ಪ್ಯಾರಿಸ್:
ಸೋಮವಾರ ಫ್ರಾನ್ಸ್ ನಲ್ಲಿ ರಾಜಕೀಯ ಬಿಕ್ಕಟ್ಟು ಭುಗಿಲೆದ್ದಿದೆ. ಪ್ರಧಾನಿ ಫ್ರಾಂಕೋಯಿಸ್ ಬೇರೂ ಅವರು ಸಂಸತ್ತಿನಲ್ಲಿ ಅವಿಶ್ವಾಸ ಮತವನ್ನು ಕಳೆದುಕೊಂಡ ಕಾರಣ ಅವರ ಸರ್ಕಾರ ಪತನವಾಗಿದೆ. ಇದರೊಂದಿಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ದೊಡ್ಡ ರಾಜಕೀಯ ಹಿನ್ನಡೆಯಾಗಿದೆ. ಪ್ರಧಾನಿಯಾಗಿ ನೇಮಕಗೊಂಡ ಕೇವಲ ಎಂಟೇ ತಿಂಗಳಲ್ಲಿ ಬೇರೂ ಅವರನ್ನು ಪದಚ್ಯುತಗೊಳಿಸಲಾಗಿದೆ.
ಬೇರೂ ಅವರಿಗೆ 364-194 ಮತಗಳ ಅಂತರದಿಂದ ಸೋಲಾಗಿದೆ. ಇದರೊಂದಿಗೆ ಫ್ರಾನ್ಸ್ ಕೇವಲ 12 ತಿಂಗಳಲ್ಲಿ ನಾಲ್ಕನೇ ಪ್ರಧಾನಿಯನ್ನು ಪಡೆಯುವ ಸಾಧ್ಯತೆಯಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಂದ ನೇಮಕಗೊಂಡಿದ್ದ ಬೇರೂ ಅವಿಶ್ವಾಸ ನಿರ್ಣಯದಲ್ಲಿ 364-194 ಮತಗಳ ಪ್ರಚಂಡ ಬಹುಮತದೊಂದಿಗೆ ಸೋತರು.
ಫ್ರಾನ್ಸ್ ಎದುರಿಸುತ್ತಿರುವ ಆರ್ಥಿಕ ಒತ್ತಡದ ಬಗ್ಗೆ ಬೇರೂ ಸ್ವತಃ ಅವಿಶ್ವಾಸ ನಿರ್ಣಯಕ್ಕೆ ಕರೆ ನೀಡಿದ್ದರು. ಅವಿಶ್ವಾಸ ಮತಕ್ಕೆ ಮೊದಲು, ಫ್ರಾನ್ಸ್ ನ ಸಾಲಗಳನ್ನು ನಿಗ್ರಹಿಸುವ ತನ್ನ ಯೋಜನೆಗಳನ್ನು ಬೆಂಬಲಿಸುವಂತೆ ಅವರು ಶಾಸಕರನ್ನು ಒತ್ತಾಯಿಸಿದ್ದರು. ಸಾಲ ನಮ್ಮನ್ನು ಮುಳುಗಿಸುತ್ತಿದೆ ಎಂದು ಅವರು ಹೇಳಿದರು. ಫ್ರೆಂಚ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾಡಿದ ಭಾಷಣದಲ್ಲಿ, ಯುರೋಪಿನ ಎರಡನೇ ಅತಿದೊಡ್ಡ ಆರ್ಥಿಕತೆಯಾದ ಫ್ರಾನ್ಸ್ ಮೇಲಿನ ಸಾಲಗಳು ಬೆದರಿಕೆ ಹಾಕುತ್ತಿವೆ ಮತ್ತು ದೇಶವನ್ನು ವಿದೇಶಿ ಸಾಲಗಾರರಿಗೆ ಗುರಿಯಾಗುವಂತೆ ಮಾಡುತ್ತಿದೆ ಎಂದು ಹೇಳಿದ್ದರು.
ಮಂಗಳವಾರ ಬೆಳಿಗ್ಗೆ ಬೇರೂ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸುವ ನಿರೀಕ್ಷೆಯಿದೆ.
