ಬಿಜೆಪಿ ಅಧಿಕಾರಕ್ಕೆ ತರಲು ಸಂಕಲ್ಪ :ಬಿ.ಎಸ್.ಯಡಿಯೂರಪ್ಪ

ಬೆಂಗಳೂರು

   ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಸಂಕಲ್ಪ ಮಾಡಿದ್ದೇನೆ. ಆ ಕಾರ್ಯದಲ್ಲಿ ಯಶಸ್ಸು ಸಿಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.

   ಅವರು ಚಿಕ್ಕೋಡಿಯ ಬಳಿ ಅಂಕಲಿಯಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದರು. ಪಕ್ಷ ನನ್ನನ್ನು ಅತ್ಯಂತ ಗೌರವದಿಂದ ನಡೆಸಿಕೊಂಡಿದೆ. ಪಕ್ಷ ಮತ್ತು ನಾಯಕರಾದ ನರೇಂದ್ರ ಮೋದಿಜಿ ಅವರಿಗೆ ಗೌರವ ಸಮರ್ಪಿಸುವ ದೃಷ್ಟಿಯಿಂದ ಬಿಜೆಪಿಯನ್ನು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ. ರಾಜ್ಯದೆಲ್ಲೆಡೆ ಬಿಜೆಪಿ ಪರ ಅಲೆ ಇದೆ. ರಾಜ್ಯದಲ್ಲಿ ಕನಿಷ್ಠ 140 ಸೀಟು ಗೆದ್ದು ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

   ನಮ್ಮ ಯಾತ್ರೆಯಲ್ಲಿ ಉತ್ಸಾಹದಿಂದ ಜನರು ಸೇರುತ್ತಿದ್ದಾರೆ. ವಾತಾವರಣ ಬಿಜೆಪಿಗೆ ಅನುಕೂಲಕರವಾಗಿದೆ. ಪ್ರಧಾನಿ ನರೇಂದ್ರ ಮೋದಿಜಿ, ಅಮಿತ್ ಶಾ ಜೀ ಮತ್ತಿತರ ನಾಯಕರ ಭೇಟಿಯು ಬಿಜೆಪಿ ಬಲವನ್ನು ಹೆಚ್ಚಿಸಿದೆ ಎಂದು ತಿಳಿಸಿದರು.

   ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಬಿಜೆಪಿ ಸರಕಾರಗಳು ಕಿಸಾನ್ ಸಮ್ಮಾನ್ ಯೋಜನೆ, ಜನೌಷಧಿ ಮತ್ತಿತರ ಹಲವು ಯೋಜನೆಗಳನ್ನು ಜನಹಿತಕ್ಕಾಗಿ ಜಾರಿಗೊಳಿಸಿವೆ. ರಾಜ್ಯದಲ್ಲೂ ವಿದ್ಯಾನಿಧಿ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ ಎಂದು ವಿವರಿಸಿದರು.

   ಕಾಂಗ್ರೆಸ್ಸಿಗರು ಸುಳ್ಳಿನ ಸರದಾರರು ಎಂದು ಟೀಕಿಸಿದ ಅವರು, ಡಾ. ಅಂಬೇಡ್ಕರರಿಗೆ ಜೀವಂತ ಇದ್ದಾಗ ಮತ್ತು ಸತ್ತ ಬಳಿಕವೂ ಕಾಂಗ್ರೆಸ್ ಅವಮಾನ ಮಾಡಿತ್ತು. ಆದರೆ, ಬಿಜೆಪಿ, ಬಾಬಾ ಸಾಹೇಬರಿಗೆ ಗೌರವ ನೀಡಲು ಪಂಚತೀರ್ಥಗಳನ್ನು ಅಭಿವೃದ್ಧಿ ಪಡಿಸಿದೆ. ರಾಜ್ಯದಲ್ಲೂ ಅವರು ಭೇಟಿ ಕೊಟ್ಟ ಸ್ಥಳಗಳನ್ನು ಅಭಿವೃದ್ಧಿ ಪಡಿಸಲಿದೆ. ಮೀಸಲಾತಿ ವಿಚಾರದಲ್ಲೂ ಕಾಂಗ್ರೆಸ್ ಸುಳ್ಳು ಹೇಳುತ್ತ ಬಂದಿದೆ.

   ಆದರೆ, ನಾವು ನುಡಿದಂತೆ ನಡೆದಿದ್ದೇವೆ. ಬಿಜೆಪಿ ಸರಕಾರಗಳ ಜನಪರ ಕಾರ್ಯಗಳನ್ನು ಜನರಿಗೆ ತಿಳಿಸಿ ಬಿಜೆಪಿ ಸರಕಾರ ಮತ್ತೊಮ್ಮೆ ಬರುವಂತೆ ಶ್ರಮಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ಬಳಿಕ ವಿವಿಧೆಡೆ ರೋಡ್ ಷೋ ನಡೆಯಿತು.

   ಕೇಂದ್ರದಲ್ಲಿ ಮೋದಿಯವರ ಸಾಧನೆಯ ಹಾದಿಯಲ್ಲಿ ರಾಜ್ಯದ ಸಾಧನೆ ನೋಡಿದ ಜನತೆ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಸಂಕಲ್ಪ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

   ಚಿಕ್ಕೋಡಿ ಜಿಲ್ಲೆಯ ಅಂಕಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೋಟ್ಯಂತರ ರೂಪಾಯಿ ಅನುದಾನ ನೀಡುವ ಮೂಲಕ ಚಿಕ್ಕೋಡಿ ಸದಲಾಗ ಕ್ಷೇತ್ರದ ಅನೇಕ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಅತಿವೃಷ್ಟಿಯಲ್ಲಿ ಮನೆ ಕಳೆದಕೊಂಡ ಸಾವಿರಾರು ಫಲಾನುಭವಿಗಳಿಗೆ 5 ಲಕ್ಷ ಮನೆ ಕಟ್ಟಲು ನೀಡಲಾಗಿದೆ ಎಂದರು.

   ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ್ ಸವದಿ, ಸಚಿವೆ ಶಶಿಕಲಾ ಜೊಲ್ಲೆ, ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ, ಸಂಸದ ಅಣ್ಣ ಸಾಹೇಬ್ ಜೊಲ್ಲೆ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ರಾಜ್ಯ ವಕ್ತಾರ ಎಂ.ಬಿ.ಜಿರಲಿ, ಜಿಲ್ಲಾಧ್ಯಕ್ಷ ಡಾ. ರಾಜೇಶ್ ನೆರ್ಲಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ್ ಕೋರೆ, ಮಾಜಿ ಸಚಿವ ಶಶಿಕಾಂತ್ ನಾಯಕ್, ರಾಜ್ಯ ಕಾರ್ಯದರ್ಶಿ ಉಜ್ವಾಲಾ ಬಡವನಾಚೆ, ವಿಜಯ ಸಂಕಲ್ಪ ಯಾತ್ರೆಯ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ ಇದ್ದರು.‌

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap