ಒಕ್ಕಲಿಗ ಸಮುದಾಯ ನನಗೆ ಬೆನ್ನೆಲುಬಾಗಿದೆ : ಡಾ.ಜಿ.ಪರಮೇಶ್ವರ್

ಕೊರಟಗೆರೆ :

     ಕೃಷಿಯನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಒಕ್ಕಲಿಗ ಸಮುದಾಯ ರಾಜ್ಯದ ಬೆಳವಣಿಗೆಗೆ ತನ್ನದೆ ಆದ ಶ್ರಮ ಕೊಡುಗೆಯನ್ನು ನೀಡಿದ್ದು ನನ್ನ ರಾಜಕೀಯ ಜೀವನದ ಉನ್ನತಿಗೆ ಈ ಸಮಾಜ ಸದಾ ಬೆನ್ನೆಲುಬಾಗಿ ನಿಂತಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು. ಅವರು ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ನಡೆದ ಡಾ.ಜಿ.ಪರಮೇಶ್ವರ ಬೆಂಬಲಿತ ಒಕ್ಕಲಿಗ ಮುಖಂಡರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

     ಕರ್ನಾಟಕದಲ್ಲಿ ಒಕ್ಕಲಿಗ ಜನಾಂಗದ ಮಹನೀಯರು ಮತ್ತು ಮುಖ್ಯಮಂತ್ರಿಗಳು ರಾಜ್ಯದ ಅಭಿವೃದ್ಧಿಗೆ ವಿವಿಧ ರೀತಿಯಲ್ಲಿ ಶ್ರಮಿಸಿದ್ದಾರೆ. 1989ರಲ್ಲಿ ನನ್ನ ರಾಜಕೀಯ ಜೀವನ ಮಧುಗಿರಿ ಕ್ಷೇತ್ರದಲ್ಲಿ ಪ್ರಾರಂಭವಾದ ಕಾಲದಲ್ಲಿ ನನ್ನ ಗೆಲುವಿಗೆ ಒಕ್ಕಲಿಗ ಸಮುದಾಯ ಬೆನ್ನೆಲುಬಾಗಿ ನಿಂತಿತ್ತು.

    ಇವರೊಂದಿಗೆ ಇತರ ಎಲ್ಲಾ ಸಮುದಾಯಗಳು ನನಗೆ ಶಕ್ತಿ ನೀಡಿದವು. ಅದೇ ರೀತಿ ಕೊರಟಗೆರೆ ಕ್ಷೇತ್ರದ ಜನತೆ 2008 ರಿಂದ ಇಲ್ಲಿಯವರೆಗೆ ಬಹಳ ಪ್ರೀತಿಯಿಂದ ಕಂಡಿದ್ದಾರೆ. ಈ ಕ್ಷೇತ್ರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಬಹುದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದೇನೆ. ನನ್ನ ಪಕ್ಷನಿಷ್ಠೆಗೆ ಮೆಚ್ಚಿ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ 8 ವರ್ಷಗಳ ಕಾಲ ನನ್ನನ್ನು ಕೆಪಿಸಿಸಿ ಅಧ್ಯಕ್ಷನನ್ನಾಗಿ ಮಾಡಿದ್ದರು ಹಾಗೂ ರಾಜ್ಯದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದೆ. ಇಂತಹ ಶಕ್ತಿ ನೀಡಿದ್ದು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಮಹಾಜನತೆ. ಇಂತಹ ಸಂದರ್ಭದಲ್ಲಿ ಕ್ಷೇತ್ರದ ಬಹುದೊಡ್ಡ ಒಕ್ಕಲಿಗ ಸಮುದಾಯ ನನಗೆ ಶಕ್ತಿಯಾಗಿ ನಿಂತಿರುವುದು ಆನೆಬಲ ಬಂದಂತಾಗಿದೆ ಎಂದರು.

