ಲಂಡನ್:
ವಾಷಿಂಗ್ಟನ್ ಸುಂದರ್ ಅವರ ಸ್ಪಿನ್ ಮೋಡಿಯ ಸಹಾಯದಿಂದ ಭಾರತ ತಂಡ, ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಮೇಲುಗೈ ಸಾಧಿಸಿದೆ. ಅಲ್ಲದೆ ಐದನೇ ದಿನವಾದ ಸೋಮವಾರ ಟೀಮ್ ಇಂಡಿಯಾ ಗೆಲುವಿನ ಸನಿಹದಲ್ಲಿದೆ. ಇಂಗ್ಲೆಂಡ್ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತ ತಂಡಕ್ಕೆ ಗೆಲ್ಲಲು 193 ರನ್‌ಗಳ ಸಾಧಾರಣ ಗುರಿಯನ್ನು ನೀಡಿದೆ. ಅದರಂತೆ ಗುರಿ ಹಿಂಬಾಲಿಸಿದ ಭಾರತ ತಂಡ ನಾಲ್ಕನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿದೆ. ಆ ಮೂಲಕ ಟೀಮ್ ಇಂಡಿಯಾಗೆ ಗೆಲ್ಲಲು ಐದನೇ ಹಾಗೂ ಪಂದ್ಯದ ಕೊನೆಯ ದಿನ 135 ರನ್‌ಗಳು ಅಗತ್ಯವಿದೆ. ಅಂದ ಹಾಗೆ ಭಾರತದ ಖಾತೆಯಲ್ಲಿ 6 ವಿಕೆಟ್‌ಗಳು ಬಾಕಿ ಇದ್ದು, ಒಂದು ದೊಡ್ಡ ಜೊತೆಯಾಟ ಬಂದರೆ, ಕೊನೆಯ ದಿನ ಮೊದಲನೇ ಸೆಷನ್‌ನಲ್ಲಿ ಪ್ರವಾಸಿಗರಿಗೆ ಗೆಲುವು ಒಲಿಯಲಿದೆ.
ಇಂಗ್ಲೆಂಡ್ ತಂಡ 192 ರನ್‌ಗಳಿಗೆ ಆಲೌಟ್ ಆದ ಬಳಿಕ ಗುರಿ ಹಿಂಬಾಲಿಸಿದ ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್, ಪ್ರಥಮ ಇನಿಂಗ್ಸ್‌ನಂತೆ ದ್ವಿತೀಯ ಇನಿಂಗ್ಸ್‌ನಲ್ಲಿಯೂ ಜೋಫ್ರಾ ಆರ್ಚರ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಕರುಣ್ ನಾಯರ್ ಅದೇ ರಾಗ, ಅದೇ ತಾಳ ಎಂಬಂತೆ 14 ರನ್ ಗಳಿಸಿದ ಬಳಿಕ ಔಟ್ ಆದರು. ನಂತರ ನಾಯಕ ಶುಭಮನ್ ಗಿಲ್ ಕೂಡ ವಿಫಲರಾದರು. ಕರುಣ್ ಹಾಗೂ ಗಿಲ್ ಅವರನ್ನು ಬ್ರೈಡೆನ್ ಕಾರ್ಸ್ ಔಟ್ ಮಾಡಿದರು.
ಪ್ರಥಮ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿ ಭಾರತಕ್ಕೆ ಆಸರೆಯಾಗಿದ್ದ ಕೆಎಲ್ ರಾಹುಲ್ ದ್ವಿತೀಯ ಇನಿಂಗ್ಸ್‌ನಲ್ಲಿ ಉತ್ತಮ ಆರಂಭವನ್ನು ಕಂಡಿದ್ದಾರೆ. ಅವರು ನಾಲ್ಕನೇ ದಿನದಾಟದ ಅಂತ್ಯಕ್ಕೆ ಅಜೇಯ 33 ರನ್ ಗಳಿಸಿ ಕೊನೆಯ ದಿನಕ್ಕೆ ಆಟವನ್ನು ಕಾಯ್ದುಕೊಂಡಿದ್ದಾರೆ. ನೈಟ್ ವಾಷ್‌ಮನ್ ಆಗಿ ಬಂದಿದ್ದ ಆಕಾಶ್ ದೀಪ್ ಅವರನ್ನು ಬೆನ್ ಸ್ಟೋಕ್ಸ್ ಕ್ಲೀನ್ ಬೌಲ್ಡ್ ಮಾಡಿದರು. ಕೆಎಲ್ ರಾಹುಲ್ ಅಜೇಯರಾಗು ಉಳಿದಿದ್ದು ಭಾರತಕ್ಕೆ ಭರವಸೆ ಮೂಡಿಸಿದ್ದಾರೆ. ಸೋಮವಾರ ರಿಷಭ್ ಪಂತ್ ಕ್ರೀಸ್‌ಗೆ ಆಗಮಿಸಲಿದ್ದಾರೆ. ಇದಾದ ಬಳಿಕ ರವೀಂದ್ರ ಜಡೇಜಾ, ನಿತೀಶ್ ರೆಡ್ಡಿ ಹಾಗೂ ವಾಷಿಂಗ್ಟನ್ ಸುಂದರ್ ಕೂಡ ಇದ್ದಾರೆ.ಹಾಗಾಗಿ ಭಾರತ ತಂಡ ಇನ್ನುಳಿದ 135 ರನ್‌ಗಳನ್ನು ಬೇಗ ಚೇಸ್ ಮಾಡಬಹುದು.
