ನವದೆಹಲಿ:
ವೋಟರ್ ಐಡಿ ದೃಢೀಕರಿಸಲು ಆಧಾರ್ ಸಂಖ್ಯೆಯನ್ನು ಸಲ್ಲಿಸುವುದು ಕಡ್ಡಾಯವಲ್ಲ ಎಂದು ಭಾರತೀಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.
ಇದೇ ವೇಳೆ ಮತದಾರರ ಪಟ್ಟಿ ನೋಂದಣಿ ನಮೂನೆಗಳಲ್ಲಿ ಸೂಕ್ತವಾದ “ಸ್ಪಷ್ಟೀಕರಣ” ಬದಲಾವಣೆಗಳನ್ನು ನೀಡುವುದನ್ನು ಸಹ ಪರಿಶೀಲಿಸುತ್ತಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಮತದಾರರ ನೋಂದಣಿ ನಿಯಮಗಳು 2022 ರ ನಿಯಮ 26-ಬಿ ಅಡಿಯಲ್ಲಿ ಆಧಾರ್ ಸಂಖ್ಯೆಯನ್ನು ಸಲ್ಲಿಸುವುದು ಕಡ್ಡಾಯವಲ್ಲ ಮತ್ತು ಆದ್ದರಿಂದ ಚುನಾವಣಾ ಆಯೋಗವು ಆ ಉದ್ದೇಶಕ್ಕಾಗಿ ಪರಿಚಯಿಸಲಾದ ನಮೂನೆಗಳಲ್ಲಿ ಸೂಕ್ತ ಸ್ಪಷ್ಟೀಕರಣ ಬದಲಾವಣೆಗಳನ್ನು ನೀಡಲು ಪರಿಶೀಲಿಸುತ್ತಿದೆ ಎಂದು ಇಸಿಐ ವಕೀಲರು ಸುಪ್ರೀಂ ಕೋರ್ಟ್ ಗೆ ಹೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠಕ್ಕೆ ಈ ಮಾಹಿತಿ ನೀಡಿದ್ದು, ಇಸಿಐ ವಕೀಲರು ಸಲ್ಲಿಸಿದ ಸಲ್ಲಿಕೆಗಳನ್ನು ದಾಖಲಿಸಿದ ಪೀಠ, ಹೊಸ ಮತದಾರರ ಮಾಹಿತಿಯ ದೃಢೀಕರಣಕ್ಕೆ ಸಂಬಂಧಿಸಿದ ನಮೂನೆಗಳಲ್ಲಿ ಆಧಾರ್ ವಿವರಗಳ ಅಗತ್ಯವನ್ನು ಪ್ರಶ್ನಿಸುವ ರಿಟ್ ಅರ್ಜಿಯನ್ನು ಕೋರ್ಟ್ ವಿಲೇವಾರಿ ಮಾಡಿದೆ.