ಈ ಬಾರಿಯ ಚುನಾವಣೆಯಲ್ಲಿ ಗೆದ್ದೇ ಗೆಲ್ಲುವ ಹಠಕ್ಕೆ ಬಿದ್ದಿದ್ದೇನೆ :

     ಈ ಬಾರಿಯ ವಿಧಾನಸಭಾ ಚುನಾವಣೆಗೆ ಈ ಕ್ಷೇತ್ರವನ್ನು ಬದಲಿಸುವಂತೆ ಹಲವರು ನನಗೆ ಸಲಹೆ ನೀಡಿದರು. ಆದರೆ ನಾನು ನನ್ನ ಕರ್ಮಭೂಮಿ ಕೊರಟಗೆರೆ ಕ್ಷೇತ್ರದಲ್ಲೆ ನಿಂತು ಗೆಲ್ಲುವುದಾಗಿ ಹಠಕ್ಕೆ ಬಿದ್ದಿದ್ದೇನೆ. ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ 5 ವರ್ಷಗಳಲ್ಲಿ 2528 ಕೋಟಿ ರೂ.ಗಳ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ.

    ಅದರ ಕೈಪಿಡಿಯನ್ನು ಪುಸ್ತಕದ ಮುಖಾಂತರ ಮನೆಮನೆಗೆ ತಲುಪಿಸುತ್ತಿದ್ದೇನೆ. 5 ವರ್ಷಗಳಲ್ಲಿ ಕ್ಷೇತ್ರದ ಜನರ ಆರೋಗ್ಯ, ವಿದ್ಯಾಭ್ಯಾಸ ಸೇರಿದಂತೆ ಇತರ ಸಹಾಯಗಳಿಗೆ ವೈಯಕ್ತಿಕವಾಗಿ ಸ್ಪಂದಿಸಿದ್ದೇನೆ. ಈ ಸಭೆಯಲ್ಲಿ ಒಕ್ಕಲಿಗ ಸಮುದಾಯ ಸೇರಿದಂತೆ ಕ್ಷೇತ್ರದ ಎಲ್ಲಾ ಸಮುದಾಯಗಳು ನನ್ನ ಬೆನ್ನಹಿಂದೆ ನಿಂತಿದ್ದು, ಯಾರೆ ಬಂದರೂ ತಲೆಕಡಿಸಿಕೊಳ್ಳುವುದಿಲ್ಲ. ಈ ಬಾರಿಯೂ ಜಯ ನನ್ನದೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಒಡಕಿಲ್ಲ :

    ರಾಜ್ಯ ಕಾಂಗ್ರೆಸ್ ನಾಯಕರುಗಳಲ್ಲಿ ಯಾವುದೆ ಭಿನ್ನಾಭಿಪ್ರಾಯವಿಲ್ಲ. ಆದರೆ ವಿರೋಧ ಪಕ್ಷದವರು ಅವರ ಉಳುಕುಗಳನ್ನು ಒಳಜಗಳಗಳನ್ನು ಮುಚ್ಚಿಕೊಳ್ಳಲು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ, ಕಾಂಗ್ರೆಸ್ ಪಕ್ಷ ಡಿ.ಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ, ಸಿದ್ದರಾಮಯ್ಯನವರ ನೇತೃತ್ವದಲ್ಲಿ ಬಹಳ ಸದೃಢವಾಗಿದೆ, 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ಜನರಿಗೆ ನಮ್ಮ ವಾಗ್ದಾನಗಳಾದ ಪ್ರತಿ ತಲೆಗೆ 10 ಕೆ.ಜಿ ಅಕ್ಕಿ, 200 ಯೂನಿಟ್ ವಿದ್ಯುತ್ ಹಾಗೂ ಕುಟುಂಬದ ಹಿರಿಯ ಗೃಹಿಣಿಗೆ ತಿಂಗಳಿಗೆ 2000 ರೂ.ಗಳು ನೀಡುವುದು ಖಚಿತ ಎಂದರು.

