ಹೊಡೆದ ಪೈಪ್‍ಲೈನ್ : ಪೋಲಾಗುತ್ತಿರುವ ನೀರು :ಕಣ್ಣಿದ್ದೂ ಕುರುಡಾದ ಪಾಲಿಕೆ

 ತುಮಕೂರು:

    `ನೀರು ಅತ್ಯಮೂಲ್ಯ., ಯಾರೂ ಪೋಲು ಮಾಡಬೇಡಿ’. `ಎಲ್ಲಿಯಾದರೂ ನೀರು ಪೋಲಾಗುತ್ತಿದ್ದರೆ ತಕ್ಷಣ ಪಾಲಿಕೆಯ ಸಿಬ್ಬಂದಿಯ ಗಮನಕ್ಕೆ ತನ್ನಿ’ ಎಂದು ಬೊಬ್ಬೆ ಹೊಡೆದುಕೊಳ್ಳುವ ನಗರಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಈ ದೃಶ್ಯ ಕಣ್ಣಿಗೆ ಬೀಳದಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

    ನಗರದ ಮಂಡಿಪೇಟೆಯ 2ನೆ ಮುಖ್ಯರಸ್ತೆಯ ಎಡಭಾಗದ ರಾಜು ಕಾಲುವೆಯ ಮೇಲೆ ಹಾದು ಹೋಗಿರುವ ಪೈಪ್‍ಲೈನ್ ಒಡೆದು ಹೋಗಿ ತಿಂಗಳುಗಳೇ ಕಳೆದಿವೆ. ಇದರಿಂದ ಒಂದು ವಾರ್ಡಿಗಾಗುವಷ್ಟು ನೀರು ದಿನಾಲು ಪೋಲಾಗಿ ಹೋಗುತ್ತಿದೆ. ಹೀಗೆ ನೀರು ಪೋಲಾಗುತ್ತಿದ್ದರೂ ಸಹ ಪೋಲಾಗುತ್ತಿರುವ ನೀರನ್ನು ಮಾತ್ರ ತಪ್ಪಿಸಿಲ್ಲ.
ಪತ್ರಿಕೆಯ ಮೂಲಕ ಎರಡು ಮೂರು ಬಾರಿ ಎಚ್ಚರಿಸಲಾಯಿತು. ನಗರ ಪಾಲಿಕೆ ಆಯುಕ್ತರ ಫೋನಿಗೆ ನೀರು ಪೋಲಾಗುತ್ತಿರುವ ದೃಶ್ಯವನ್ನು ವಾಟ್ಸಪ್ ಮಾಡಲಾಯಿತು.

   ಮತ್ತೊಂದು ವಿಪರ್ಯಾಸದ ಸಂಗತಿ ಏನೆಂದರೆ ಅನೇಕ ಮಂದಿ ಈ ನೀರನ್ನೇ ಶೌಚಕ್ಕೆ ಬಳಸುತ್ತಿರುವುದು. ಕೆಲವರು ಇಲ್ಲೇ ಮಲ, ಮೂತ್ರ ಮಾಡಿ ಹೋಗುತ್ತಿದ್ದಾರೆಂಬ ವ್ಯಾಪಕ ದೂರುಗಳು ಸಹ ಕೇಳಿಬರುತ್ತಿವೆ. ನೀರು ಪೋಲಾಗುತ್ತಿರುವ ಜಾಗದಲ್ಲಿ ಅನೇಕ ತ್ಯಾಜ್ಯವಸ್ತುಗಳನ್ನು ತಂದು ಸುರಿಯಾಗಿದೆ. ಇದರಿಂದ ದುರ್ವಾಸನೆ ಒಂದು ಕಡೆಯಾದರೆ, ನೀರು ನಿಂತಲ್ಲೇ ನಿಂತು ಸೊಳ್ಳೆಗಳ ಉತ್ಪತ್ತಿಗೆ ಹೇಳಿ ಮಾಡಿಸಿದ ಜಾಗವಾಗಿದೆ. ಇದರಿಂದ ಅನೇಕ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುವುದಲ್ಲವೆ? ವಾರ್ಡ್‍ಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಪರಿಜ್ಞಾನ ಆಯಾ ಪಾಲಿಕೆ ಸದಸ್ಯರಿಗೆ ಇರಬೇಕು. ಅವರೂ ಕೂಡಾ ಅಸಡ್ಡೆ ತೋರುತ್ತಿರುವುದು ಬೇಸರದ ಸಂತತಿ.

    ಇಂತಹ ಕೊಳಕು ಸ್ಥಳದಲ್ಲಿ ಹೋಗಿ ಹೇಗೆ ದುರಸ್ತಿ ಮಾಡುವುದು ಎಂಬ ಭಯವೋ ಇಲ್ಲವೆ ಹೋದರೆ ಹೋಗಲಿ ಬಿಡಿ ಎಂಬ ತಾತ್ಸಾರ ಮನೋಭಾವವೋ ತಿಳಿಯದಾಗಿದೆ. ನೀರಿಗಾಗಿ ನಗರದ ಜನರು ಪರಿತಪಿಸುತ್ತಿರುವ ಈ ದಿನಗಳಲ್ಲಿ ರಭಸವಾಗಿ ಪೋಲಾಗುತ್ತಿರುವ ನೀರನ್ನು ನಿಲ್ಲಿಸಿ ಜನರ ಉಪಯೋಗಕ್ಕೆ ಕೊಡಬಾರದೆ ಎಂಬುದು ಪ್ರಜ್ಞಾವಂತ ನಾಗರಿಕರ ಪ್ರಶ್ನೆಯಾಗಿದೆ. `ನೀರು ಪೋಲು ಮಾಡಬೇಡಿ ಎಂದು ಬೊಬ್ಬೆ ಹೊಡೆದರೆ ಸಾಲದು. ನೀರು ಪೋಲಾಗುತ್ತಿರುವ ಕಡೆ ತುರ್ತಾಗಿ ಹೋಗಿ ಅದನ್ನು ದುರಸ್ತಿಗೊಳಿಸಿ ನೀರನ್ನು ಸದ್ಬಳಕೆ ಮಾಡಿ ಎಂಬುದು ಸಾರ್ವಜನಿರಿಂದ ಕೇಳಿಬರುತ್ತಿರುವ ಮಾತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap