ್‌ ಕಾಮ್‌, ‘ವಿಶಿ ಮತ್ತು ವಿಶ್ವ’ ಹೆಸರಲ್ಲಿ ಈ ವಿಶೇಷ ಪಂದ್ಯ ಆಯೋಜಿಸಿತ್ತು. ಸುಮಾರು 60 ಸಾವಿರಕ್ಕೂ ಹೆಚ್ಚು ಚೆಸ್‌ ಪಟುಗಳು ಸ್ಪರ್ಧೆಗೆ ಹೆಸರು ನೋಂದಾಯಿಸಿದ್ದರು. ಬಿಳಿ ಕಾಯಿಯೊಂದಿಗೆ ಕಣಕ್ಕಿಳಿದಿದ್ದ ವಿಶ್ವನಾಥನ್‌ ಅವರು ಕಪ್ಪು ಕಾಯಿಯೊಂದಿಗೆ ಆಡಿದ್ದ ಪ್ರತಿಸ್ಪರ್ಧಿಗಳೆಲ್ಲರನ್ನು ಮಣಿಸಿ ಈ ದಾಖಲೆ ಬರೆದಿದ್ದಾರೆ. ಎಲ್ಲಾ ಸ್ಪರ್ಧಿಗಳಿಗೂ ಪ್ರತಿ ದಿನಕ್ಕೆ ಒಂದು ಬಾರಿ ತಮ್ಮ ಕಾಯಿ ಚಲಾಯಿಸಲು ಅವಕಾಶ ನೀಡಲಾಗಿತ್ತು. ವಿಶ್ವನಾಥನ್‌ ಅವರು 24 ದಿನಗಳ, 24 ಮೂವ್‌ಗಳಲ್ಲಿ ಎಲ್ಲಾ ಪ್ರತಿಸ್ಪರ್ಧಿಗಳನ್ನು ಸೋಲಿಸಿದ್ದಾರೆ.

   1999ರಲ್ಲಿ ರಷ್ಯಾದ ಗ್ಯಾರಿ ಕ್ಯಾಸ್ಪರೊವ್‌ ವಿಶ್ವದೆಲ್ಲೆಡೆಯ 50 ಸಾವಿರ ಪ್ರತಿಸ್ಪರ್ಧಿಗಳನ್ನು ಇದೇ ರೀತಿ 4 ತಿಂಗಳಲ್ಲಿ, 62 ಮೂವ್‌ಗಳಲ್ಲಿ ಸೋಲಿಸಿದ್ದರು. ಆ ಪಂದ್ಯದ 25ನೇ ವಾರ್ಷಿಕೋತ್ಸವ ಅಂಗವಾಗಿ ‘ವಿಶಿ ಮತ್ತು ವಿಶ್ವ’ ಪಂದ್ಯ ಆಯೋಜಿಸಲಾಗಿತ್ತು. 

   ಸುಮಾರು ಮೂರು ದಶಕಗಳ ಕಾಲ ಅಂತಾರಾಷ್ಟ್ರೀಯ ಮಟ್ಟದ ಚೆಸ್‌ ಪಂದ್ಯಾಟದಲ್ಲಿ ಮಿಂಚಿ, ವಿಶ್ವ ಭೂಪಟದಲ್ಲಿ ಭಾರತೀಯ ಚೆಸ್‌ಗೆ ವಿಶೇಷ ಸ್ಥಾನ ಕಲ್ಪಿಸಿಕೊಡುವಲ್ಲಿ ಆನಂದ್‌ ಅವರ ಪಾತ್ರ ಅಗಾಧ. ಒಟ್ಟು ಆರು ಬಾರಿ ನಡೆದಿರುವ ವಿಶ್ವ ಚಾಂಪಿಯನ್‌ ಚೆಸ್‌ ಪಂದ್ಯಾಟದಲ್ಲಿ 5 ಬಾರಿ ಆನಂದ್‌ ಚಾಂಪಿಯನ್‌ ಆಗಿದ್ದಾರೆ. 2007ರಲ್ಲಿ ಮುಡಿಗೇರಿಸಿಕೊಂಡ ವಿಶ್ವ ಗ್ರ್ಯಾಂಡ್‌ ಮಾಸ್ಟರ್‌ ಎಂಬ ಪಟ್ಟವನ್ನು 15 ತಿಂಗಳುಗಳ ಕಾಲ ಕಾಯ್ದುಕೊಂಡಿದ್ದರು. 2008ರಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 8 ವರ್ಷಗಳ ಬಳಿಕ ಸೋಲುಂಡಿದ್ದರು.

   ಭಾರತದಲ್ಲಿ ಹಲವು ನಿಪುಣ ಚೆಸ್‌ ಆಟಗಾರರನ್ನು ಹುಟ್ಟು ಹಾಕಿದ ಕೀರ್ತಿ ಆನಂದ್‌ಗೆ ಸಲ್ಲುತ್ತದೆ. ಕ್ರೀಡಾ ಕ್ಷೇತ್ರಕ್ಕೆ ಆನಂದ್‌ ಸಲ್ಲಿಸಿದ ಸೇವೆಯನ್ನು ಗಮನಿಸಿದ ಭಾರತ ಸರಕಾರ 2007ರಲ್ಲಿ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕರಿಸಿ ಗೌರವಿಸಿತ್ತು. 1991-92ರಲ್ಲಿ 1991-92ರಲ್ಲಿ ರಾಜೀವ್‌ ಗಾಂಧಿ ಖೇಲ್‌ ಪ್ರಶಸ್ತಿಯೂ ಇವರಿಗೆ ಸಂದಿತ್ತು.