ಧಾರವಾಡ
ಕರ್ನಾಟಕದಲ್ಲಿ ಇದೀಗ ಎಲ್ಲ ಕಡೆಯಲ್ಲಿ ವಕ್ಫ್ ಆಸ್ತಿ ವಿಚಾರವೇ ಚರ್ಚೆಯಲ್ಲಿದೆ. ಇದುವರೆಗೂ ರೈತರ ಹೊಲ ಹಾಗೂ ಸಾರ್ವಜನಿಕ ಆಸ್ತಿಯಲ್ಲಿ ನಮೂದಾಗಿದ್ದ ವಕ್ಫ್ ಆಸ್ತಿ ಅನ್ನೋ ಪದ, ಇದೀಗ ಧಾರವಾಡದಲ್ಲಿ ಅರ್ಧ ಊರಿನ ಆಸ್ತಿಯಲ್ಲಿ ನಮೂದಾಗಿದೆ. ಇದರಿಂದಾಗಿ ಕಂಗೆಟ್ಟ ಗ್ರಾಮಸ್ಥರು ವಕ್ಫ್ ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಅರ್ಧ ಊರೇ ವಕ್ಫ್ ಆಸ್ತಿಯಂತೆ. ಕಳೆದ ವಾರವಷ್ಟೇ ಈ ಗ್ರಾಮದಲ್ಲಿನ ಅನೇಕ ರೈತರ ಜಮೀನುಗಳ ಪಹಣಿಯ 11 ನೇ ಕಲಂನಲ್ಲಿ ವಕ್ಫ್ ಆಸ್ತಿ ಅಂತಾ ದಾಖಲಾಗಿದ್ದು ಬೆಳಕಿಗೆ ಬಂದಿತ್ತು. ಇದೀಗ ಈ ಪ್ರಕರಣ ಮುಂದುವರೆದು ಗ್ರಾಮದ ಅರ್ಧ ಆಸ್ತಿಯೇ ವಕ್ಪ್ಗೆ ಸೇರಿದ್ದು ಅಂತಾ ದಾಖಲಾಗಿದೆ. ಇದೀಗ ಈ ಗ್ರಾಮದ ಅನೇಕ ಓಣಿಗಳು ವಕ್ಫ್ ಆಸ್ತಿಗೆ ಸೇರಿವೆ ಅಂತಾ ಗ್ರಾಮದ ಮುಸ್ಲಿಂ ಸಮುದಾಯಕ್ಕೆ ಸೇರಿದ ಭವನದ ಹೊರಗೆ ನೋಟಿಸ್ ಅಂಟಿಸಲಾಗಿದೆ.
ಆ ನೋಟಿಸ್ನಲ್ಲಿ ವಕ್ಫ್ ಆಸ್ತಿಯ ಗಡಿಯನ್ನು ನಮೂದಿಸಲಾಗಿದ್ದು, ಅದರ ಪ್ರಕಾರ ಅರ್ಧಕ್ಕರ್ಧ ಊರು ಆ ವ್ಯಾಪ್ತಿಯಲ್ಲಿ ಬರುತ್ತೆ. ಅಲ್ಲದೇ ಈ ನೋಟಿಸ್ನ್ನು ಇಂಗ್ಲಿಷ್ ಭಾಷೆಯಲ್ಲಿ ಮುದ್ರಿಸಲಾಗಿದ್ದು, ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ ಅನ್ನೋದು ಸ್ಥಳೀಯರ ಆರೋಪ. ಇದೇ ಕಾರಣಕ್ಕೆ ಇಂದು ಗ್ರಾಮದ ನೂರಾರು ಜನರು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕ್ ನೇತ್ರತ್ವದಲ್ಲಿ ಧಾರವಾಡ ನಗರದ ಸಾಧನಕೇರಿ ಬಡಾವಣೆಯಲ್ಲಿರುವ ಜಿಲ್ಲಾ ವಕ್ಫ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ವೇಳೆ ವಕ್ಫ್ ಅಧಿಕಾರಿ ತಾಜುದ್ದೀನ್ ಶೇಖ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಅಧಿಕಾರಿ ಏನೇನೋ ಹೇಳಲು ಯತ್ನಿಸಿದರೂ ಅದರಿಂದ ರೈತರು ಮತ್ತಷ್ಟು ಆಕ್ರೋಶಗೊಂಡರೇ ವಿನಃ ಅವರ ಸಿಟ್ಟು ಕಡಿಮೆಯಂತೂ ಆಗಲೇ ಇಲ್ಲ. ಇದರಲ್ಲಿ ತಮ್ಮ ಕೈವಾಡವೇನೂ ಇಲ್ಲ ಅಂತಾನೇ ವಾದಿಸಿದ ಅಧಿಕಾರಿ ತಾಜುದ್ದೀನ್ ಶೇಖ್, ಮುತಾಲಿಕ್ ಹಾಗೂ ರೈತರಿಂದ ಮತ್ತಷ್ಟು ಬೈಸಿಕೊಳ್ಳುವಂತಾಯಿತು. ಅಲ್ಲದೇ ಇಡೀ ಊರಿನ ಅರ್ಧ ಭಾಗದಷ್ಟು ಪ್ರದೇಶ ವಕ್ಫ್ ಆಸ್ತಿ ವ್ಯಾಪ್ತಿಯಲ್ಲಿ ಬರುತ್ತೆ ಅನ್ನುವಂಥ ನೋಟಿಸ್ ಅಂಟಿಸಿದ್ದು ಏಕೆ ಅನ್ನೋ ಪ್ರಶ್ನೆಗೆ ಅಧಿಕಾರಿ ಬಳಿ ಉತ್ತರವೇ ಇರಲಿಲ್ಲ.