ಇದಕ್ಕೂ ಮುನ್ನ ಭಾನುವಾರ ಬೆಳಿಗ್ಗೆ ವಿಕೆಟ್ ನಷ್ಟವಿಲ್ಲದೆ 2 ರನ್‌ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ತಂಡಕ್ಕೆ ಆರಂಭದಲ್ಲಿ ಮೊಹಮ್ಮದ್ ಸಿರಾಜ್ ಆರಂಭಿಕ ಆಘಾತ ನೀಡಿದ್ದರು. ಬೆನ್ ಡಕೆಟ್ ಹಾಗೂ ಒಲ್ಲಿ ಪೋಪ್ ಅವರನ್ನು ಸಿರಾಜ್ ಔಟ್ ಮಾಡಿದ್ದರು. ನಂತರ ನಿತೀಶ್ ರೆಡ್ಡಿ, ಆರಂಭಿಕ ಬ್ಯಾಟ್ಸ್‌ಮನ್ ಝ್ಯಾಕ್ ಕ್ರಾವ್ಲಿ ಅವರನ್ನು ಔಟ್ ಮಾಡಿದ್ದರು. ಆ ಮೂಲಕ ಇಂಗ್ಲೆಂಡ್ 50 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ ಕೆಲ ಕಾಲ ಭಾರತದ ಬೌಲರ್‌ಗಳನ್ನು ಎದುರಿಸಿ 37 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಆದರೆ, ಹ್ಯಾರಿ ಬ್ರೂಕ್ (23) ಅವರನ್ನು ಆಕಾಶ್ ದೀಪ್ ಕ್ಲೀನ್ ಬೌಲ್ಡ್ ಮಾಡಿದ್ದರು. ಇಂಗ್ಲೆಂಡ್ ಕೀ ಬ್ಯಾಟರ್ ಜೋ ರೂಟ್ 40 ರನ್ ಗಳಿಸಿ ಉತ್ತಮ ಆರಂಭವನ್ನು ಪಡೆದಿದ್ದರೂ ವಾಷಿಂಗ್ಟನ್ ಸುಂದರ್ ತಮ್ಮ ಸ್ಪಿನ್ ಮೋಡಿಯಿಂದ ಔಟ್ ಮಾಡಿದರು.
ನಾಯಕ ಬೆನ್ ಸ್ಟೋಕ್ಸ್ 33 ರನ್ ಗಳಿಸಿ ಔಟ್ ಆದರು. ಭರವಸೆಯನ್ನು ಮೂಡಿಸಿದ್ದರು. ಪ್ರಥಮ ಇನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿದ್ದ ಜೇಮಿ ಸ್ಮಿತ್ ಕೂಡ ವಾಷಿಂಗ್ಟನ್ ಔಟ್ ಮಾಡಿದರು. ನಂತರ ಜಸ್‌ಪ್ರೀತ್ ಬುಮ್ರಾ, ಬ್ರೈಡೆನ್ ಕಾರ್ಸ್ ಹಾಗೂ ಕ್ರಿಸ್ ವೋಕ್ಸ್ ಅವರನ್ನು ಔಟ್ ಮಾಡಿದರು. ಕೊನೆಯಲ್ಲಿ ವಾಷಿಂಗ್ಟನ್ ಸುಂದರ್, ಶೋಯೆಬ್ ಬಶೀರ್ ಅವರನ್ನು ಔಟ್ ಮಾಡಿದರು. ಅಂತಿಮವಾಗಿ ಇಂಗ್ಲೆಂಡ್ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 62.1 ಓವರ್‌ಗಳಿಗೆ 192 ರನ್‌ಗಳಿಗೆ ಆಲ್‌ಔಟ್ ಆಯಿತು. ಭಾರತದ ಪರ ವಾಷಿಂಗ್ಟನ್ ಸುಂದರ್ 4 ವಿಕೆಟ್ ಕಿತ್ತಿದ್ದರೆ, ಮೊಹಮ್ಮದ್ ಸಿರಾಜ್ ಹಾಗೂ ಜಸ್‌ಪ್ರೀತ್ ಬುಮ್ರಾ ತಲಾ ಎರಡೆರಡು ವಿಕೆಟ್ ಕಿತ್ತಿದ್ದರು.
