ಕತಾರ್
ಕದನ ವಿರಾಮಕ್ಕೆ ಒಪ್ಪಂದಕ್ಕೆ ನಾವು ಹತ್ತಿರವಾಗುತ್ತಿದ್ದೇವೆ ಎಂದು ಹಮಾಸ್ ಬಂಡುಕೋರರ ನಾಯಕ ಇಸ್ಮಾಯಿಲ್ ಹನಿಯೆ ಮಂಗಳವಾರ ಟೆಲಿಗ್ರಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಪ್ಪಂದದ ಮಧ್ಯಸ್ಥಿಕೆಯನ್ನು ಕತಾರ್ ವಹಿಸಿದೆ. ಕತಾರ್‌ನಲ್ಲಿರುವ ಹಮಾಸ್ ರಾಜಕೀಯ ಕಚೇರಿಯಲ್ಲಿ ಹನಿಯೆ ಅವರು ಇದ್ದು, ಅಲ್ಲಿ ಬಿರುಸಿನ ಮಾತುಕತೆಗಳು ನಡೆಯುತ್ತಿವೆ.ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ರಾಕೆಟ್ ದಾಳಿ ಮಾಡಿ, ಹಮಾಸ್ ಬಂಡುಕೋರರು ಒತ್ತೆಯಾಳುಗಳಾಗಿ ಇರಿಸಿಕೊಂಡ 240 ಮಂದಿಯನ್ನು ಬಿಡುಗಡೆಗೊಳಿಸುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎನ್ನಲಾಗಿದೆ.
ವಿಶ್ವಾಸಾರ್ಹ ಮೂಲಗಳ ಪ್ರಕಾರ ಐದು ದಿನಗಳ ತಾತ್ಕಾಲಿಕ ಕದನ ವಿರಾಮ ಇರಲಿದ್ದು, ಭೂ ಅಥವಾ ವಾಯು ಮಾರ್ಗದ ಮೂಲಕ ಇಸ್ರೇಲ್ ದಾಳಿ ನಡೆಸುವಂತಿಲ್ಲ ಎನ್ನುವ ಷರತ್ತು ಇದೆ.
ಇದಕ್ಕೆ ಪ್ರತಿಯಾಗಿ ಒತ್ತೆಯಾಳಾಗಿರಿಸಿಕೊಂಡಿರುವವರ ಪೈಕಿ 50 ರಿಂದ 100 ಮಂದಿಯನ್ನು ಹಮಾಸ್ ಬಿಡುಗಡೆ ಮಾಡಬೇಕು. ಸೈನಿಕರನ್ನು ಹೊರತುಪಡಿಸಿ ಇಸ್ರೇಲ್ ಹಾಗೂ ವಿದೇಶಿ ನಾಗರಿಕರ ಬಿಡುಗಡೆ ಮಾಡುವ ಬಗ್ಗೆ ಒಪ್ಪಂದದಲ್ಲಿ ಷರತ್ತು ಇರುವ ಸಾಧ್ಯತೆಗಳಿವೆ.
ಪ್ರಸ್ತಾವಿತ ಒಪ್ಪಂದದಲ್ಲಿ, ಮಕ್ಕಳು ಮತ್ತು ಮಹಿಳೆಯರು ಸೇರಿ ಇಸ್ರೇಲ್ ಜೈಲಿನಲ್ಲಿರುವ 300 ಪ್ಯಾಲೆಸ್ಟೀನ್ ನಾಗರಿಕರನ್ನು ಬಿಡುಗಡೆ ಮಾಡಬೇಕು ಎನ್ನುವ ಷರತ್ತು ಇದೆ ಎಂದು ಹೇಳಲಾಗಿದೆ.
ಈ ಒಪ್ಪಂದ ಅಂತಿಮ ಹಂತದಲ್ಲಿ ಇದೆ ಎಂದು ಹೇಳಿರುವ ಅಮೆರಿಕವು ಹೆಚ್ಚಿನ ಮಾಹಿತಿ ನೀಡಿಲು ನಿರಾಕರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