ಇದರ ಹಿಂದೆ ದೊಡ್ಡ ಷಡ್ಯಂತ್ರವಿದ್ದು, ಕೂಡಲೇ ಈ ದಾಖಲೆಯನ್ನು ಬದಲಾಯಿಸುವಂತೆ ಜನರು ಆಗ್ರಹಿಸಿದರು. ಅಲ್ಲದೇ ಕಳೆದ ವಾರ ರೈತರೊಬ್ಬರ ಜಮೀನಿನ ಪಹಣಿಯಲ್ಲಿ ದಾಖಲಾಗಿದ್ದ ವಕ್ಫ್ ಆಸ್ತಿ ಅನ್ನೋದನ್ನು ಇದೀಗ ಅಧಿಕಾರಿಗಳು ತೆಗೆದು ಹಾಕಿರೋದು ಕೂಡ ಇಲ್ಲಿ ಪ್ರಸ್ತಾಪವಾಯಿತು.
ದಿನದಿಂದ ದಿನಕ್ಕೆ ಈ ವಕ್ಫ್ ಆಸ್ತಿ ದಾಖಲಾಗುತ್ತಿರುವ ಪ್ರಕರಣ ಹೊಸ ಹೊಸ ತಿರುವು ಪಡೆಯುತ್ತಿದೆ. ಇದರೊಂದಿಗೆ ಅನೇಕ ಕಡೆಗಳಲ್ಲಿ ಮುಸ್ಲಿಮರ ಆಸ್ತಿಗಳ ದಾಖಲೆಯಲ್ಲಿಯೂ ಇದೇ ರೀತಿ ನಮೂದಾಗಿರೋದು ಕೂಡ ಅಧಿಕಾರಿಗಳಿಗೆ ದೊಡ್ಡ ತಲೆನೋವು ತಂದಿದೆ. ಒಟ್ಟಿನಲ್ಲಿ ಈ ಪ್ರಕರಣಗಳ ಹಿಂದೆ ಯಾರಿದ್ದಾರೆ ಅನ್ನೋದು ಇದೀಗ ಸಾಕಷ್ಟು ಕುತೂಹಲ ಸೃಷ್ಟಿಸಿದ್ದಂತೂ ಸತ್ಯ.
ಇದೇ ರೀತಿಯಾಗಿ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಉಡಬಾಳ ಗ್ರಾಮದ ನೂರಕ್ಕೂ ಹೆಚ್ಚು ಮನೆಗಳು ಈಗ ವಕ್ಪ್ ಬೋರ್ಡ್ ಆಸ್ತಿ ಪಾಲಾಗಿದೆ. ರೈತನ ಜಮೀನು ಪಕ್ಕದಲ್ಲಿರುವ ಗ್ರಾಮದ ನೂರಕ್ಕೂ ಹೆಚ್ಚು ಮನೆಗಳು ವಕ್ಪ್ ಹೆಸರಿಗೆ ನಮೂದಿಸಲಾಗಿದೆ. 2013 ರಲ್ಲಿ ಅರ್ಧದಷ್ಟು ಊರು 18.60 ಎಕರೆಗಳಷ್ಟು ಜಮೀನು ವಕ್ಪ್ ಪಾಲಾಗಿದೆ.
ಕೃಷ್ಣ ಮೂರ್ತಿ ಎಂಬುವ ರೈತನ 18.60 ಎಕರೆಯಷ್ಟು ಫಲವತ್ತಾದ ಜಮೀನು ವಕ್ಫ್ ಬೋರ್ಡ್ ಪಾಲಾಗಿದೆ. 11 ವರ್ಷದಿಂದಾ ಪಹಣಿಯಲ್ಲಿನ ವಕ್ಫ್ ಬೋರ್ಡ್ ಹೆಸರು ತೆಗೆಸಲು ರೈತ ಪರದಾಡುತ್ತಿದ್ದಾರೆ.