ಹುಣಸೆ ಹಣ್ಣಿಗೆ ಬೆಂಬಲ ಬೆಲೆಗೆ ಹಾಗೂ ಮಂಡಳಿ ರಚನೆಗೆ ಒತ್ತಾಯ :

   ಗ್ರಾಮೀಣ ಪ್ರದೇಶದಲ್ಲಿ ರೈತಾಪಿ ವರ್ಗ ಹೆಚ್ಚಾಗಿ ಹುಣಸೆ ಬೇಸಾಯವನ್ನ ಅವಲಂಬಿತವಾಗಿದ್ದು, ಹುಣಸೆ ಹಣ್ಣಿನ ಬೆಲೆ ನೆಲ ಕಚ್ಚಿದೆ, ರೈತಾಪಿ ವರ್ಗಕ್ಕೆ ಇದರಿಂದ ವರ್ಗ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದು, ದಯಮಾಡಿ ಹುಣಸೆಹಣ್ಣಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು. ಜೊತೆಗೆ ಹುಣಸೆ ಬೆಳೆ ಹೆಚ್ಚಾಗಿರುವುದರಿಂದ ಅದಕ್ಕೆ ಪ್ರತ್ಯೇಕವಾದಂತಹ ಮಂಡಳಿ ತೆರೆಯಲು ಸರ್ಕಾರ ಅವಕಾಶ ಕಲ್ಪಿಸಿ ಕೊಡಬೇಕು ಎಂದು ಮುರಳಿಧರ ಹಾಲಪ್ಪ ಒತ್ತಾಯಿಸಿದರು.

ಒಕ್ಕಲಿಗ ನಿಗಮ ಮಂಡಲಿಗೆ ಹಣಕಾಸಿನ ಕೊರತೆ :

     ರಾಜ್ಯ ಸರ್ಕಾರ ಒಕ್ಕಲಿಗ ಸಮುದಾಯಕ್ಕೆ ನಿಗಮ ಮಂಡಳಿ ಸ್ಥಾಪಿಸಿ 500 ಕೋಟಿ ಅನುದಾನ ಬಿಡುಗಡೆಗೊಳಿಸಿದೆ ಎಂದು ಹೇಳಿದೆ. ಆದರೆ ವಾಸ್ತವವಾಗಿ ಹಣಕಾಸು ಒದಗಿಸಿರುವುದು ಕೇವಲ 88 ಕೋಟಿ ಮಾತ್ರ, ದಯಮಾಡಿ ಮುಂದಿನ ದಿನಗಳಲ್ಲಿ 500 ಕೋಟಿ ರೂ. ಬಿಡುಗಡೆಗೊಳಿಸಿ ಸಮುದಾಯದ ಅಭಿವೃದ್ಧಿಗೆ ಸಹಕರಿಸಬೇಕು.

    1989ರಿಂದಲೂ ಒಕ್ಕಲಿಗ ಸಮುದಾಯ ಡಾ. ಜಿ ಪರಮೇಶ್ವರ್ ಅವರನ್ನ ಕೈ ಹಿಡಿದಿದೆ, ನಮ್ಮ ಸಮುದಾಯ ಬೆಂಬಲಕ್ಕೆ ನಿಂತಿದೆ. ಅವರು ರಾಜ್ಯ ರಾಜಕಾರಣದ ಚುಕ್ಕಾಣಿ ಹಿಡಿಯುವ ರಾಜಕಾರಣ ಮಾಡ್ಲಿ, ನಾವು ಕ್ಷೇತ್ರದಲ್ಲಿ ಗೆಲ್ಲಿಸಿ ಕಳಿಸುತ್ತೇವೆ. ಪರಮೇಶ್ವರ ಅವರು ಮುಂದಿನ ದಿನಗಳಲ್ಲಿ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಸ್ಥಳೀಯ ರೈತರ ಕೈ ಹಿಡಿಯಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳ ಒಬಿಸಿ ಮೀಸಲಾತಿ ಗೊಂದಲ ನಿವಾರಿಸಬೇಕು. ಕೊರಟಗೆರೆ ಪಟ್ಟಣದಲ್ಲಿ ಒಕ್ಕಲಿಗ ಸಮುದಾಯಕ್ಕೆ ನಿವೇಶನ ಹಾಗೂ ಕಟ್ಟಡ ನಿರ್ಮಾಣಕ್ಕೆ ಹೆಚ್ಚು ಸಹಕಾರ ನೀಡಬೇಕು.

-ಮುರಳಿಧರ ಹಾಲಪ್ಪ, ಅಧ್ಯಕ್ಷರು, ಕೌಶಲ್ಯ ಅಭಿವೃದ್ಧಿ ಮಂಡಳಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap