ವಾಲ್ಮಿಕಿ ನಿಗಮ ಆಯ್ತು ಈಗ ವಕ್ಫ್‌ ಬೋರ್ಡ್‌ ನಲ್ಲೂ ಅಕ್ರಮದ ಹೊಗೆ …!

ಬೆಂಗಳೂರು:

     ವಾಲ್ಮೀಕಿ ನಿಗಮದ ಹಗರಣದಲ್ಲಿ 88 ರಿಂದ 187 ಕೋಟಿ ರೂ. ಅವ್ಯವಹಾರದ ಬೆನ್ನಲ್ಲೇ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ನಲ್ಲೂ ಅಕ್ರಮವಾಗಿ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಸುಮಾರು 4 ಕೋಟಿ ರೂ. ಹಣ ವರ್ಗಾವಣೆ ಸಂಬಂಧ ಮಾಜಿ ಸಿಇಒ ಝುಲ್ಫಿಕಾರುಲ್ಲಾ ವಿರುದ್ಧ ವಕ್ಫ್ ಮಂಡಳಿ ದೂರು ನೀಡಿದೆ.

    ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವ ಹಾಲಿ ಸಿಇಒ ಮೀರ್ ಅಹ್ಮದ್ ಅಬ್ಬಾಸ್, ಹಿಂದಿನ ಸಿಇಒ ರಾಜ್ಯದ ಬೊಕ್ಕಸಕ್ಕೆ ಒಟ್ಟು 8.03 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕರ್ನಾಟಕ ವಕ್ಸ್ ಮಂಡಳಿಯ ಗುಲ್ಬರ್ಗಾ ದರ್ಗಾಕ್ಕೆ ಸೇರಿದ ಆಸ್ತಿಯನ್ನು ಸರ್ಕಾರ ಒತ್ತುವರಿ ಮಾಡಿಕೊಂಡು ಮಂಡಳಿಗೆ 2.29 ಕೋಟಿ ಹಣವನ್ನು ನೀಡಿತ್ತು. ಜತೆಗೆ ವಕ್ಸ್ ಮಂಡಳಿಯಲ್ಲಿ ಮುಜರಾಯಿ ಕಡೆಯಿಂದ 1.79 ಕೋಟಿ ಹಣವು ಬಂದಿತ್ತು. ಈ ಒಟ್ಟು 4,00,45,465 ರೂ. ಹಣವು ಬೆನ್ಸೆನ್‌ ಟೌನ್‌ನ ಇಂಡಿಯನ್ ಬ್ಯಾಂಕ್‌ನ ಎಸ್.ಬಿ ಖಾತೆಗೆ ಜಮೆ ಮಾಡಲಾಗಿತ್ತು. ಆದರೆ ಈ ಹಣವನ್ನು 2016ರ ನವೆಂಬರ್‌ 26 ರಂದು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ವಿಜಯ ಬ್ಯಾಂಕ್‌ ನಲ್ಲಿರುವ ವಕ್ಫ್ ಮಂಡಳಿ ಹೆಸರಿನ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂದು ದೂರುದಾರರು ಹೇಳಿದ್ದಾರೆ.

    ಹಣ ವರ್ಗಾವಣೆ ಕುರಿತು ಝುಲ್ಫಿಕಾರುಲ್ಲಾರವರು ವಕ್ಸ್ ಸಂಸ್ಥೆಯ ಗಮನಕ್ಕೆ ತಂದಿಲ್ಲ. ಇದರಿಂದ 8,03,56,713.64 ರೂ.ಗಳಷ್ಟು ನಷ್ಟವಾಗಿದೆ. ಈ ಮೊತ್ತವನ್ನು ಸೂಕ್ತವಾಗಿ ಹೂಡಿಕೆ ಮಾಡಿದ್ದರೆ ಕಳೆದ ಎಂಟು ವರ್ಷಗಳಲ್ಲಿ 4,00,45,465 ರೂ.ಗಳ ಮೊತ್ತದ ಮೇಲೆ ಚಕ್ರಬಡ್ಡಿ ಜಮೆಯಾಗುತ್ತಿತ್ತು. ಮಾರ್ಚ್ 31, 2022 ರಂದು ಹಣ ದುರುಪಯೋಗದ ಬಗ್ಗೆ ಝುಲ್ಫಿಕಾರುಲ್ಲಾ ನೀಡಿದ ಉತ್ತರ ಅತೃಪ್ತಿಕರವಾಗಿದೆ ಎಂದು ಪರಿಗಣಿಸಲಾಗಿದೆ ಎಂದು ದೂರಿನಲ್ಲಿ ಅಬ್ಬಾಸ್ ತಿಳಿಸಿದ್ದಾರೆ.

   ಆದಾದ ಎರಡು ವರ್ಷಗಳ ನಂತರ, ಜೂನ್ 12, 2024 ರಂದು ಈ ವಿಷಯದ ಬಗ್ಗೆ ದೂರು ಸಲ್ಲಿಸಲು ಮಂಡಳಿಯು ನಿರ್ಧರಿಸಿತ್ತು. ಅದರ ಪ್ರಕಾರ ಜುಲೈ 6, 2024 ರಂದು ಪ್ರಕರಣವನ್ನು ದಾಖಲಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link