ಫಿಲ್ಮ್ ಸಿಟಿ ನಿರ್ಮಿಸಲು ಸರ್ಕಾರ ಬದ್ಧ : ಸಿ ಎಂ ಸಿದ್ದರಾಮಯ್ಯ

ಬೆಂಗಳೂರು:

     ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದರು.

    ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಚಲನಚಿತ್ರ ನಿರ್ಮಾಪಕರಿಗೆ ಇಲ್ಲಿಯವರೆಗೆ ಸ್ವಂತ ಕಟ್ಟಡ ಇರಲಿಲ್ಲ. ಸ್ವಂತ ಕಟ್ಟಡ ನಿರ್ಮಾಣವಾಗಿದ್ದು, ಅದರ ಉದ್ಘಾಟನೆಯನ್ನು ನೆರವೇರಿಸಿದ್ದೇನೆ. ಪ್ರಧಾನಿ ಮೋದಿಯವರು ನಿನ್ನೆ ರಾತ್ರಿ 8 ಗಂಟೆಗೆ ಸಮಯ ಕೊಟ್ಟಿದ್ದರು. ಈ ಕಾರ್ಯಕ್ರಮಕ್ಕಾಗಿ ನಿನ್ನೆಯೇ ದೆಹಲಿಯಿಂದ ಹೊರಟು ಉದ್ಘಾಟನೆ ತಪ್ಪಿಸಬಾರದೆಂದು ಆಗಮಿಸಿದ್ದೇನೆ ಎಂದು ಹೇಳಿದರು.

    1972 ರಿಂದ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದವರು ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹಳ ಕಷ್ಟದ ದಿನಗಳಿದ್ದರೂ ಕೂಡ ಚಲನಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ನಿರ್ಮಾಪಕರಿಗೆ ಅಭಿನಂದಿಸುತ್ತೇನೆ. ಕಟ್ಟಡವನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ. ಆರ್ಥಿಕ ಸಹಾಯವನ್ನು ಸಂಘ ಕೇಳಿಯೇ ಇಲ್ಲ. ಸರ್ಕಾರದಿಂದ ಆರ್ಥಿಕ ಸಹಾಯ ಮಾಡಿಯೇ ಮಾಡುತ್ತದೆ ಎಂದು ತಿಳಿಸಿದರು. ಇದೇ ವೇಳೆ ಕನ್ನಡ ಒಟಿಟಿ ವೇದಿಕೆಗೆ ಕ್ರಮಕೈಗೊಳ್ಳಲಾಗುವುದು ಎಂದು ಚಿತ್ರ ನಿರ್ಮಾಪಕರಿಗೆ ಭರವಸೆ ನೀಡಿದರು.

    ನೆರೆಯ ತೆಲಂಗಾಣದ ಹೈದರಾಬಾದ್‌ನಲ್ಲಿ ಫಿಲಂ ಸಿಟಿ ಇದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಚಿತ್ರನಗರಿ ನಿರ್ಮಿಸಬೇಕೆಂಬುದು ಡಾ.ರಾಜ್‌ಕುಮಾರ್ ಅವರ ಕನಸಾಗಿತ್ತು. ಇದಕ್ಕಾಗಿ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.

    ಕನ್ನಡ ಚಲನಚಿತ್ರಗಳ ಬೆಳವಣಿಗೆಗೆ ಸರ್ಕಾರ ಮೊದಲಿನಿಂದಲೂ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಾ ಬಂದಿದೆ, ಮುಂದೆಯೂ ಮಾಡಲಿದೆ. ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣವನ್ನು ಪಿ.ಪಿ.ಪಿ ಮಾದರಿಯಲ್ಲಿ ಕೈಗೊಳ್ಳಲಿದ್ದು, ನೂರು ಎಕರೆಗೂ ಹೆಚ್ಚು ಜಮೀನು ಒದಗಿಸಲಾಗಿದೆ. ಚಿತ್ರನಗರಿ ಡಾ|| ರಾಜ್ ಕುಮಾರ್ ಅವರ ಕನಸಾಗಿತ್ತು, ಅದನ್ನು ನನಸಾಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap