ಮೈಸೂರು:
ಅರಮನೆಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಯಾರು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ನಿಮಗೆ ಗೊತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೆಸರು ಹೇಳದೆ ಮಾರ್ಮಿಕವಾಗಿ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವೇಳೆ ಸರ್ಕಾರ ಬೆಂಗಳೂರು ಅರಮನೆ ಮೈದಾನದ ವಿಚಾರವಾಗಿ ಸರ್ಕಾರ ಸುಗ್ರೀವಾಜ್ಞೆಗೆ ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ. ನಮ್ಮನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಇದು ಹಲವು ವರ್ಷಗಳಿಂದ ನಡೆಯುತ್ತಿದೆ. ಕಾರಣ ಮಾತ್ರ ಗೊತ್ತಿಲ್ಲ. 40 ವರ್ಷಗಳಿಂದ ಹೋರಾಟ ಮಾಡಿದ್ದೇನೆ. ಇದನ್ನ ನಿಲ್ಲಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಬೆಂಗಳೂರು ಅರಮನೆ ಮೈದಾನದ ಭೂಮಿಗೆ ಟಿಡಿಆರ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್‌ನಲ್ಲಿ ವಿಚಾರಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದರು. ಈ ಸಂಪುಟ ಸಭೆಯಲ್ಲಿ ರಸ್ತೆ ಅಗಲೀಕರಣಕ್ಕೆ ಬೆಂಗಳೂರಿನ ಅರಮನೆಯ ಜಾಗವನ್ನು ಬಳಸಿಕೊಳ್ಳುವ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಲಾಗಿದೆ. ಇದಕ್ಕೆ ಮೈಸೂರು ಮಹಾರಾಣಿ ಪ್ರಮೋದಾದೇವಿ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ. ನಮಗೆ ಅನ್ಯಾಯವಾದರೆ ಕಾನೂನು ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ಬೆಂಗಳೂರು ಅರಮನೆ ಮೈದಾನದ ಭೂಮಿಗೆ ಟಿಡಿಆರ್ ನೀಡುವ ವಿಚಾರದಲ್ಲಿ ಮೈಸೂರು ರಾಜಮನೆತನ ಮತ್ತು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನಡುವೆ ಹಗ್ಗಜಗ್ಗಾಟ ನಡೆದಿತ್ತು. ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಬೇಕಾದ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ನಿರ್ಣಯ ಕೈಗೊಳ್ಳಲಾಗಿದೆ. ಬೆಂಗಳೂರು ಅರಮನೆ ರಸ್ತೆ ಅಗಲೀಕರಣ ಯೋಜನೆ ವಿಚಾರವಾಗಿ ಟಿಡಿಆರ್ ವಿಸ್ತರಣೆಗೆ ಸಂಪುಟ ನಿರಾಕರಿಸಿದೆ. ವಾರಸುದಾರರಿಗೆ ಟಿಡಿಆರ್ ನೀಡದಿರಲು ಸಚಿವ ಸಂಪುಟ ನಿರ್ಧರಿಸಿದೆ.
ಈ ಜಾಗಕ್ಕೆ ಸ್ಟೇ ಆರ್ಡರ್ ಇದೆ. ಇದಕ್ಕೆ ಸಂಬಂಧ ಪಟ್ಟ ದಾಖಲೆಗಳು ನನ್ನ ಬಳಿ ಇದೆ. ಸಂಪುಟ ಸಭೆಯ ತೀರ್ಮಾನ ನೋಡಿದ್ದೇನೆ. ಯಥಾಸ್ಥಿತಿ ಕಾಪಾಡುವಂತೆಯೂ ತಿಳಿಸಲಾಗಿದೆ. ಅರಮನೆ ಮೈದಾನದಲ್ಲಿ ಇಷ್ಟು ವರ್ಷ ನಡೆದ ಚಟುವಟಿಕೆಯ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಗೊತ್ತಿಲ್ಲದೆ ನಡೆದಿಲ್ಲ. ನಡೆದ ಕಾರ್ಯಕ್ರಮಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆ ಎಂದಿದ್ದಾರೆ.
2014ರಲ್ಲಿ ನೀಡಿದ ತೀರ್ಪಿನ ಪ್ರಕಾರ, ಆ ಜಾಗಕ್ಕೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಐವರು ಅಕ್ಕ–ತಂಗಿಯರು ಮಾಲೀಕರು. ರಸ್ತೆ ವಿಸ್ತರಣೆಗೆ ನಮ್ಮ ಜಾಗ ಬಳಸಿಕೊಂಡಿದ್ದಾರೆ. 14 ವರ್ಷದಿಂದ ಟಿಡಿಆರ್ (ಅಭಿವೃದ್ಧಿ ಹಕ್ಕು ವರ್ಗಾವಣೆ) ಕೊಟ್ಟಿಲ್ಲ ಎಂದರು.